ಹೊಸದಿಲ್ಲಿ : ಚೀನದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಅಕ್ಟೋಬರ್ ಮೊದಲ ವಾರದಲ್ಲಿ ಅರುಣಾಚಲ ಪ್ರದೇಶ ವಲಯದಲ್ಲಿನ ನೈಜ ನಿಯಂತ್ರಣ ರೇಖೆ ದಾಟಿ ಭಾರತದ ಗಡಿಯೊಳಗೆ ಬಂದಿತ್ತೆಂದು ರಕ್ಷಣಾ ಸಚಿವಾಲಯ ತಿಳಿಸಿದೆ
ಚೀನ ಸೇನೆ ನೈಜ ನಿಯಂತ್ರಣ ರೇಖೆ ದಾಟಿ ಸುಮಾರು 1,000 ಮೀಟರ್ ಕ್ರಮಿಸಿ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯೊಳಗೆ ಬಂದಿತ್ತು ಎಂದು ವರದಿಗಳು ತಿಳಿಸಿವೆ.
ಆ ಸಂದರ್ಭದಲ್ಲಿ ಚೀನ ಸೇನೆಗೆ ಭಾರತೀಯ ಸೈನಿಕರು “ನೀವು ಭಾರತ ಗಡಿಯನ್ನು ಪ್ರವೇಶಿಸಿದ್ದೀರಿ’ ಎಂದು ತಿಳಿಸಿದ ತರುವಾಯ ಚೀನ ಸೇನೆ ಮರಳಿತೆಂದು ವರದಿಗಳು ತಿಳಿಸಿವೆ.
ಈ ಘಟನೆ ನಡೆದು ಹತ್ತು ದಿನಗಳಾಗಿವೆ. ಈ ಬಗೆಯ ಸನ್ನಿವೇಶಗಳನ್ನು ಉಭಯ ದೇಶದ ಸೇನೆಗಳು ಸ್ಥಾಪಿತ ಶಿಷ್ಟಾಚಾರಗಳ ಪ್ರಕಾರ ಬಗೆಹರಿಸಿಕೊಳ್ಳುತ್ತವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿಮಾಡಿದೆ.
ಚೀನ ಸೇನೆಯ ಈ ಬಗೆಯ ಅತಿಕ್ರಮಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ಇಬ್ಬರು ಮಾಜಿ ಉನ್ನತ ಮಿಲಿಟರಿ ಕಮಾಂಡರ್‌ಗಳು, “ಭಾರತ-ಚೀನ ಗಡಿಯ ಆಯಕಟ್ಟಿನ ಪ್ರದೇಶಗಳಲ್ಲಿ ಸೂಕ್ತ ಮೂಲ ಸೌಕರ್ಯಗಳನ್ನು ನಿರ್ಮಿಸದಿದ್ದಲ್ಲಿ ಡೋಕ್ಲಾಂ ರೀತಿಯ ಅತಿಕ್ರಮಣ ಪ್ರಸಂಗಗಳು ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ನಡೆಯುವ ಸಾಧ್ಯತೆಗಳಿವೆ’ ಎಂದು ಎಚ್ಚರಿಸಿದ್ದಾರೆ.