Advertisement
ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರಲ್ಲೊಬ್ಬರಾದ ಅರುಣ್ ಜೇಟ್ಲಿಯವರು ಕೇಂದ್ರ ಹಣಕಾಸು ಸಚಿವರಾಗಿ ಪ್ರಸಿದ್ಧರಾದವರು. ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಮಂಡಳಿ ಸದಸ್ಯರಾಗಿಯೂ ಇದ್ದರು. ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾಗಿ, ಸಹಾಯಕ ಸಾಲಿಸಿಟರ್ ಜನರಲ್ ಆಗಿ ವಕೀಲ ವೃಂದದಲ್ಲೂ ಖ್ಯಾತನಾಮರು.
Related Articles
Advertisement
ಶಾಲಾ ದಿನಗಳಲ್ಲಿ ನಾಯಕತ್ವದ ಗುಣ, ಚರ್ಚೆ ಭಾಷಣಗಳಲ್ಲಿ ಮುಂದಿದ್ದರು. ಕ್ರಿಕೆಟ್ ಅವರ ಇಷ್ಟದ ಆಟ. ಶ್ರೀರಾಮ ಕಾಲೇಜಿನಲ್ಲಿ ಅವರು ಪದವಿಯನ್ನು ಪಡೆದಿದ್ದು, ವಾಣಿಜ್ಯ ಪದವಿ ಪಡೆದಿದ್ದು. ಆಗಲೂ ಚರ್ಚಾ ಕೂಟಗಳಲ್ಲಿ ಮಿಂಚುತ್ತಿದ್ದರು. ಜತೆಗೆ ವಿದ್ಯಾರ್ಥಿ ನಾಯಕನಾಗಿಯೂ ಇದ್ದರು. 1973-77ರ ಅವಧಿಯಲ್ಲಿ ಅವರು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ವ್ಯಾಸಂಗ ಮಾಡಿದ್ದರು. 1982ರಲ್ಲಿ ಅವರು ಸಂಗೀತಾ ಅವರನ್ನು ವಿವಾಹವಾಗಿದ್ದು, 1983ರಲ್ಲಿ ಸೊನಾಲಿ, 1989ರಲ್ಲಿ ರೋಹನ್‌ಗೆ ಅಪ್ಪನಾಗಿದ್ದರು.
ವಕೀಲರಾಗಿ
1977ರಲ್ಲಿ ಜೇಟ್ಲಿ ಅವರು ವಕೀಲ ವೃತ್ತಿಗೆ ತೊಡಗಿಕೊಂಡಿದ್ದು, ಕೆಳ ಹಂತದ ನ್ಯಾಯಾಲಯದಿಂದ ಕ್ರಮೇಣವಾಗಿ ಹೈಕೋರ್ಟ್, ಸುಪ್ರೀಂ ಕೋರ್ಟ್‌ವರೆಗೆ ಹೋದರು. 1990ರಿಂದ ಅವರು ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೂಡ ಆಗಿದ್ದರು. ಇದೇ ಅವಧಿಯಲ್ಲಿ ಬೋಫೋರ್ ಪ್ರಕರಣ ಕೋರ್ಟ್‌ನಲ್ಲಿದ್ದು, ಆ ಪ್ರಕರಣದಲ್ಲೂ ವಾದಿಸಿದ್ದರು. ಹಲವು ಪ್ರಮುಖ ಪ್ರಕರಣಗಳಲ್ಲಿ ವಾದ ನಡೆಸುವ ಮೂಲಕ ಅಪಾರ ಅನುಭವ ಹೊಂದಿದ್ದರು.
ರಾಜಕಾರಣಿಯಾಗಿ
ಬಾಲ್ಯದಿಂದಲೇ ಜೇಟ್ಲಿಯವರಿಗೆ ರಾಜಕೀಯ ಮತ್ತು ಕಾನೂನು ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಈ ಕಾರಣದಿಂದ ಅವರು ಎಬಿವಿಪಿ ಸೇರಿಕೊಂಡು ಆ ಮೂಲಕ ದಿಲ್ಲಿ ವಿವಿ ವಿದ್ಯಾರ್ಥಿ ಸಂಘದ ನಾಯಕನೂ ಆಗಿದ್ದರು. ಇದೇ ಅವರನ್ನು ರಾಜಕೀಯದ ವೇದಿಕೆಗೆ ಕರೆ ತಂದಿತು. ಬಳಿಕ ಅವರು ಜಯಪ್ರಕಾಶ್ ನಾರಾಯಣ್ ಅವರ ಹೋರಾಟಗಳನ್ನು ಹತ್ತಿರದಿಂದ ಕಂಡಿದ್ದು, ಭ್ರಷ್ಟಾಚಾರ ವಿರೋಧಿ ಇತ್ಯಾದಿ ಹೋರಾಟಗಳನ್ನು ತೊಡಗಿಸಿಕೊಂಡಿದ್ದರು.
ಜೇಟ್ಲಿ ಅವರಿಗೆ ಜೆಪಿ ಅವರೇ ಒಂದರ್ಥದಲ್ಲಿ ರಾಜಕೀಯ ಗುರು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದಾಗ ಜೇಟ್ಲಿ ಅವರೂ ಪ್ರಬಲವಾಗಿ ವಿರೋಧಿಸಿದರು. ಈ ಕಾರಣದಿಂದ 19 ತಿಂಗಳು ಅವರು ತಿಹಾರ್ ಜೈಲಿನಲ್ಲಿ ಜೈಲುವಾಸ ಅನುಭವಿಸಿದರು. 1977ರ ಚುನಾವಣೆ ವೇಳೆ ಅವರು ವ್ಯಾಪಕ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೆಸ್ ಸೋಲಿಗೆ ಕೆಲಸ ಮಾಡಿದ್ದರು. ಆಗ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಿದ್ದು, ಲೋಕ ತಾಂತ್ರಿಕ ಯುವ ಮೋರ್ಚಾದ ಸಂಚಾಲಕರಾಗಿ ಕೆಲಸ ಮಾಡಿದರು. ಆದರೆ ಲೋಕಸಭೆಗೆ ಆಯ್ಕೆಯಾಗುವ ಅವರ ಕನಸು ಕೈಗೂಡಿರಲಿಲ್ಲ. 2014ರಲ್ಲಿ ಅಮೃತಸರದಿಂದ ಸ್ಪರ್ಧಿಸಿದರೂ, ಕಾಂಗ್ರೆಸ್ ಅಭ್ಯರ್ಥಿ ಅಮರೀಂದರ್ ಸಿಂಗ್ ವಿರುದ್ಧ ಸೋತಿದ್ದರು.
ಕೇಂದ್ರ ಸಚಿವರಾಗಿ
ಕೇಂದ್ರ ಕಾನೂನು ಸಚಿವರಾಗಿ ಜೇಟ್ಲಿ ತಮ್ಮ ಅನುಭವ ಧಾರೆಯೆರೆದಿದ್ದರು. ಅವರ ಅವಧಿಯಲ್ಲಿ ಚುನಾವಣೆ, ನ್ಯಾಯಾಂಗಕ್ಕೆ ಸಂಬಂಧ ಪಟ್ಟಂತೆ ಮಹತ್ವದ ಕಾನೂನುಗಳು ಜಾರಿಯಾಗಿದ್ದವು. ತ್ವರಿತ ನ್ಯಾಯಾಲಯಗಳ ಸ್ಥಾಪನೆ ಅವರ ಸಚಿವರಾಗಿದ್ದ ಅವಧಿಯಲ್ಲೇ ಆಗಿತ್ತು.
ವಕೀಲರ ಕಲ್ಯಾಣ ನಿಧಿ, ಹೂಡಿಕೆದಾರರ ಸಂರಕ್ಷಣಾ ನಿಧಿ ಸ್ಥಾಪನೆಗೆ ಕಾರಣರಾಗಿದ್ದರು. ಮೋಟಾರು ವಾಹನ ಕಾಯ್ದೆಯಲ್ಲಿ ತಿದ್ದುಪಡಿಯನ್ನೂ ತಂದಿದ್ದರು. ಉತ್ತರಾಖಂಡ, ಜಾರ್ಖಂಡ್, ಛತ್ತೀಸ್‌ಗಢದಲ್ಲಿ ಹೈಕೋರ್ಟ್‌ಗಳ ಸ್ಥಾಪನೆ, ಪಕ್ಷಾಂತರ ತಡೆ ಕಾಯ್ದೆ ಇವರದ್ದೇ ಅವಧಿಯಲ್ಲಿ ಹೊರತರಲಾಗಿತ್ತು. ಹಣಕಾಸು ಸಚಿವರಾಗಿದ್ದಾಗ ಜಿಎಸ್‌ಟಿ, ನೋಟು ನಿಷೇಧದಂತಹ ಮಹತ್ವದ ತೀರ್ಮಾನಗಳ ಹಿಂದೆ ಜೇಟ್ಲಿ ಇದ್ದರು. ಡಿಜಿಟಲ್ ಪಾವತಿ ಉತ್ತೇಜನಕ್ಕೆ ಹೆಚ್ಚಿನ ಕೆಲಸ ಮಾಡಿದ್ದರು. ಬ್ಯಾಂಕುಗಳ ವಿಲೀನಕ್ಕೂ ಕೆಲಸ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸರಕಾರ ರೂಪಿಸಿದ ಪ್ರತಿಯೊಂದು ಪ್ರಮುಖ ನಿರ್ಧಾರದ ಹಿಂದೆ ಜೇಟ್ಲಿ ಇದ್ದರು.