ಮೈಸೂರು: ವೃತ್ತಿ ಜತೆಗೆ ಪ್ರವೃತ್ತಿ ಬೆಳೆಸಿಕೊಂಡರೆ, ನಿವೃತ್ತಿ ಜೀವನ ಅರ್ಥಪೂರ್ಣವಾಗಿ ಕಳೆಯಬಹುದು ಎಂದು ಮಾಜಿ ಸಚಿವ ವಿಜಯಶಂಕರ್ ಹೇಳಿದರು.
ಜಯನಗರದ ನೇಗಿಲಯೋಗಿ ಮರುಳೇಶ್ವರ ಸೇವಾಭವನದಲ್ಲಿ ಬಿಜಿಎಸ್ ಒಕ್ಕಲಿಗ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ ಮತ್ತು ವಿಸ್ಮಯ ಪ್ರಕಾಶನ ಆಯೋಜಿಸಿದ್ದ ವಿಶ್ವ ಹಿರಿಯರ ದಿನ, ಹಿರಿಯ ನಾಗರಿಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಪ್ರೊ.ಜಿ.ಚಂದ್ರಶೇಖರ್ ರಚಿಸಿರುವ “ಇಳಿವಯಸ್ಸಿನ ಹಾದಿಯಲ್ಲಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಬಹುತೇಕ ಮಂದಿ ನಿವೃತ್ತಿ ಬಳಿಕ ಖನ್ನತೆಗೊಳಗಾಗುತ್ತಾರೆ.
ಹೀಗಾಗಿ ನಿವೃತ್ತಿ ಜೀವನವನ್ನು ಉತ್ತಮವಾಗಿ ಕಳೆಯಲು ಕೆಲವು ಸಿದ್ಧತೆ ಮಾಡಿಕೊಳ್ಳಬೇಕಿದೆ. ಇದರಲ್ಲಿ ಪ್ರವೃತ್ತಿಯೂ ಒಂದು. ವೃತ್ತಿಯ ಜತೆಗೆ ಪ್ರವೃತ್ತಿ ರೂಢಿಸಿಕೊಂಡಲ್ಲಿ, ನಿವೃತ್ತಿ ಬಳಿಕ ಪ್ರವೃತ್ತಿಯೇ ವೃತ್ತಿಯಾಗಲಿದೆ. ಇದರಿಂದ ನಿವೃತ್ತಿ ಜೀವನ ಉತ್ತಮವಾಗಿ ಕಳೆಯಬಹುದು ಎಂದರು.
ಪ್ರವೃತ್ತಿ ಕೈಹಿಡಿಯಿರಿ: ವ್ಯಕ್ತಿ 40 ವರ್ಷ ದಾಟಿದ ಬಳಿಕ ಪ್ರವೃತ್ತಿಯತ್ತ ಹೆಚ್ಚು ಗಮನ ಕೊಡಬೇಕು. ಇದರಿಂದ ನಿವೃತ್ತಿ ವೇಳೆಗೆ ಪ್ರವೃತ್ತಿ ಕೈಹಿಡಿಯುತ್ತದೆ. ಆರ್ಥಿಕ ಸ್ವಾವಲಂಬನೆ, ಶಾರೀರಿಕ ಸದೃಢತೆ, ಮಾನಸಿಕ ಸದೃಢತೆ, ಲೌಖೀಕ ಜೀವನ ಕುರಿತು ಆಸಕ್ತಿ ಮತ್ತು ಪ್ರವೃತ್ತಿ ಎಂಬ ಪಂಚಸೂತ್ರಗಳನ್ನು ಪಾಲಿಸಿದರೆ ಮಾತ್ರ ಹಿರಿಯ ನಾಗರಿಕರು ನೆಮ್ಮದಿ ಕಾಣುತ್ತಾರೆ.
ಈ ಹಿನ್ನೆಲೆಯಲ್ಲಿ ನಿವೃತ್ತಿ ಬಳಿಕ ಬದುಕು ನಶ್ವರ ಎಂಬ ಭಾವನೆ ಬಿಟ್ಟು ಲೌಖೀಕ ಜೀವನಕ್ಕೆ ನೀಡಿರುವ ಆದ್ಯತೆಯನ್ನೇ ನೀಡಬೇಕು. ಜತೆಗೆ ಅಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಲೇಖಕ ಡಾ.ಹಾಲತಿ ಸೋಮಶೇಖರ್ ಮಾತನಾಡಿ, ಭಾರತದಲ್ಲಿ ಶೇ 12ರಷ್ಟು ವೃದ್ಧರಿದ್ದಾರೆ. 2040ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿ ಮುಟ್ಟಬಹುದು.
ವೈದ್ಯ ಕ್ಷೇತ್ರ ಪ್ರಗತಿ ಸಾಧಿಸಿರುವುದರಿಂದ ಆ ವೇಳೆಗೆ 60 ಕೋಟಿ ವೃದ್ಧರಿರುವ ಸಾಧ್ಯತೆ ಇದೆ. ಇಷ್ಟು ಪ್ರಮಾಣದ ವೃದ್ಧ ಸಮೂಹ ಇಳಿಸಂಜೆಯಲ್ಲಿ ಎದುರಿಸಬೇಕಿರುವ ಸವಾಲುಗಳನ್ನು ನೆನೆದರೆ ಭಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ತೋಟಗಾರಿಕೆ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಪಿ.ಎಂ.ರಾಮು, ಕೃತಿ ಲೇಖಕ ಪೊ›.ಜಿ.ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.