ತಿರುವನಂತಪುರಂ : ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳಿಯ ಸಂಸ್ಥೆಗಳ ಚುನಾವಣೆಯ ಕಾವು ಫಲಿತಾಂಶದ ಬಳಿಕ ತಿಳಿಯಾಗಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಮುನ್ನಡೆಸುವ ಮೇಯರ್ ಸ್ಥಾನಕ್ಕೆ ಸಿಪಿಎಂ(ಐ) ಪಕ್ಷ 21 ವರ್ಷದ ಆರ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡುವ ಮೂಲಕ ದೇಶದಲ್ಲೇ ಯುವ ಮೇಯರ್ ಎನ್ನುವ ಹೆಗ್ಗಳಿಕೆಗೆ ಆರ್ಯ ಪಾತ್ರರಾಗಿದ್ದಾರೆ.
ತಿರುವನಂತಪರಂನ ಮುಡವನ್ಮುಗಲ್ ವಾರ್ಡ್ ನಿಂದ ಸಿಪಿಎಂ ಪಕ್ಷದ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಆರ್ಯ ರಾಜೇಂದ್ರನ್, ಶ್ರಿಕಾಲ ಅವರ ವಿರುದ್ಧ 2872 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಸಿಪಿಎಂ ಜಿಲ್ಲಾ ಕಾರ್ಯಲಯ ಆರ್ಯ ಹೆಸರನ್ನು ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕಾಗಿ ಶಿಫಾರಸು ಮಾಡಿತ್ತು. ಇದೀಗ ಶಿಫಾರಸ್ಸಿಗೆ ಸಿಪಿಎಂ ರಾಜ್ಯ ಸಮಿತಿ ಒಪ್ಪಿಗೆ ನೀಡಿದ್ದು, ದೇಶದ ಕಿರಿಯ ಮೇಯರ್ ಆಗಿ ಆರ್ಯ ರಾಜೇಂದ್ರನ್ ತಿರುವನಂತಪುರ ಮಹಾನಗರ ಪಾಲಿಕೆಯ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿಂದೆ ಅಲಹಾಬಾದ್ ನ ಮೇಯರ್ ಆಗಿ ಆಯ್ಕೆಯಾಗಿದ್ದ 23 ವರ್ಷದ ಅಬಿಲಾಶಾ ಗುಪ್ತಾ ನಂದಿ ಅವರ ದಾಖಲೆಯನ್ನು ಆರ್ಯ ಸರಿಗಟ್ಟಿದ್ದಾರೆ.
ಮೇಯರ್ ಸ್ಥಾನಕ್ಕೆ ಪಕ್ಷದ ಅನುಭವಿ ಸದಸ್ಯರಾದ ಜಮೀಲಾ ಶ್ರೀಧರನ್, ಗಾಯತ್ರಿ ಬಾಬು ಆಕಾಂಕ್ಷಿಯಾಗಿದ್ದರು. ಅಂತಿಮವಾಗಿ ಪಕ್ಷ ಆರ್ಯ ರಾಜೇಂದ್ರನ್ ಅವರನ್ನು ಆಯ್ಕೆ ಮಾಡಿದೆ.
ಇದನ್ನೂ ಓದಿ : ಉನ್ನತ ಶಿಕ್ಷಣದಲ್ಲಿ ಇನ್ನಷ್ಟು ಗುಣಮಟ್ಟ, ಶಿಕ್ಷಣ ಸಂಸ್ಥೆಗಳಿಗೆ ಪೂರ್ಣ ಸ್ವಾಯತ್ತತೆ: ಡಿಸಿಎಂ
ಮಧ್ಯಮ ವರ್ಗದಲ್ಲಿ ಬೆಳೆದಿರುವ ಆರ್ಯರ ತಂದೆ ಎಲೆಕ್ಟ್ರಿಷಿಯನ್ ಆಗಿದ್ದು, ತಾಯಿ ಎಲ್ ಐ ಸಿ ಏಜೆಂಟ್ ಆಗಿದ್ದಾರೆ. ಆರ್ಯ ಆಲ್ ಸೈಂಟ್ಸ್ ಕಾಲೇಜಿನಲ್ಲಿ ದ್ವಿತೀಯ ಬಿಎಸ್ ಸ್ಸಿ ವಿದ್ಯಾರ್ಥಿಯಾಗಿದ್ದಾರೆ. ಅಲ್ಲದೆ ಬಾಲ ಸಂಘದ ರಾಜ್ಯಾಧ್ಯಕ್ಷೆ ಹಾಗೂ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ ರಾಜ್ಯ ಸಮಿತಿಯ ಸದಸ್ಯೆಯಾಗಿದ್ದಾರೆ.