ನವದೆಹಲಿ: ಭಾರತದ ಗಡಿಭಾಗಗಳು ತನ್ನದು ಎಂದು ವಿನಾಕಾರಣ ಕಾಲು ಕೆದರಿ ಜಗಳಕ್ಕೆ ಬರುತ್ತಿರುವ ಚೀನಾ ಹೊಸ ವರಾತ ತೆಗೆದಿದೆ. ಅರುಣಾಚಲ ಪ್ರದೇಶದ ಗ್ರಾಮಗಳು ತನ್ನದು ಎಂದು ಹೇಳುತ್ತಿರುವುದು ಮಾತ್ರವಲ್ಲದೆ, ಅಕ್ಸಾಯ್ ಚಿನ್ ಕೂಡ ತನಗೆ ಸೇರಿದ್ದು ಎಂದು ಹೇಳಿಕೊಳ್ಳುವಂತೆ ಹೊಸ ನಕ್ಷೆಯನ್ನು ಚೀನಾ ಸರ್ಕಾರ ಪ್ರಕಟಿಸಿದೆ. ಇದಲ್ಲದೆ, ತೈವಾನ್, ವಿವಾದಾತ್ಮಕ ದಕ್ಷಿಣ ಸಮುದ್ರ ಚೀನಾ ಭಾಗವೂ ಕೂಡ ತನ್ನ ವ್ಯಾಪ್ತಿಗೆ ಬರುತ್ತದೆ ಎಂದು ಆ ದೇಶ ಹೇಳಿಕೊಂಡಿದೆ.
ಚೀನಾದ ಕುತ್ಸಿತ ಸ್ವಭಾವ ಇದು ಮೊದಲೇನಲ್ಲ. ಏಪ್ರಿಲ್‌ನಲ್ಲಿ ಅರುಣಾಚಲ ಪ್ರದೇಶದ 11 ಸ್ಥಳಗಳು ತನಗೇ ಸೇರಿದ್ದು ಎಂದು ತಕರಾರು ತೆಗೆದಿದ್ದ ಡ್ರ್ಯಾಗನ್ ಸರ್ಕಾರ ಅದರ ಹೆಸರುಗಳನ್ನು ಬದಲಿಸಿ ಆದೇಶ ಹೊರಡಿಸಿತ್ತು. ಆದರೆ, ಕೇಂದ್ರ ಸರ್ಕಾರ ಆ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿತ್ತು. ವಿಯೆಟ್ನಾಮ್, ಫಿಲಿಪ್ಪೀನ್ಸ್, ಮಲೇಷ್ಯಾ ಮತ್ತು ಬ್ರೂನೈ ಕೂಡ ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ.
ಇತ್ತೀಚೆಗೆ ಬ್ರಿಕ್ಸ್ ಸಮ್ಮೇಳನದ ವೇಳೆ ಜೊಹಾನ್ಸ್‌ಬರ್ಗ್‌ನಲ್ಲಿ ಚೀನಾ ಅಧ್ಯಕ್ಷ ಕ್ಷಿ ಜಿನ್‌ಪಿಂಗ್ ಜತೆಗೆ ಅನೌಪಚಾರಿಕ ಮಾತುಕತೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ 2 ದೇಶಗಳ ನಡುವಿನ ಬಾಂಧವ್ಯ ಸುಧಾರಿಸಬೇಕಿದ್ದರೆ, ವಾಸ್ತವಿಕ ಗಡಿ ನಿಯಂತ್ರಣ ರೇಖೆಯಿಂದ ಸೇನೆ ವಾಪಸ್ ಪಡೆಯಬೇಕು ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು.
ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ನಮ್ಮ ದೇಶದ ಭಾಗವೇ ಆಗಿದೆ. ಯಾವ ದೇಶದ ನಕ್ಷೆಯಲ್ಲಿ ಅದನ್ನು ಸೇರ್ಪಡೆಗೊಳಿಸಿದರೂ ಯಥಾಸ್ಥಿತಿ ಬದಲು ಮಾಡಲು ಸಾಧ್ಯವೇ ಇಲ್ಲ. ನವದೆಹಲಿಯಲ್ಲಿ ನಡೆಯಲಿರುವ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಕೇಂದ್ರ ಸರ್ಕಾರ ಚೀನಾದ ಸಾಮ್ರಾಜ್ಯದಾಹವನ್ನು ಬಯಲಿಗೆ ಎಳೆಯಬೇಕು.
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ