ನವದೆಹಲಿ: ಇತ್ತೀಚೆಗಷ್ಟೇ ಅರುಣಾಚಲಪ್ರದೇಶಕ್ಕೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಭೇಟಿ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದ್ದು, ಇದಕ್ಕೆ ಭಾರತ ಬುಧವಾರ (ಅಕ್ಟೋಬರ್ 13) ತಿರುಗೇಟು ನೀಡಿದೆ.
ಇದನ್ನೂ ಓದಿ:ಸಲೀಂ ಮಾತಿನಿಂದ ಮುಜುಗರವಾಗಿದೆ, ನನಗದು ಸಂಬಂಧಿಸಿಲ್ಲ: ಡಿಕೆಶಿ
ಚೀನಾದ ಆಕ್ಷೇಪದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಾಮ್ ಬಾಗ್ಚಿ, ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಚೀನಾದ ಆಕ್ಷೇಪಕ್ಕೆ ಯಾವುದೇ ಮಹತ್ವ ಕೊಡಬೇಕಾಗಿಲ್ಲ ಎಂದು ಹೇಳಿದರು.
ಚೀನಾದ ಅಧಿಕೃತ ವಕ್ತಾರರು ನೀಡಿರುವ ಹೇಳಿಕೆಯನ್ನು ನಾವೂ ಗಮನಿಸಿದ್ದೇವೆ. ನಾವು ಅಂತಹ ಹೇಳಿಕೆಯನ್ನು ತಿರಸ್ಕರಿಸುತ್ತೇವೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಭಾರತದ ನಾಯಕರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುತ್ತಲೇ ಇರುತ್ತಾರೆ. ಅದೇ ರೀತಿ ದೇಶದ ಇತರ ರಾಜ್ಯಗಳಿಗೂ ಭೇಟಿ ನೀಡುತ್ತಾರೆ. ಅರುಣಾಚಲ ಪ್ರದೇಶಕ್ಕೆ ಭಾರತದ ಮುಖಂಡರು ಭೇಟಿ ನೀಡುವುದನ್ನು ಆಕ್ಷೇಪಿಸುವ ಅಧಿಕಾರ ಚೀನಾಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪೂರ್ವ ಲಡಾಖ್ ಸೇರಿದಂತೆ ಭಾರತ ಮತ್ತು ಚೀನಾದ ಗಡಿ ಪ್ರದೇಶಗಳಲ್ಲಿ ಚೀನಾ ದುರುದ್ದೇಶದಿಂದ ಆಕ್ರಮಿಸುವ ಕೆಲಸ ಮಾಡುತ್ತಿದೆ. ಇದು ನಿಜಕ್ಕೂ ದ್ವಿಪಕ್ಷೀಯ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಅದಿಂದಾಮ್ ಹೇಳಿದರು.