Advertisement

ನೂತನ ಮೈಲುಗಲ್ಲು; ಟೆಸ್ಟ್‌ “ಶತಕ”ದತ್ತ ಚೇತೇಶ್ವರ್‌ ಪೂಜಾರ

10:29 PM Feb 16, 2023 | Team Udayavani |

ಹೊಸದಿಲ್ಲಿ: ಭಾರತದ “ಟೆಸ್ಟ್‌ ಸ್ಪೆಷಲಿಸ್ಟ್‌’ ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯ ಎದುರಿನ ಹೊಸದಿಲ್ಲಿ ಪಂದ್ಯದ ವೇಳೆ ನೂತನ ಮೈಲುಗಲ್ಲೊಂದನ್ನು ನೆಡಲಿದ್ದಾರೆ. ಅಂದು ಅವರು ತಮ್ಮ ಟೆಸ್ಟ್‌ ಬಾಳ್ವೆಯ 100ನೇ ಪಂದ್ಯವಾಡಲು ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ “ಟೆಸ್ಟ್‌ ಶತಕ’ದ ಸಂಭ್ರಮ ಆಚರಿಸಿದ ಭಾರತದ 13ನೇ ಕ್ರಿಕೆಟಿಗನಾಗಲಿದ್ದಾರೆ.

Advertisement

ಕಾಕತಾಳೀಯವೆಂದರೆ, ಚೇತೇಶ್ವರ್‌ ಪೂಜಾರ ಆಸ್ಟ್ರೇಲಿಯ ವಿರುದ್ಧವೇ ಮೊದಲ ಟೆಸ್ಟ್‌ ಆಡಿದ್ದರು. ಅದು 2010ರ ಸರಣಿಯ ಬೆಂಗಳೂರು ಪಂದ್ಯವಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಲಭಿಸಿದ್ದು 5ನೇ ಕ್ರಮಾಂಕ. ಗಳಿಸಿದ ರನ್‌ ಕೇವಲ 4. ಆಗ ವನ್‌ಡೌನ್‌ನಲ್ಲಿ ಫಿಕ್ಸ್‌ ಆಗಿದ್ದ ಆಟಗಾರ ರಾಹುಲ್‌ ದ್ರಾವಿಡ್‌. ದ್ವಿತೀಯ ಸರದಿಯಲ್ಲಿ ದ್ರಾವಿಡ್‌ ಬದಲು ಪೂಜಾರ ಅವರನ್ನು 3ನೇ ಕ್ರಮಾಂಕದಲ್ಲಿ ಆಡಲಿಳಿಸಲಾಯಿತು. ಧೋನಿಯ ಈ ನಿರ್ಧಾರ ಯಶಸ್ವಿಯಾಯಿತು. ಪೂಜಾರ 89 ಎಸೆತಗಳಿಂದ 72 ರನ್‌ ಹೊಡೆದರು. 207 ರನ್‌ ಗುರಿ ಪಡೆದಿದ್ದ ಭಾರತಕ್ಕೆ ಪೂಜಾರ ಆಟ ಲಾಭದಾಯಕವಾಯಿತು.

ದ್ರಾವಿಡ್‌ ಉತ್ತರಾಧಿಕಾರಿ
ಆಗಲೇ ಪೂಜಾರ ಅವರನ್ನು ದ್ರಾವಿಡ್‌ ಉತ್ತರಾಧಿಕಾರಿ ಎಂದು ಬಿಂಬಿಸಲಾಯಿತು. ದ್ರಾವಿಡ್‌ ಮಟ್ಟಕ್ಕೇರದಿದ್ದರೂ ಪೂಜಾರ ಹೊಡಿಬಡಿ ಕಾಲಘಟ್ಟದ ಕ್ರಿಕೆಟ್‌ನಲ್ಲಿ ಟೆಸ್ಟ್‌ ಆಟಗಾರನಾಗಿಯೇ ಉಳಿದು ಬೆಳೆದರು. “ಟಿಪಿಕಲ್‌ ನ್ಯೂ ಏಜ್‌ ಕ್ರಿಕೆಟರ್‌’ ಎನಿಸಿಕೊಳ್ಳಲೇ ಇಲ್ಲ. ಆಮೆಗತಿಯ ಆಟದಿಂದ ತಂಡದಿಂದ ಬೇರ್ಪಡುವ ಸಂಕಟಕ್ಕೂ ಸಿಲುಕಿದರು. ಇಂಗ್ಲಿಷ್‌ ಕೌಂಟಿಯಲ್ಲಿ ರನ್‌ ಪ್ರವಾಹ ಹರಿಸಿದ ಬಳಿಕ ತಮ್ಮ ಬ್ಯಾಟಿಂಗ್‌ ಶೈಲಿಯನ್ನು ತುಸು ಬಿರುಸುಗೊಳಿಸಿದರು. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ತಮ್ಮ “ಫಾಸ್ಟೆಸ್ಟ್‌ ಸೆಂಚುರಿ’ ದಾಖಲಿಸಿದರು.

ಪೂಜಾರ 99 ಟೆಸ್ಟ್‌ಗಳಿಂದ 7,021 ರನ್‌ ಪೇರಿಸಿದ್ದಾರೆ. ಇದರಲ್ಲಿ 19 ಶತಕ, 34 ಅರ್ಧ ಶತಕಗಳು ಸೇರಿವೆ. ಆಸ್ಟ್ರೇಲಿಯ ವಿರುದ್ಧವೇ 21 ಟೆಸ್ಟ್‌ಗಳನ್ನಾಡಿ 52.77ರ ಸರಾಸರಿಯಲ್ಲಿ 1,900 ರನ್‌ ಬಾರಿಸಿದ್ದಾರೆ. 5 ಶತಕ, 10 ಅರ್ಧ ಶತಕ ಸೇರಿದೆ. 2018-19ರ ಆಸ್ಟ್ರೇಲಿಯ ಪ್ರವಾಸದ ವೇಳೆ 4 ಟೆಸ್ಟ್‌ಗಳಿಂದ 521 ರನ್‌ ಪೇರಿಸಿದ ಸಾಧನೆ ಪೂಜಾರ ಅವರದು. ಭಾರತ ಅಂದು ಆಸ್ಟ್ರೇಲಿಯ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಇದೀಗ ಹೊಸದಿಲ್ಲಿಯ “ಲ್ಯಾಂಡ್‌ಮಾರ್ಕ್‌ ಟೆಸ್ಟ್‌’ನಲ್ಲಿ ಪೂಜಾರ ಬ್ಯಾಟ್‌ನಿಂದ ಮೋಡಿಗೈಯುವರೇ ಎಂಬ ಕುತೂಹಲ ಕ್ರಿಕೆಟ್‌ ಪ್ರೇಮಿಗಳದ್ದು.

Advertisement

ಭಾರತದ 100 ಟೆಸ್ಟ್‌ ಸಾಧಕರು
ಆಟಗಾರ ಟೆಸ್ಟ್‌
ಸಚಿನ್‌ ತೆಂಡುಲ್ಕರ್‌ 200
ರಾಹುಲ್‌ ದ್ರಾವಿಡ್‌ 164
ವಿವಿಎಸ್‌ ಲಕ್ಷ್ಮಣ್‌ 134
ಅನಿಲ್‌ ಕುಂಬ್ಳೆ 132
ಕಪಿಲ್‌ದೇವ್‌ 131
ಸುನೀಲ್‌ ಗಾವಸ್ಕರ್‌ 125
ದಿಲೀಪ್‌ ವೆಂಗ್‌ಸರ್ಕಾರ್‌ 116
ಸೌರವ್‌ ಗಂಗೂಲಿ 113
ವಿರಾಟ್‌ ಕೊಹ್ಲಿ 105
ಇಶಾಂತ್‌ ಶರ್ಮ 105
ವೀರೇಂದ್ರ ಸೆಹವಾಗ್‌ 104
ಹರ್ಭಜನ್‌ ಸಿಂಗ್‌ 103

Advertisement

Udayavani is now on Telegram. Click here to join our channel and stay updated with the latest news.

Next