Advertisement

Aryamba Pattabhi: ಆರ್ಯಾಂಭ ಸಾಹಿತ್ಯ ಕೃಷಿಗೆ ಆರೂವರೆ ದಶಕ…

04:15 PM Oct 29, 2023 | Team Udayavani |

ಕನ್ನಡದ ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವವರು ಹಿರಿಯ ಸಾಹಿತಿ ಆರ್ಯಾಂಭ ಪಟ್ಟಾಭಿ. ಕನ್ನಡ ಸಾರಸ್ವತ ಲೋಕದಲ್ಲಿ ಸುಮಾರು ಆರೂವರೆ ದಶಕಗಳ ಸುದೀರ್ಘ‌ ಪಯಣದ ಸಂಕ್ಷಿಪ್ತ ಅನುಭವವನ್ನು ಆರ್ಯಾಂಭ ಪಟ್ಟಾಭಿ ಇಲ್ಲಿ ಹಂಚಿಕೊಂಡಿದ್ದಾರೆ.

Advertisement

ನೀವು ಬರೆವಣಿಗೆ ಪ್ರಾರಂಭಿಸಿದಾಗ ಸಾಹಿತ್ಯದ ವಾತಾವರಣ ಹೇಗಿತ್ತು?

ನಾನು 1956-57 ರ ದಶಕದಲ್ಲಿ ಬರೆವಣಿಗೆ ಪ್ರಾರಂಭಿಸಿದವಳು. ನನ್ನ ಸುತ್ತಲೂ ಶ್ರೀಮಂತ ಸಾಹಿತ್ಯದ ವಾತಾವರಣವಿತ್ತು. ತುಂಬಾ ಲೇಖಕರು ಆಗ ಬರೆಯುತ್ತಿದ್ದರು. ಲೇಖಕರಿಗೆ ಪ್ರೋತ್ಸಾಹವಿತ್ತು. ಅಪಾರ ಓದುಗ ವರ್ಗವಿತ್ತು. ಬಹು ಮುಖ್ಯವಾಗಿ ನಮ್ಮ ಮನೆಯೇ ಒಂದು ಅಚ್ಚುಕಟ್ಟಾದ ಸಾಹಿತ್ಯ ವಾತಾವರಣವನ್ನು ನನಗೆ ನಿರ್ಮಿಸಿ ಕೊಟ್ಟಿತ್ತು. ಬಹುತೇಕರಿಗೆ ತಿಳಿದಿರುವಂತೆ ಕಾದಂಬರಿಕಾರ್ತಿ ವಾಣಿ ನಮ್ಮ ಕುಟುಂಬ ಸದಸ್ಯರು. ಬಿ. ಎಂ. ಶ್ರೀ ನನ್ನ ದೊಡ್ಡಪ್ಪ. ತ್ರಿವೇಣಿ ನನ್ನ ಸ್ವಂತ ಅಕ್ಕ. ಅವರೆಲ್ಲರನ್ನೂ ನಾನು ನೋಡಿಕೊಂಡು ಬೆಳೆದವಳಾದ್ದರಿಂದ, ಸಹಜವಾಗಿ ನಾನು ಕೂಡ ಬರೆಹದಲ್ಲಿ ನನ್ನನ್ನು ತೊಡಗಿಸಿಕೊಂಡೆ.

ಅಂದಿನ ಕಾಲಕ್ಕೆ ಒಬ್ಬ ಮಹಿಳಾ ಸಾಹಿತಿಯಾಗಿ ನೀವು ಎದುರಿಸಬೇಕಾದ ಸವಾಲುಗಳೇನಾದರೂ ಇತ್ತೇ?

ಅಂತಹ ಸವಾಲುಗಳೇನು ಇರಲಿಲ್ಲ. ನಾನು ಬರೆಯುವ ಕಾಲಕ್ಕೆ ಮಹಿಳೆಯರಿಗೆ ಸಂಪೂರ್ಣ ಸ್ವಾತಂತ್ರವಿತ್ತು. ಹಾಗೆ ನೋಡಿದರೆ, ಆ ಕಾಲದಲ್ಲಿ ನಲವತ್ತಕ್ಕೂ ಹೆಚ್ಚು ಲೇಖಕಿಯರು ಬರೆಯುತ್ತಿದ್ದರು. ಇಂತಹದ್ದನ್ನು ಬರೆಯಬೇಕು ಅಥವಾ ಬರೆಯಬಾರದು ಎಂಬ ಹೇರಿಕೆ ಇರಲಿಲ್ಲ. ಅದರಲ್ಲೂ ನಾನು ಹುಡುಗಿಯರು ಓದುವುದೇ ತಪ್ಪು ಎಂಬ ಕಾಲದಲ್ಲಿ ಎಂ. ಎ ಓದಿದವಳು. ನನ್ನನ್ನು ನನ್ನ ತಂದೆ-ತಾಯಿ ಹುಡುಗನಂತೆಯೇ ಬೆಳೆಸಿದ್ದರು. ನಮ್ಮ ಅಮ್ಮನೇ ಮನೆಯ ಯಜಮಾನಿ ಆದ್ದರಿಂದ ನಮ್ಮನ್ನು ನಮಿಚ್ಛೆಯಂತೆಯೇ ಬೆಳೆಸಿದರು. ಹಾಗಾಗಿ ನಾನು ಮತ್ತು ನನ್ನ ಅಕ್ಕಂದಿರು ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದೆವು.

Advertisement

ನೀವು ಬರೆಯುವ ಕಾಲಕ್ಕೆ ಪ್ರಸಿದ್ಧ ಲೇಖಕಿಯರಾದ ಎಂ. ಕೆ. ಇಂದಿರಾ, ವಾಣಿ ಮತ್ತು ನಿಮ್ಮ ಸ್ವಂತ ಅಕ್ಕ ತ್ರಿವೇಣಿ ಅವರು ಬರೆಯುತ್ತಿದ್ದರು. ಆದರೂ ನೀವು ನಿಮ್ಮದೇ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿರಿ. ಅದು ಹೇಗೆ ಸಾಧ್ಯವಾಯಿತು?

ನಾನು ಎಲ್ಲರನ್ನೂ ಓದಿಕೊಂಡು ಬೆಳೆದವಳು. ಆದರೆ ಯಾರ ಶೈಲಿಯನ್ನೂ ನನ್ನ ಬರೆವಣಿಗೆಯಲ್ಲಿ ಅನುಸರಿಸಲಿಲ್ಲ. ನನ್ನದೇ ಸ್ವಂತ ಶೈಲಿಯನ್ನು ಸೃಷ್ಟಿಸಿಕೊಂಡೆ. ಪ್ರತಿಯೊಬ್ಬ ಸಾಹಿತಿಗೂ ಅವರದ್ದೇ ಶೈಲಿ ಇರಬೇಕು. ಯಾರ ಶೈಲಿಯನ್ನು ನಕಲು ಮಾಡಬಾರದು. ನಾನು ನನ್ನ ಜೀವನಾನುಭವ ಮತ್ತು ನಾನು ಕಂಡದ್ದನ್ನೇ ಬರಹವಾಗಿಸಿದೆ. ಹಾಗಾಗಿ ಪ್ರಸಿದ್ಧ ಲೇಖಕಿಯರು ಬರೆಯುತ್ತಿದ್ದ ಕಾಲದಲ್ಲೂ, ನನ್ನ ಬರೆವಣಿಗೆ ಓದುಗರಿಗೆ ಇಷ್ಟವಾಯಿತು. ತುಂಬಾ ಪ್ರೀತಿ ತೋರಿದರು ಮತ್ತು ಬೆಳೆಸಿದರು.

ಕಾದಂಬರಿ ಬರೆಯುವ ವಿಷಯ­ ದಲ್ಲಿ ಅಕ್ಕ ತಂಗಿಯ ಮಧ್ಯೆ ಯಾವಾಗ­ಲಾದರೂ ಕಾಂಪಿಟಿಷನ್‌ ಇತ್ತಾ?

ಕಾಂಪಿಟಿಷನ್‌ ಖಂಡಿತ ಇರಲಿಲ್ಲ. ಅವಳು ನನಗಿಂತ ಹತ್ತು ವರ್ಷ ದೊಡ್ಡವಳು. ಹಾಗಾಗಿ ನನ್ನ ಮತ್ತು ಅವಳ ಮಧ್ಯೆ ಸ್ಪರ್ಧೆ ಇರಲಿಲ್ಲ. ಅವಳ ಪಾಡಿಗೆ ಅವಳು ಬರೆಯುತ್ತಿದ್ದಳು, ನನ್ನ ಪಾಡಿಗೆ ನಾನು ಬರೆಯು­ತ್ತಿದ್ದೆ. ಆದರೆ ನಾನು ಬರೆದ¨ªೆಲ್ಲವನ್ನು ಅವಳು ಓದುತ್ತಿದ್ದಳು. ಬರೆಯು­ವುದನ್ನು ನಿಲ್ಲಿಸಬೇಡ ಎಂಬ ಪ್ರೋತ್ಸಾಹದ ಮಾತುಗಳನ್ನು ಆಗಾಗ್ಗೆ ಹೇಳುತ್ತಿದ್ದಳು. ಅವಳು ಬದುಕಿರುವಾಗಲೇ ನನ್ನ ಎರಡು ಕಾದಂಬರಿಗಳು ಪ್ರಕಟವಾಗಿದ್ದವು.

ನಿಮ್ಮ ನೆಚ್ಚಿನ ಲೇಖಕರು ಯಾರು?

ಇಂತಹವರು ಅಂತ ಯಾರು ಇಲ್ಲ. ಎಲ್ಲರನ್ನೂ ಓದುತ್ತಿದ್ದೆ. ಆದರೆ ನನಗೆ ಈಗಲೂ ಎಂ. ಕೆ. ಇಂದಿರಾ ಅವರ ಬರಹದ ಶೈಲಿ ತುಂಬಾ ಇಷ್ಟ. ಅವರನ್ನು ಮೀರಿಸುವ ಮತ್ತೂಬ್ಬ ಲೇಖಕಿ ಇಲ್ಲ ಎನಿಸುತ್ತದೆ. ಹಾಗೆ ತ. ರಾ. ಸು ಕೂಡ ಇಷ್ಟವಾಗುತ್ತಿದ್ದರು. ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ತ. ರಾ. ಸು ತುಂಬಾ ವರ್ಷಗಳ ಕಾಲ ನಮ್ಮ ಅಜ್ಜಿ ಮನೆಯ ಹಿಂದೆ ಬೀದಿಯಲ್ಲಿ ಇದ್ದರು.

ನಿಮ್ಮ ಅನೇಕ ಕಾದಂಬರಿ­ಗಳು ಸಿನಿಮಾವಾಗಿ ತೆರೆಕಂಡಿದ್ದು, ಅವು ನಿಮಗೆ ಸಂಪೂರ್ಣವಾಗಿ ತೃಪ್ತಿ ಕೊಟ್ಟಿದೆಯೇ?

ಸಂಪೂರ್ಣ ತೃಪ್ತಿ ಕೊಟ್ಟಿಲ್ಲ. ನನ್ನ “ಕಪ್ಪು-ಬಿಳುಪು’ ಕಾದಂಬರಿಯನ್ನು ಪುಟ್ಟಣ್ಣ ಕಣಗಾಲ್‌ ನಿರ್ದೇಶಿಸಿದ್ದರು. ನನಗೆ ಸ್ವಲ್ಪವೂ ಇಷ್ಟವಾಗಿರಲಿಲ್ಲ. ಅದನ್ನು ನೇರವಾಗಿ ಪುಟ್ಟಣ್ಣನಿಗೆ ಹೇಳಿದ್ದೆ. ನನ್ನ ಕಾದಂಬರಿಗೂ ಆ ಸಿನಿಮಾಗೂ ಸಂಬಂಧವೇ ಇಲ್ಲ ಎಂಬಂತೆ ಮಾಡಿ­ಬಿಟ್ಟಿದ್ದರು. ಕಲ್ಪನಾ ಸಹಜವಾಗಿ ನಟಿಸಿರಲಿಲ್ಲ. ಆ ಸಿನಿಮಾದಲ್ಲಿ ನನಗೆ ಎಲ್ಲವೂ ಒಂದೇ ಪಾತ್ರ ಎನಿಸಿಬಿಟ್ಟಿತ್ತು. ಆದರೆ ಎಂ. ಆರ್‌. ವಿಠ್ಠಲ್ ನಿರ್ದೇಶನದ “ಎರಡು ಮುಖ’ ಸಿನಿಮಾ ನನಗೆ ಖುಷಿಕೊಟ್ಟಿತ್ತು. ನನ್ನ ಕಥೆಗೆ ಸ್ವಲ್ಪವೂ ಧಕ್ಕೆ ತರದಂತೆ ವಿಠuಲ್‌ ಅದ್ಭುತವಾಗಿ ನಿರ್ದೇಶಿಸಿದ್ದರು. “ಸವತಿಯ ನೆರಳು’ ಮತ್ತು “ಮರಳಿ ಗೂಡಿಗೆ’ ಸಿನಿಮಾಗಳು ಕೂಡ ಸ್ವಲ್ಪ ಮಟ್ಟಿಗೆ ತೃಪ್ತಿಕೊಟ್ಟಿತ್ತು. ಎಷ್ಟೋ ಬಾರಿ ಸಿನಿಮಾಗಳು ಕತೆಯನ್ನು ಸಾಯಿಸಿಬಿಡುತ್ತದೆ.

ನಿಮ್ಮ ಕತೆ ಮತ್ತು ಕಾದಂಬರಿಗಳ ಮೂಲ ಸರಕು ಯಾವುದು?

ಜೀವನದ ಅನುಭವ ಅಷ್ಟನ್ನು ಮಾತ್ರ ಹೇಳಬಲ್ಲೆ. ನಾನು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಕಳೆದ ತಿಂಗಳಷ್ಟೇ ಸ್ವಿಡ್ಜರ್‌ಲ್ಯಾಂಡ್‌ ಗೆ ಹೋಗಿ ಬಂದೆ. ಎಲ್ಲಾ ಕಡೆ ನಾನು ಕಾಣುವುದನ್ನು ಮತ್ತು ಅನುಭವಿಸುವುದನ್ನು ಇಷ್ಟು ವರ್ಷಗಳ ಕಾಲ ಬರೆಯುತ್ತಾ ಬಂದಿದ್ದೇನೆ. ನಾನು ಅತೀ ಹೆಚ್ಚು ವಿಷಯಗಳನ್ನು ಸಂಗ್ರಹಿಸುತ್ತೇನೆ. ಅವೆಲ್ಲವೂ ನನ್ನ ಕತೆ ಕಾದಂಬರಿಗಳಿಗೆ ಸರಕು.

ನಿಮಗೆ ಈಗ ಎಂಬತ್ತೇಳು ವಯಸ್ಸು. ಈಗಲೂ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದೀರಿ. ನಿಮ್ಮ ಜೀವನೋತ್ಸಾಹದ ಗುಟ್ಟೇನು?

ನನ್ನ ವಯಸ್ಸು ಎಂಬತ್ತೇಳು ಎಂದು ನೀವು ಹೇಳುತ್ತೀರಿ ಅಷ್ಟೇ. ನಾನಿನ್ನೂ ಹದಿನೆಂಟು ವರ್ಷದ ಹುಡುಗಿಯಲ್ಲ ಹುಡುಗ. ನಾನು ಯಾವುದಕ್ಕೂ ಕೊರಗುವವಳಲ್ಲ. ಬದುಕನ್ನು ಸವಿಯು­ತ್ತಿದ್ದೇನೆ. ಹಾಗಾಗಿ ನನ್ನಲ್ಲಿ ಉತ್ಸಾಹವಿದೆ. ಪ್ರತಿ ನಿತ್ಯವೂ ಬರೆಯುತ್ತೇನೆ.

ಸದ್ಯದ ಸಾಹಿತ್ಯ ವಾತಾವರಣ ಮತ್ತು ಹೊಸ ಲೇಖಕರ ಬಗ್ಗೆ ಏನು ಹೇಳ ಬಯಸುತ್ತೀರಿ?

ನಮ್ಮ ಕಾಲಕ್ಕೆ ಹೋಲಿಸಿದರೆ ಈಗಿನ ಸಾಹಿತ್ಯ ವಾತಾವರಣ ಹದಗೆಟ್ಟಿದೆ. ಕನ್ನಡ ಓದುಗರಿರಲಿ, ಕನ್ನಡ ಮಾತನಾಡುವವರು ಕೂಡ ಸಿಗುತ್ತಿಲ್ಲ. ಜನರಿಗೆ ಭಾಷೆಯ ಮೇಲೆ ಪ್ರೀತಿ ಇಲ್ಲ. ಸಾಹಿತ್ಯ ಕೃತಿಗಳನ್ನು ಓದುವವರಿಲ್ಲ. ಕನ್ನಡವನ್ನು ಕಡ್ಡಾಯ ಮಾಡುವ ಅಗತ್ಯತೆ ಇದೆ. ಈಗ ಹೊಸ ಹೊಸ ಲೇಖಕರು ಹುಟ್ಟಿಕೊಳ್ಳುತ್ತಿ¨ªಾರೆ ಅದರ ಬಗ್ಗೆ ಖುಷಿ ಇದೆ. ಕಥೆ, ಕವನಗಳನ್ನು ಬರೆಯುವವರು ಹೆಚ್ಚಿ¨ªಾರೆ. ಆದರೆ ಕಾದಂಬರಿಗಳನ್ನು ಬರೆಯುವವರೇ ಇಲ್ಲ. ಅದರ ಬಗ್ಗೆ ನನಗೆ ಕೊರಗಿದೆ. ಇಂದಿನ ಲೇಖಕರು ಹೆಚ್ಚಿನ ಕಾದಂಬರಿಗಳನ್ನು ಬರೆಯುವಂತಾಗಲಿ. ಯಾವುದಕ್ಕೂ ಹಾತೊರೆಯದೆ ಓದುಗರ ಪ್ರೀತಿಗಾಗಿ ನಿರಂತರವಾಗಿ ಬರೆಯಲಿ.

ನಿಮ್ಮ ಮುಂದಿನ ಕೃತಿ ಯಾವುದು?

“ಕರ್ಣ’ ಎಂಬ 250 ಪುಟಗಳ ಪೌರಾಣಿಕ ಕಾದಂಬರಿಯನ್ನು ಬರೆದಿದ್ದೇನೆ. ಸದ್ಯದÇÉೇ ಬಿಡುಗಡೆಯಾಗುತ್ತದೆ. ನನಗೆ ಮಹಾ ಭಾರತದ ಕರ್ಣನ ಪಾತ್ರ ತುಂಬಾ ಇಷ್ಟ. ಅವನಿಗಾದ ಮೋಸ ಮತ್ತು ಅವನು ಅನುಭವಿಸಿದ ನೋವುಗಳು ನನ್ನನ್ನು ಕಾಡುತ್ತವೆ. ಹಾಗಾಗಿ ಅವನನ್ನೇ ನನ್ನ ಕಾದಂಬರಿಗೆ ನಾಯಕನನ್ನಾಗಿಸಿಕೊಂಡು ಬರೆದಿದ್ದೇನೆ. ಹಾಗೆ ನನ್ನದೇ ಜೀವನ ಚರಿತ್ರೆಯನ್ನು ಬರೆಯ್ತುದ್ದೇನೆ.

ಸಂದರ್ಶನ:

ದೀಕ್ಷಿತ್‌ ನಾಯರ್‌, ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next