ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು ಈ ಹಿಂದೆ ಪೊಲೀಸರಿಗೆ ನೀಡಿದ ನಂಬರ್ ಹೈದಾರಾಬಾದ್ ಮೂಲದ ಅರ್ಚಕರದ್ದು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಬುಧವಾರ ಶೇಷಾದ್ರಿಪುರಂ ಎಸಿಪಿ ಕಚೇರಿಗೆ ಆಗಮಿಸಿದ ಶಾಸಕರನ್ನು ಎಸಿಪಿ ಪೃಥ್ವಿ ಅವರು ಸುಮಾರು ಒಂದು ಗಂಟೆ ವಿಚಾರಣೆ ನಡೆಸಿದ್ದು, ಕೆಲವೊಂದು ಮಾಹಿತಿ ಪಡೆದು ಕೊಂಡಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ “ಕೆಲ ದಿನಗಳಹಿಂದೆ ಯುವರಾಜ ಸ್ವಾಮಿ ಎಂಬ ಹೆಸರಿನಲ್ಲಿ ಕರೆ ಬಂದಿತ್ತು. ಆ ನಂಬರ್ ಅನ್ನು ನಮ್ಮ ಹುಡುಗರು ಸ್ವಾಮಿ ಎಂದು ಬರೆದುಕೊಂಡಿದ್ದು, ಅದರ ಪಕ್ಕದಲ್ಲಿ ಹೈದರಾಬಾದ್‌ನ ಸ್ವಾಮಿಜಿ ಅವರ ಹೆಸರು ಬರೆದುಕೊಂಡಿದ್ದರು. ಈ ಗೊಂದಲದಿಂದ ಆ ಸ್ವಾಮಿಗಳ ನಂಬರ್ ಕೊಡಲಾಗಿತ್ತು. ಮತ್ತೂಮ್ಮೆ ಪರಿಶೀಲಿಸಿ ನನಗೆ ಕರೆ ಬಂದಿರುವ ಮೊಬೈಲ್ ನಂಬರ್ ಕೊಡುತ್ತೇನೆ’ ಎಂದು ವಿಚಾರಣೆ ವೇಳೆ ತನಿಖಾಧಿಕಾರಿಗಳ ಮುಂದೆ ಶಾಸಕರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರ್ಚಕರ ನಂಬರ್!: ಶಾಸಕ ಬೆಲ್ಲದ್ ಅವರು ಈ ಹಿಂದೆ ನೀಡಿದ್ದ ಮೊಬೈಲ್ ನಂಬರ್ ಹೈದರಾಬಾದ್‌ನ ಪ್ರಖ್ಯಾತ ಅರ್ಚಕರು ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥರು ಆದ ಜಿತೇಂದ್ರ ಎಂಬುವರದ್ದು. ಆದರೆ, ಪೊಲೀಸರು ಈ ಮೊಬೈಲ್ ಸಿಡಿಆರ್ ಪರಿಶೀಲಿಸಿದಾಗ ಹೈದರಾಬಾದ್‌ನಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ:ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ಬಿಜೆಪಿ ಶಾಸಕ ಯತ್ನಾಳ ಬಿಚ್ಚಿಡುತ್ತಿದ್ದಾರೆ: ರಾಠೋಡ
ಬಳಿಕ ಸಬ್ ಇನ್‌ಸ್ಪೆಕ್ಟರ್ ನೇತೃತ್ವದ ತಂಡ ಹೈದರಾಬಾದ್ ಗೆ ತೆರಳಿದಾಗ ಅಚ್ಚರಿಗೊಂಡ ಅರ್ಚಕರು, ಕೂಡಲೇ ಬೆಲ್ಲದ್ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಬೆಲ್ಲದ್ ಅವರು, ಪೊಲೀಸರಿಗೆ ಕರೆ ಮಾಡಿ, “ಕರೆ ಮಾಡಿರುವ ಸ್ವಾಮಿ ಅವರಲ್ಲ. ಅಲ್ಲಿಂದ ಬನ್ನಿ’ ಎಂದು ಸೂಚಿಸಿದ್ದಾರೆ. ಅಷ್ಟರಲ್ಲಾಗಲೇ ಸ್ವಾಮಿಗಳ ಮನೆಯಲ್ಲಿದ್ದ ಕೆಲವರು ಕೂಡಲೇ ಹಿರಿಯ ರಾಜಕೀಯ ಮುಖಂಡರಿಗೆ ಕರೆ ಮಾಡಿದ್ದಾರೆ.ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು, ಬಿಜೆಪಿಯ ಕೆಲ ಶಾಸಕರು ಕರೆ ಮಾಡಿ ಕೂಡಲೇ ಅರ್ಚಕರ ಮನೆಯಿಂದ ಹೊರಗಡೆ ಬರುವಂತೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.