ಹೊಸದಿಲ್ಲಿ: “ದ ಕಾಶ್ಮೀರ್ ಫೈಲ್ಸ್’ ಸಿನೆಮಾವನ್ನು ಯೂ ಟ್ಯೂಬ್ ಹಾಕಿ್ದರೆ ಎಲ್ಲರೂ ನೋಡಬಹುದಲ್ಲ ಎಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ದೆಹಲಿ ವಿಧಾನಸಭೆಯಲ್ಲಿ ಚಿತ್ರಕ್ಕೆ ಟ್ಯಾಕ್ಸ್ ಫ್ರೀ ಮಾಡುವ ಕುರಿತು ಮಾತನಾಡಿದ ಕೇಜ್ರಿವಾಲ್, ‘ಟ್ಯಾಕ್ಸ್ ಯಾಕೆ ಫ್ರೀ ಮಾಡಬೇಕು. ಚಿತ್ರವನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರಿಗೆ ಹೇಳಿ ಯು ಟ್ಯೂಬ್ ಹಾಕಿಸಿ, ಆಗ ಎಲ್ಲರೂ ನೋಡಬಹುದಲ್ಲ’ ಎಂದರು.
ಬಿಜೆಪಿ ನಾಯಕರು ಮತ್ತು ಸಂಸದರು ರಾಷ್ಟ್ರ ರಾಜಧಾನಿಯಲ್ಲಿ ಟ್ಯಾಕ್ಸ್ ಫ್ರೀ ಮಾಡಲು ಕೇಳಿಕೊಂಡ ಬೆನ್ನಲ್ಲೇ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.
“ಈ ಸದನದೊಳಗೆ ಅವರು ಕೃಷಿ ಕಾನೂನುಗಳನ್ನು ಹೊಗಳಿದರು, ಮತ್ತು ಅವುಗಳನ್ನು ರದ್ದುಗೊಳಿಸಿದ ನಂತರ, ಅವರು ಆ ಕ್ರಮವನ್ನು ಸಹ ಹೊಗಳಿದರು. ನಂತರ ಅವರು ಮದ್ಯದ ಅಂಗಡಿಗಳ ವಿರುದ್ಧ ಪ್ರತಿಭಟಿಸಿದರು. ಈಗ ಅವರು ‘ದಿ ಕಾಶ್ಮೀರ ಫೈಲ್ಸ್’ ಅನ್ನು ತಂದಿದ್ದಾರೆ. ನನ್ನದು ಒಂದೇ ಒಂದು ವಿನಂತಿ ಇದೆ. ನೀವೆಲ್ಲರೂ ರಾಷ್ಟ್ರದ ಬಗ್ಗೆ ಯೋಚಿಸಿ” ಎಂದು ಕೇಜ್ರಿವಾಲ್ ಸದನದಲ್ಲಿ ಹೇಳಿದರು.
”ಅಗ್ನಿಹೋತ್ರಿ ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನೀವು ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಹಾಕುತ್ತಿದ್ದೀರಿ” ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ, ಕಾಶ್ಮೀರಿ ಪಂಡಿತರ ನರಮೇಧ ಘಟನೆ ಆಧರಿಸಿದ ಜಗತ್ತಿನಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿರುವ ಚಿತ್ರ ಈಗಾಗಲೇ 200 ಕೋಟಿ ರೂ.ಗಳಿಂತಲೂ ಅಧಿಕ ಮೊತ್ತ ಬಾಚಿಕೊಂಡಿದೆ.