ಕಾಸರಗೋಡು: ಆರ್ಯ ಮರಾಠ ಸಮಾಜ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ವಿದ್ಯಾರ್ಥಿ ವೇತನ ವಿತರಣೆ ಹಾಗು ಸಾಧಕರಿಗೆ ಸಮ್ಮಾನ ಕಾರ್ಯಕ್ರಮವು ಮಂಗಳೂರು ಜಪ್ಪಿನಮೊಗರಿನಲ್ಲಿರುವ ಆರ್ಯ ಮರಾಠ ಭವನದಲ್ಲಿ ಜರಗಿತು.
ಮುಖ್ಯ ಅತಿಥಿಗಳಾದ ವಿಧಾನಸಭಾ ಕ್ಷೇತ್ರದ ಶಾಸಕ ಹಾಗು ಕರ್ನಾಟಕ ವಿಧಾನಮಂಡಲ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಜೆ.ಆರ್.ಲೋಬೊ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಆರ್ಯ ಮರಾಠ ಸಮುದಾಯದ ಸಮಾಜಮುಖೀ ಕಾರ್ಯಕ್ರಮಗಳನ್ನು ಶ್ಲಾಘಿಸುತ್ತಾ ತಮ್ಮ ಸಂಸ್ಕೃತಿ ಪರಂಪರೆಯನ್ನು ಕಾಯ್ದುಕೊಂಡು ಇನ್ನೂ ಅನೇಕ ರೀತಿಯ ಉತ್ತಮ ಕಾರ್ಯಕ್ರಮಗಳನ್ನು ನೆರವೇರಿಸಿ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುವಂತೆ ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಶಾಲು ಹೊದಿಸಿ ಫಲಪುಷ್ಪ ಮತ್ತು ಸ್ಮರಣಿಕೆ ಹಾಗು ಪ್ರಶಸ್ತಿ ಪತ್ರ ನೀಡಿ ಸಮ್ಮಾನಿಸಿದರು.
ಸಮಾರಂಭಕ್ಕೆ ಆಗಮಿಸಿದ ಇನ್ನೋರ್ವ ಮುಖ್ಯ ಅತಿಥಿ ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕರು ಕರ್ನಾಟಕ ಹಾಗು ವಿಧಾನ ಪರಿಷತ್ತು ಶಾಸಕ ಕ್ಯಾ|ಗಣೇಶ್ ಕಾರ್ಣಿಕ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸ್ಮರಣಿಕೆಗಳನ್ನು ನೀಡಿ ಆರ್ಯ ಮರಾಠ ಸಮುದಾಯಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಹಿನ್ನೆಲೆ ಇದೆ. ಅವರ ಆದರ್ಶ ಸಂಸ್ಕೃತಿ ಪರಂಪರೆ ಆಚಾರ ವಿಚಾರಗಳು ಸಮುದಾಯದ ಯುವ ಪೀಳಿಗೆಗೆ ಮಾರ್ಗದರ್ಶನವಾಗಲಿ ಎಂದು ದೇಶ ಕಾಯುವಂತ ಕೆಲಸಕ್ಕೂ ಯುವ ಪೀಳಿಗೆ ಮುಂದಾಗಲಿ ಎಂದು ಶುಭಹಾರೈಸಿದರು.
ಇನ್ನೋರ್ವ ಅತಿಥಿ ಕಾರ್ಪೊರೇ ಟರ್ ಸುರೇಂದ್ರ ಅವರು ಅಂಗವಿಕಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಶುಭಹಾರೈಸಿದರು. ಮತ್ತೋರ್ವ ಅತಿಥಿ ಕೆ.ಕೆ. ಎಂ.ಪಿ. ಉಪಾಧ್ಯಕ್ಷ ಕೆ.ಸುರೇಶ್ ರಾವ್ ಲಾಡ್ ಬಡ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿ ವೇತನ ನೀಡಿದರು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಸಂಘದ ಸಹಾಯವನ್ನು ಮರೆಯದೆ ಸಂಘಕ್ಕೆ ನೀಡಲು ಮರೆಯದಿರಿ ಎಂದು ಶುಭಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಎಂ.ದೇವೋಜಿ ರಾವ್ ಜಾದವ್ ವಹಿಸಿದ್ದರು. ವೇದಿಕೆಯಲ್ಲಿ ನ್ಯಾಯವಾದಿ ಎಲ್ಲೋಜಿ ರಾವ್ ಮೆಮೋರಿಯಲ್ ಟ್ರಸ್ಟ್‌ನ ಅಧ್ಯಕ್ಷೆ ಪ್ರೇಮಲತಾ ವೈ.ರಾವ್, ಬಾಲಕೃಷ್ಣ ರಾವ್ ಲಾಡ್, ನಿವೃತ್ತ ಅಧ್ಯಾಪಕಿ ಬಿ.ವಾರಿಜಾ ಬಾಯಿ, ಟಿ.ಸಂಜೀವ ರಾವ್ ಸಿಂಧ್ಯಾ ಮರೈನ್, ರಾಜಾನಂದ ಚಂದ್ರಮಾನ್, ಕಾರ್ಯದರ್ಶಿ ಗಿರೀಶ್ ರಾವ್ ಬೋಂಸ್ಲೆ, ಉಪಾಧ್ಯಕ್ಷರುಗಳಾದ ನಾಗೇಶ್ವರ ರಾವ್ ಪವಾರ್, ಬಿ.ಜೆ.ಚಂದ್ರಶೇಖರ ಪಾಟೀಲ್, ಕೋಶಾಧಿಕಾರಿ ಕೆ.ಶ್ರೀಧರ ರಾವ್ ಬಹುಮಾನ್, ಜತೆ ಕಾರ್ಯದರ್ಶಿಗಳಾದ ತ್ರಿವೇಣಿ ಜಾದವ್, ಶ್ರೀಧರ ರಾವ್ ಪಾಟೀಲ್. ಮಹಿಳಾ ಘಟಕದ ಸಂಚಾಲಕಿ ಆಶಾ ಸಪ್ಟೆàಕರ್, ಯುವ ವೇದಿಕೆ ಸಂಚಾಲಕ ಲೋಕೇಶ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಿರೀಶ್ ಬೋಂಸ್ಲೆ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಶ್ರೀಧರ ರಾವ್ ಪಾಟೀಲ್ ವಂದಿಸಿದರು. ದಿವ್ಯಾ ಮಧುಸೂದನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.