ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇದೀಗ ಮತ್ತೊಂದು ಸ್ವರೂಪ ಪಡೆದಿದೆ. ರೈತರ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಗೃಹ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ. ಆದರೆ ದಿಲ್ಲಿ ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಈ ಬಗ್ಗೆ ಆರೋಪಿಸಿದ್ದು, ಸೋಮವಾರ ಸಿಎಂ ಅರವಿಂದ ಕೇಜ್ರಿವಾಲ್ ಅವರು ದಿಲ್ಲಿಯ ಸಿಂಘು ಭಾಗಕ್ಕೆ ತೆರಳಿ ಪ್ರತಿಭಟನಾ ನಿರತರನ್ನು ಭೇಟಿಯಾಗಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರದ ಸೂಚನೆಯಂತೆ ಅವರನ್ನು ಪೊಲೀಸರು ಗೃಹಬಂಧನಕ್ಕೆ ಒಳಪಡಿಸಿದ್ದಾರೆ. ಯಾರಿಗೂ ಸಿಎಂ ಮನೆಯ ಒಳಗೆ ಅಥವಾ ಹೊರಗೆ ಹೋಗಲು ಅವಕಾಶ ನೀಡಲಾಗಿಲ್ಲ. ಸಿಎಂ ಕೇಜ್ರಿವಾಲ್ ಅವರ ಮಂಗಳವಾರದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.
ಇಡೀ ದೇಶವೇ ರೈತರಿಗೆ ಬೆಂಬಲವಾಗಿ ನಿಂತು ಭಾರತ್ ಬಂದ್ ಮಾಡುತ್ತಿದ್ದರೆ, ಸಿಎಂ ಅರವಿಂದ ಕೇಜ್ರಿವಾಲ್ ಅವರು ಯಾರನ್ನೂ ಭೇಟಿಯಾಗದಂತೆ ತಡೆಯಲು ಕೇಂದ್ರ ಗೃಹ ಸಚಿವಾಲ ಪೊಲೀಸರಿಗೆ ಸೂಚಿಸಿದೆ. ಸಂಪುಟ ಸಹೋದ್ಯೋಗಿಗಳೊಂದಿಗೆ ಸಿಎಂ ಕೇಜ್ರಿವಾಲ್ ಪ್ರತಿಭಟನಾ ನಿರತರನ್ನು ಭೇಟಿಯಾದ ಕ್ರಮದಿಂದ ಕೇಂದ್ರ ಸರ್ಕಾರ ಭಯಭೀತವಾಗಿದೆ ಎಂದು ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಇದನ್ನೂ ಓದಿ:ರೈತರ ಆದಾಯ ದ್ವಿಗುಣಗೊಳಿಸಲು ಕಾಯ್ದೆಗಳಿಗೆ ತಿದ್ದುಪಡಿ ಮಾಡಲಾಗಿದೆ: ಬಿ.ವೈ.ರಾಘವೇಂದ್ರ
ಆದರೆ ದಿಲ್ಲಿ ಪೊಲೀಸರು ಈ ಆರೋಪನ್ನು ತಳ್ಳಿಹಾಕಿದ್ದಾರೆ. ಸಿಎಂ ಗೃಹ ಬಂಧನ ಆರೋಪ ತಪ್ಪು ಎಂದಿದ್ದಾರೆ. ಕೇಜ್ರಿವಾಲ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿಲ್ಲ. ಅವರು ಮನೆಯಿಂದ ಹೊರಗೆ ಹೋಗಲು ಸ್ವತಂತ್ರರು. ಸುರಕ್ಷತೆಯ ದೃಷ್ಟಿಯಿಂದ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ಉತ್ತರ ದಿಲ್ಲಿಯ ಡಿಸಿಪಿ ಹೇಳಿದ್ದಾರೆ.