ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಭಾನುವಾರ ತಮ್ಮ ಪತಿಯನ್ನು “ಸಿಂಹ” ಎಂದು ಕರೆದಿದ್ದು, ಅವರನ್ನು ಹೆಚ್ಚು ಕಾಲ ಜೈಲಿನಲ್ಲಿ ಇಡಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಜಾರಿ ನಿರ್ದೇಶನಾಲಯವು ಮಾರ್ಚ್ 21 ರಂದು ಆಮ್ ಆದ್ಮಿ ಪಕ್ಷದ ನಾಯಕನನ್ನು ಬಂಧಿಸಿರುವುದನ್ನು ವಿರೋಧಿಸಿ ಆಪ್, ಇಂಡಿಯಾ ಮೈತ್ರಿಕೂಟದ ಪ್ರಮುಖ ನಾಯಕರು ದೆಹಲಿಯಲ್ಲಿ ಕರೆ ನೀಡಿರುವ ‘ಲೋಕತಂತ್ರ ಬಚಾವೋ’ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸುನೀತಾ ಆಕ್ರೋಶದ ಮಾತುಗಳನ್ನಾಡಿದ್ದಾರೆ.
‘ನನ್ನ ಗಂಡನನ್ನು ಪ್ರಧಾನಿ ನರೇಂದ್ರ ಮೋದಿ ಜೈಲಿಗೆ ಹಾಕಿದ್ದು ಸರಿಯೇ? ಕೇಜ್ರಿವಾಲ್ ನಿಜವಾದ ದೇಶಭಕ್ತ ಮತ್ತು ಪ್ರಾಮಾಣಿಕ ವ್ಯಕ್ತಿ ಎಂದು ನೀವು ನಂಬುತ್ತೀರಾ? ಕೇಜ್ರಿವಾಲ್ ಜೈಲಿನಲ್ಲಿದ್ದಾರೆ, ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಅವರು ರಾಜೀನಾಮೆ ನೀಡಬೇಕೇ?’ ಎಂದು ಪ್ರಶ್ನಿಸಿದರು.
‘ನಾನು ಇಂದು ಮತ ಕೇಳುತ್ತಿಲ್ಲ.ನವ ಭಾರತ ನಿರ್ಮಾಣಕ್ಕೆ 140 ಕೋಟಿ ಭಾರತೀಯರನ್ನು ಆಹ್ವಾನಿಸುತ್ತೇನೆ. ಭಾರತ ಸಾವಿರಾರು ವರ್ಷಗಳ ನಾಗರಿಕತೆ ಹೊಂದಿರುವ ಮಹಾನ್ ರಾಷ್ಟ್ರ.ಜೈಲಿನೊಳಗಿಂದ ಭಾರತಮಾತೆಯ ಬಗ್ಗೆ ಯೋಚಿಸುತ್ತೇನೆ ಮತ್ತು ಆಕೆ ಇದ್ದಾಳೆ.ನವ ಭಾರತ ನಿರ್ಮಾಣ ಮಾಡೋಣ. ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ ನೀಡಿದರೆ ನವ ಭಾರತ ನಿರ್ಮಾಣ ಮಾಡುತ್ತೇವೆ’ ಎಂದು ಕೇಜ್ರಿವಾಲ್ ಅವರು ಜೈಲಿನಿಂದ ನೀಡಿದ ಸಂದೇಶವನ್ನು ಪತ್ನಿ ಸುನೀತಾ ಓದಿದರು.
ಜಾರ್ಖಂಡ್ ಮುಕ್ತಿ ಮೋರ್ಚಾದ ನಾಯಕಿ, ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರ ಪತ್ನಿ ಕಲ್ಪನಾ ಸೊರೆನ್ ಮಾತನಾಡಿ “ಭಾರತದ ಶೇಕಡಾ 50 ರಷ್ಟು ಮಹಿಳಾ ಜನಸಂಖ್ಯೆ ಮತ್ತು ಶೇಕಡಾ 9 ರಷ್ಟು ಬುಡಕಟ್ಟು ಸಮುದಾಯದ ಧ್ವನಿಯಾಗಿ ನಾನು ನಿಮ್ಮ ಮುಂದೆ ನಿಂತಿದ್ದೇನೆ .ಇಂದು ಈ ಐತಿಹಾಸಿಕ ಮೈದಾನದಲ್ಲಿ ನಡೆಯುತ್ತಿರುವ ಈ ಸಭೆಯು ದೇಶವು ಸರ್ವಾಧಿಕಾರವನ್ನು ಕೊನೆಗೊಳಿಸಲು ನೀವೆಲ್ಲರೂ ಪ್ರತಿಯೊಂದು ಭಾಗದಿಂದ ಬಂದವರು ಎಂದು ಸಾಕ್ಷಿಯಾಗಿದೆ” ಎಂದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ, ಪಂಜಾಬ್ ಸಿಎಂ ಭಗವಂತ ಮಾನ್ ಮತ್ತು ಇತರ ಇಂಡಿಯಾ ಮೈತ್ರಿ ಕೂಟದ ನಾಯಕರು ವೇದಿಕೆಯಲ್ಲಿದ್ದರು.