ಮುಂಬಯಿ:ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಲ್ಲಿ ಸಿಕ್ಕಿ ಬಿದ್ದ ಆರೋಪಿ ಆರ್ಯನ್ ಖಾನ್ ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನಿನಂತೆ ಪ್ರತಿ ಶುಕ್ರವಾರ ಎನ್ ಸಿಬಿ ಕಚೇರಿಗೆ ಹಾಜರಾಗಬೇಕಾಗಿಲ್ಲ ಎಂದು ಬಾಂಬೆ ಹೈಕೋರ್ಟ್ ಬುಧವಾರ(ಡಿಸೆಂಬರ್ 15) ಆದೇಶ ನೀಡಿದೆ.
ಇದನ್ನೂ ಓದಿ:ಪಿಎಫ್ ಐ ಪ್ರತಿಭಟನೆ : ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ
ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಆರ್ಯನ್ ಖಾನ್ ಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಅದರಂತೆ ಆರ್ಯನ್ ನವೆಂಬರ್ 5, 12, 19, 26 ಹಾಗೂ ಡಿಸೆಂಬರ್ 3 ಮತ್ತು 10ರಂದು ಎನ್ ಸಿಬಿ ಕಚೇರಿಗೆ ಹಾಜರಾಗಿರುವುದಾಗಿ ವರದಿ ತಿಳಿಸಿದೆ.
ತನಗೆ ನೀಡಿರುವ ಜಾಮೀನಿನ ಷರತ್ತನ್ನು ಸಡಿಲಿಕೆ ಮಾಡಬೇಕೆಂದು ಕೋರಿ ಆರ್ಯನ್ ಖಾನ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದ. ಪ್ರತಿ ಶುಕ್ರವಾರ ಎನ್ ಸಿಬಿ ಕಚೇರಿಗೆ ತೆರಳಿ ಹಾಜರಿ ಹಾಕುವ ಬಗ್ಗೆ ವಿನಾಯ್ತಿ ನೀಡಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ಎನ್ ಸಿಬಿ ಅಧಿಕಾರಿಗಳು ನೀಡಿದ್ದ ಮೂರು ಪುಟಗಳ ಪ್ರತಿಕ್ರಿಯೆ ಹಾಗೂ ಆರ್ಯನ್ ಖಾನ್ ಮೇಲ್ಮನವಿಯನ್ನು ಜಸ್ಟೀಸ್ ಎನ್.ಡಬ್ಲ್ಯು ಸಾಂಬ್ರೆ ಪರಿಶೀಲಿಸಿ, ಆರ್ಯನ್ ಖಾನ್ ಯಾವುದೇ ಸಂದರ್ಭದಲ್ಲಿಯೂ ತಿರುಗಾಟ ನಡೆಸಲು ಅಭ್ಯಂತರ ಇಲ್ಲವೆಂದು ತಿಳಿಸಿದ್ದು, ಎನ್ ಸಿಬಿ ಕರೆದಾಗ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿರುವುದನ್ನು ಸಮ್ಮತಿಸಿರುವುದಾಗಿ ಹೇಳಿದರು.ಒಂದು ವೇಳೆ ಬೇರೆ ಸ್ಥಳಗಳಿಗೆ ತೆರಳುವುದಿದ್ದಲ್ಲಿ ಡ್ರಗ್ ಪ್ರಕರಣದ ತನಿಖಾಧಿಕಾರಿಗೆ ಆರ್ಯನ್ ಖಾನ್ ಮಾಹಿತಿ ನೀಡಬೇಕೆಂದು ಕೋರ್ಟ್ ಸೂಚನೆ ನೀಡಿದೆ.
ನನ್ನ ಕಕ್ಷಿದಾರ (ಆರ್ಯನ್) ಯಾವುದೇ ಸಮಯದಲ್ಲೂ ತನಿಖೆಗೆ ಸಹಕರಿಸಲು ಸಿದ್ಧ. ಒಂದು ವೇಳೆ ದೆಹಲಿ ಕಚೇರಿಗೆ ಹಾಜರಾಗಲು ಸಮನ್ಸ್ ನೀಡಿದರೂ ಅಲ್ಲಿಗೂ ತೆರಳಲು ಸಿದ್ಧ ಎಂದು ಆರ್ಯನ್ ಪರ ವಕೀಲರಾದ ಅಮಿತ್ ದೇಸಾಯಿ ಕೋರ್ಟ್ ಗೆ ಮನವರಿಕೆ ಮಾಡಿದ್ದರು.