ಹೊಸದಿಲ್ಲಿ: ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್, ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಸಂಜಯ್ ಬಂಗಾರ್ (Sanjay Bangar) ಮಗ ಆರ್ಯನ್ ಈಗ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಿಸಿಕೊಂಡು “ಟ್ರಾನ್ಸ್ ವುಮನ್” ಅಗಿದ್ದು, ಫೋಟೊಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಯನ್ ಬಂಗಾರ್ ಇದೀಗ ಹೆಸರು ಕೂಡಾ ಬದಲಾಯಿಸಿಕೊಂಡಿದ್ದಾರೆ. ಆರ್ಯನ್ ಇದ್ದವರು ಇದೀಗ ಅನಾಯಾ ಆಗಿದ್ದಾರೆ. ಅವರು ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹನ್ನೊಂದು ತಿಂಗಳಾಗಿದೆ ಎಂದು ಖಚಿತಪಡಿಸಿದರು.
ಆಗಸ್ಟ್ 23 ರಂದು ಹಂಚಿಕೊಳ್ಳಲಾದ ಮತ್ತೊಂದು ಪೋಸ್ಟ್ನಲ್ಲಿ, ಅನಾಯಾ ಅವರು ಕ್ರಿಕೆಟ್ ಮೇಲಿನ ಪ್ರೀತಿಯನ್ನು ಕುರಿತು ಮಾತನಾಡಿದ್ದಾರೆ, ಶಸ್ತ್ರಚಿಕಿತ್ಸೆಯ ಬಳಿಕ ಕ್ರೀಡೆ ತನ್ನಿಂದ ದೂರವಾಗುತ್ತಿದೆ ಎನ್ನುವ ಬಗ್ಗೆ ಹೇಳಿದ್ದಾರೆ. ಪೋಸ್ಟ್ನಲ್ಲಿ, ಅವರು 12 ಟೆಸ್ಟ್ ಮತ್ತು 15 ಏಕದಿನಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಮತ್ತು 2014 ರಿಂದ 2018 ರ ಸೀಸನ್ವರೆಗೆ ಬ್ಯಾಟಿಂಗ್ ಕೋಚ್ ಆಗಿದ್ದ ತಮ್ಮ ತಂದೆಯಿಂದ ಹೇಗೆ ಸ್ಫೂರ್ತಿ ಪಡೆದರು ಎಂಬುದರ ಕುರಿತು ಪ್ರಸ್ತಾಪಿಸಿದ್ದಾರೆ.
ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (HRT) ನಲ್ಲಿ ಟ್ರಾನ್ಸ್ ಮಹಿಳೆಯಾಗಿ, ನನ್ನ ದೇಹವು ತೀವ್ರವಾಗಿ ಬದಲಾಗಿದೆ. ನಾನು ಒಮ್ಮೆ ಅವಲಂಬಿಸಿದ್ದ ಸ್ನಾಯುವಿನ ಶಕ್ತಿ, ಸ್ನಾಯುವಿನ ಸ್ಮರಣೆ ಮತ್ತು ಅಥ್ಲೆಟಿಕ್ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ಇಷ್ಟು ದಿನ ಪ್ರೀತಿಸುತ್ತಿದ್ದ ಆಟ ನನ್ನಿಂದ ದೂರ ಸರಿಯುತ್ತಿದೆ” ಎಂದು ಆರ್ಯನ್ (ಈಗ ಅನಾಯಾ) ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಟ್ರಾನ್ಸ್ ಮಹಿಳೆಗೆ ಕ್ರಿಕೆಟ್ ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ವ್ಯವಸ್ಥೆ ನನ್ನನ್ನು ದೂರ ತಳ್ಳುತ್ತಿದೆ ಎಂದನಿಸುತ್ತಿದೆ. ನನಗೆ ಟ್ಯಾಲೆಂಟ್ ಇಲ್ಲದ ಕಾರಣಕ್ಕೆ ಅಲ್ಲ, ಬದಲಾಗಿ ಈಗ ನಾನಾಗಿರುವ ವಾಸ್ತವ ಸ್ಥಿತಿಗೆ ಅಲ್ಲಿ ಅವಕಾಶವಿಲ್ಲ. ನನ್ನ ಟೆಸ್ಟೋಸ್ಟೆರಾನ್ ಮಟ್ಟಗಳು 0.5 nmol ಗೆ ಕಡಿಮೆಯಾಗಿದೆ, ಇದು ಸಾಮಾನ್ಯ ಮಹಿಳೆಗಿಂತ ಕಡಿಮೆಯಾಗಿದೆ. ಇದರ ಹೊರತಾಗಿಯೂ, ನನ್ನ ದೇಶವನ್ನು ಪ್ರತಿನಿಧಿಸಲು ಅಥವಾ ವೃತ್ತಿಪರ ಮಟ್ಟದಲ್ಲಿ ನನ್ನ ಅಧಿಕೃತ ಸ್ವಯಂ ಆಗಿ ಆಡಲು ನನಗೆ ಇನ್ನೂ ಸ್ಥಳವಿಲ್ಲ ಎಂದಿದ್ದಾರೆ.
ಅನಾಯಾ ಪ್ರಸ್ತುತ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ನಲ್ಲಿ ನೆಲೆಸಿದ್ದಾರೆ. ಈತನ್ಮಧ್ಯೆ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಕಳೆದ ತಿಂಗಳು 2025 ರ ಋತುವಿನಿಂದ ಹೊಸ ಮಹಿಳಾ ದೇಶೀಯ ರಚನೆ ಅಥವಾ ಮಹಿಳೆಯರ ಹಂಡ್ರೆಡ್ನ ಮೊದಲ ಎರಡು ಹಂತಗಳಲ್ಲಿ ಟ್ರಾನ್ಸ್ಜೆಂಡರ್ ಮಹಿಳೆಯರು ಕಾಣಿಸಿಕೊಳ್ಳುವುದಿಲ್ಲ ಎಂದು ಘೋಷಿಸಿದೆ.