ಹುಬ್ಬಳ್ಳಿ: ನಗರದ ವ್ಯಾಪಾರಿಯೊಬ್ಬರ ಬೆತ್ತಲೆ ವಿಡಿಯೋ ಮಾಡಿಕೊಂಡು, ಹಣಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಮಹಿಳೆ ಸೇರಿ ಐವರನ್ನು ಸಿಸಿಬಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಜೋಯಾ ನದಾಫ, ಪರ್ವಿನ ಬಳ್ಳಾರಿ, ಸಯ್ಯದ್ ತಹಶಿಲ್ದಾರ, ತೌಸಿಫ್, ಅಬ್ದುಲ್ ಬಂಧಿತರಾಗಿದ್ದಾರೆ ಎಂದು ಡಿಸಿಪಿ ಮಹಾನಿಂಗ ನಂದಗಾಂವಿ ತಿಳಿಸಿದರು. ಪಾತ್ರೆ ವ್ಯಾಪಾರಿ ಚಗನ್‌ಲಾಲ್ ಎಂಬುವರೆ ಈ ಗ್ಯಾಂಗ್‌ನಿಂದ ಮೋಸಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಬಂಧಿತ ಜೋಯಾ ಅವಳು ಚಗನ್‌ಲಾಲ್ ಅವರ ಮೊಬೈಲ್‌ಗೆ ಕರೆಮಾಡಿ ಪರಿಚಯಿಸಿಕೊಂಡು ಉಣಕಲ್ ಕ್ರಾಸ್‌ಗೆ ಕರೆಸಿಕೊಂಡಿದ್ದಾಳೆ. ನಂತರ ರಾಜನಗರದ ಮನೆಗೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾಳೆ. ತದನಂತರ ಐವರು ಸೇರಿ ಕೇಳಿದಷ್ಟು ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಚಗನ್‌ಲಾಲ್‌ರು ಸೋಮವಾರ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಹನಿಟ್ರ್ಯಾಪ್ ತಂಡದ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಿಂದ ಎರಡು ಬೈಕ್, ಐದು ಮೊಬೈಲ್ ಫೋನ್ಸ್, 9ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಈ ತಂಡವು ಇದೇ ರೀತಿ ಗೋವಾ, ಬಳ್ಳಾರಿಯಲ್ಲೂ ಕೃತ್ಯ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಗ್ಯಾಂಗ್‌ನ ಪುರುಷರು ಅಂಗಡಿಯ ಹೊರಗೆ ಹಾಕಿರುವ ನಂಬರ್‌ಗಳನ್ನು ಕಲೆಕ್ಟ್ ಮಾಡಿ ಮಹಿಳೆಯರಿಗೆ ಕೊಡುತ್ತಿದ್ದರು. ಅವರು ವ್ಯಾಪಾರಿಗಳ ಮೊಬೈಲ್ ಫೋನ್ ಸಂಖ್ಯೆಗೆ ಸಂದೇಶ ಕಳುಹಿಸಿ, ಕಾಲ್ ಮಾಡಿ ಸಲುಗೆ ಬೆಳೆಸಿಕೊಂಡು ಬಲೆಗೆ ಹಾಕಿಕೊಳ್ಳುತ್ತಿದ್ದರು. ನಂತರ ಅವರೊಂದಿಗೆ ಇರುವ ಅಶ್ಲೀಲ ವಿಡಿಯೋಗಳನ್ನು ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.