Advertisement
ಹಾಲಿವುಡ್ ಸಿನೆಮಾ “ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8’ನ್ನು ಈಗ ನೀವು ಕನ್ನಡದಲ್ಲಿ ವೀಕ್ಷಿಸಬಹುದು. ಫಾಸ್ಟ್ ಆ್ಯಂಡ್ ಫ್ಯೂರಿಯಸ್ 8 ಕನ್ನಡದಲ್ಲಿ “ವೇಗ ಮತ್ತು ಉದ್ವೇಗ 8′ ಎಂಬುದಾಗಿ ಡಬ್ಬಿಂಗ್‌ಗೊಳಿಸಿ ಎ. 14ರಂದು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಮುಂಬಯಿಯಲ್ಲಿ ಪ್ರಥಮ ಬಾರಿಗೆ ಒಂದು ಹಾಲಿವುಡ್ ಸಿನೆಮಾ ಕನ್ನಡದಲ್ಲಿ ಭಾಷಾಂತರಗೊಂಡಿದೆ. ಈ ಸಿನೆಮಾವನ್ನು ಕನ್ನಡಕ್ಕೆ ಭಾಷಾಂತರಿಸಲು ಡಬ್ಬಿಂಗ್ ನಿರ್ದೇಶನ ನೀಡಿದವರು ಮುಂಬಯಿ ಲೇಖಕರು ಹಾಗೂ ನುರಿತ ಕಂಠದಾನ ಕಲಾವಿದ ಜಯಶೀಲ ಸುವರ್ಣ ಮತ್ತು ಅರುಷಾ ಎನ್. ಶೆಟ್ಟಿ ಅವರಾಗಿದ್ದಾರೆ.ಬೇರೆ ಭಾಷೆಗಳಿಂದ ಕನ್ನಡಕ್ಕೆ ಡಬ್ ಆಗುವುದರಿಂದ ಕನ್ನಡದ ಬಗ್ಗೆ ಇತರ ಭಾಷೆಯ ಚಲನಚಿತ್ರದವರಿಗೆ ಅರಿವು ಹೆಚ್ಚಾಗುತ್ತದೆ. ಡಬ್ಬಿಂಗ್‌ನಿಂದಾಗಿ ನಮಗೆ ಅನ್ಯ ಸಂಸ್ಕೃತಿಯ ಒಳಿತು ಕೆಡಕುಗಳನ್ನು ನಮ್ಮ ಭಾಷೆಯಲ್ಲಿ ತಿಳಿದುಕೊಳ್ಳುವ ಅವಕಾಶವಿರುತ್ತದೆ. ಈಗ ಡಬ್ಬಿಂಗ್ ಕನ್ನಡ ಚಿತ್ರರಂಗದಲ್ಲಿ ಕ್ರಾಂತಿಯಾಗಿದ್ದು, ಹಾಲಿವುಡ್ ಮತ್ತು ಇತರ ದೊಡ್ಡ ಸಂಸ್ಥೆಗಳ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಕನ್ನಡದ ವೀಕ್ಷಕರಿಗೆ ಇನ್ನೊಂದು ಆಯ್ಕೆ ಸಿಗುತ್ತದೆ. ವೀಕ್ಷಕರು ಇಂತಹ ಒಳ್ಳೆಯ ಚಿತ್ರಗಳನ್ನು ವೀಕ್ಷಿಸಿ ಪ್ರೋತ್ಸಾಹಿಸಿದರೆ ಇದು ಕನ್ನಡ ಚಿತ್ರರಂಗದಲ್ಲಿ ಒಂದು ಉತ್ತಮ ಪರಿವರ್ತನೆಯಾಗಬಹುದು ಎಂದು ಜಯಶೀಲ ಸುವರ್ಣ ಮತ್ತು ಅರುಷಾ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.