Advertisement

ಪಿಎಂ ಹುದ್ದೆ: ಕೇಜ್ರಿವಾಲ್‌ಗೆ ಅವಕಾಶ ಕೊಡಿ: ಮನೀಶ್ ಸಿಸೋಡಿಯಾ

08:27 PM Aug 21, 2022 | Team Udayavani |

ನವದೆಹಲಿ: ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ದೇಶದ ಮುಂದಿನ ಪ್ರಧಾನಿಯಾಗಬೇಕು. ಇದು ಅವರ ವೈಯಕ್ತಿಕ ಆಸೆಯಲ್ಲ. ದೇಶವೇ ಅದನ್ನು ಬಯಸುತ್ತಿದೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಹೇಳಿದ್ದಾರೆ. “ಕೇಜ್ರಿವಾಲ್‌ ಅವರಿಗೆ ಒಂದು ಅವಕಾಶ ಕೊಡಿ’ ಎಂದು ಹೇಳಿದ್ದಾರೆ.

Advertisement

2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವಕ್ಕೆ ಸಮನಾಗಿ ಅರವಿಂದ ಕೇಜ್ರಿವಾಲ್‌ ಅವರನ್ನು ನೋಡಲು ದೇಶದ ಜನರು ಬಯಸುತ್ತಾರೆ ಎಂದು “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಬಿಜೆಪಿ, ಸಿಬಿಐ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಮತ್ತು ಮುಖ್ಯಕಾರ್ಯದರ್ಶಿ ಕೇಜ್ರಿವಾಲ್‌ ಅವರನ್ನು ತಡೆಯಲು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ವಿರೋಧವಿಲ್ಲ:
ಸಿಬಿಐ ನಡೆಸಿದ ದಾಳಿ ಮತ್ತು ತನಿಖೆಗೆ ವಿರೋಧವಿಲ್ಲ. ಯಾವುದೇ ಆರೋಪದ ವಿರುದ್ಧ ತನಿಖೆ ಮಾಡಲಿ. ಪ್ರತಿ ವರ್ಷ ಗುಜರಾತ್‌ನಿಂದ ಸೋರಿಕೆಯಾಗುತ್ತಿರುವ 10 ಸಾವಿರ ಕೋಟಿ ರೂ. ಮೌಲ್ಯದ ಹಣದ ಬಗ್ಗೆಯೂ ತನಿಖೆಯಾಗಲಿ ಎಂದು ಸಿಸೋಡಿಯಾ ಒತ್ತಾಯಿಸಿದ್ದಾರೆ.

ದೆಹಲಿ ಅಬಕಾರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ನಲ್ಲಿರುವ ಎಂಟು ಮಂದಿ ವಿರುದ್ಧ ಸಿಬಿಐ ಲುಕೌಟ್‌ ನೋಟಿಸ್‌ ಜಾರಿ ಮಾಡಿದೆ. ಅದರಲ್ಲಿ ಡಿಸಿಎಂ ಮತ್ತು ಆಮ್‌ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಮನೀಶ್‌ ಸಿಸೋಡಿಯಾ ಹೆಸರು ಉಲ್ಲೇಖಗೊಂಡಿಲ್ಲ.

Advertisement

ನೋಟಿಸ್‌ ಬಗ್ಗೆ ಕಿಡಿಕಾರಿದ ಸಿಸೋಡಿಯಾ “ನಾನು ನವದೆಹಲಿಯಲ್ಲಿಯೇ ಇದ್ದೇನೆ. ಎಲ್ಲಿಗೆ ಬರಬೇಕು ಎಂದು ಸಿಬಿಐ ಹೇಳಿದರೆ ಸಾಕು. ಅಲ್ಲಿಗೆ ಬರುತ್ತೇನೆ’ ಎಂದರು.

ಕೆಸಿಆರ್‌ ಕುಟುಂಬ ಭಾಗಿ:
ಇದೇ ವೇಳೆ, ದೆಹಲಿಯ ಅಬಕಾರಿ ಅವ್ಯವಹಾರದಲ್ಲಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಸಂಸದ ಪರ್ವೇಶ್‌ ವರ್ಮಾ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾವ್‌ ಅವರ ಕುಟುಂಬ ಸದಸ್ಯರು ನೀತಿ ನಿರೂಪಿಸುವ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next