ಒಂದಲ್ಲ, ಎರಡಲ್ಲ, ಮೂರೂ ಅಲ್ಲ ಐದು ಶೇಡ್ ಇರುವ ಪಾತ್ರಗಳು…! ಇದು ಈಗಷ್ಟೇ ಗಟ್ಟಿನೆಲೆ ಕಾಣಬೇಕೆಂದು ಆಸೆ ಕಂಗಳಲ್ಲಿ ಗಾಂಧಿನಗರಕ್ಕೆ ಕಾಲಿಟ್ಟಿರುವ ಹೊಸ ಪ್ರತಿಭೆ ಆರ್ಯವರ್ಧನ್ ಮೊದಲ ಚಿತ್ರದೊಳಗಿರುವ ಐದು ವಿಭಿನ್ನ ಗೆಟಪ್ ಕುರಿತ ವಿಷಯ. ಹೌದು, ಆರ್ಯವರ್ಧನ್‌ಗೆ “ಖನನ’ ಮೊದಲ ಪ್ರಯತ್ನ. ಮೊದಲ ಸಿನಿಮಾದಲ್ಲೇ ಐದು ಶೇಡ್ ಇರುವ ಪಾತ್ರಗಳು ಸಿಕ್ಕಿವೆ.
ಅದರಲ್ಲೂ ಇದು ಕನ್ನಡ, ತೆಲುಗು ಮತ್ತು ತಮಿಳು ಈ ಮೂರು ಭಾಷೆಯಲ್ಲೂ ನಿರ್ಮಾಣಗೊಂಡು ಏಕಕಾಲದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಗಮನ ಸೆಳೆದಿದ್ದು, ಇಷ್ಟರಲ್ಲೇ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲು ನಿರ್ದೇಶಕ ರಾಧ ನಿರ್ಧರಿಸಿದ್ದಾರೆ. ನಾಯಕ ಆರ್ಯವರ್ಧನ ಅವರಿಗೆ “ಖನನ’ ಚಿತ್ರದಲ್ಲಿ ಐದು ಶೇಡ್‌ಗಳಿವೆ ನಿಜ. ಆ ಶೇಡ್‌ನ ಮಹತ್ವವೇನು?
ಅದಕ್ಕೆ “ಖನನ’ ನೋಡಬೇಕೆಂಬುದು ಚಿತ್ರತಂಡದ ಮಾತು. ಅವರಿಲ್ಲಿ, ಸೈಕೋ ಆಗಿ, ದೇಹಧಾಡ್ಯ ಪಟುವಾಗಿ, ಆರ್ಕಿಟೆಕ್ಟ್ ಆಗಿ ಕಾಣಿಸಿಕೊಂಡಿರುವ ಪಾತ್ರ ಸಿಕ್ಕಿದೆ. ಇನ್ನೂ ಎರಡು ಶೇಡ್ ಯಾವುದೆಂಬುದು ಸಸ್ಪೆನ್ಸ್ ಎನ್ನುವ ನಿರ್ದೇಶಕರು, “ಖನನ’ ಎಂಬುದು ಸಂಸ್ಕೃತ ಪದ. ಭೂಮಿ ಅಗೆಯುವುದನ್ನು ಖನನ ಎನ್ನಲಾಗುತ್ತದೆ. ಕಥೆಗೆ ಈ ಶೀರ್ಷಿಕೆ ಪೂರಕ ಅನಿಸಿದ್ದರಿಂದಲೇ ಅದನ್ನು ಇಡಲಾಗಿದೆ.
ಕಥೆ ಬಗ್ಗೆ ಹೇಳುವುದಾದರೆ, ಬದುಕಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ, ಒಂದು ಖನನ ಮಾಡುತ್ತಲೇ ಇರುತ್ತಾರೆ. ಅದು ಬದುಕಿನ ಹೋರಾಟಕ್ಕಾಗಿರಬಹುದು, ಅಸ್ತಿತ್ವಕ್ಕಾಗಿರಬಹುದು. ಅದೊಂದು ನಿರಂತರ ಪ್ರಕ್ರಿಯೆ. ವಾಸ್ತವದಲ್ಲಿ ಪ್ರಾಣಿಗಳಲ್ಲಿ ನಿಯತ್ತು ಇದೆ, ಅದೇ ಮನುಷ್ಯನಲ್ಲಿ ಇಲ್ಲ ಎಂಬ ಅಂಶ ಚಿತ್ರದ ಹೈಲೈಟ್. ಚಿತ್ರದಲ್ಲಿ ನಾಯಿ ಕೂಡ ಪ್ರಮುಖ ಪಾತ್ರ ವಹಿಸಿದೆ. ಅದು “ಖನನ’ನದಲ್ಲಿ ತಿರುವಿಗೆ ಕಾರಣವಾಗಲಿದೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳ ಜೊತೆಗೆ ಕಮರ್ಷಿಯಲ್ ಆಗಿ ಚಿತ್ರ ಮೂಡಿಬಂದಿದೆ ಎಂಬುದು ನಿರ್ದೇಶಕರ ಮಾತು.
ಚಿತ್ರಕ್ಕೆ ಬಿ.ಶ್ರೀನಿವಾಸ ರಾವ್ ನಿರ್ಮಾಪಕರು. ಅವರಿಗೆ “ಖನನ’ ಮೇಲೆ ವಿಶ್ವಾಸವಿದೆ. ಕಾರಣ, ಹೊಸತನದ ಚಿತ್ರಕ್ಕೆ ಸದಾ ಮೆಚ್ಚುಗೆ ಇರುತ್ತೆ ಎಂಬುದು ಬಲವಾದ ನಂಬಿಕೆ. ಬೆಂಗಳೂರು, ಚನ್ನಪಟ್ಟಣ, ಕೋಲಾರ, ಮೈಸೂರು ಮತ್ತು ಕೇರಳದಲ್ಲಿ ಚಿತ್ರೀಕರಿಸಲಾಗಿದೆ. ನಾಯಕ ಆರ್ಯವರ್ಧನ್ ಅವರಿಗೆ ಕರಿಷ್ಮಾ ಇಲ್ಲಿ ಇಂಡೋ ಅಮೇರಿಕನ್ ಹುಡುಗಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವಿನಾಶ್, ವಿನಯ ಪ್ರಸಾದ್, ಓಂಪ್ರಕಾಶ್ ರಾವ್, ಬ್ಯಾಂಕ್ ಜನಾರ್ದನ್, ಮೋಹನ್ ಜುನೇಜ ಇತರರು ಇದ್ದಾರೆ. ಚಿತ್ರಕ್ಕೆ ಕುನಿ ಗುಡಿಪಾಟಿ ಸಂಗೀತವಿದೆ.