Advertisement

ಕೃಷಿ ಆದಾಯ ತೆರಿಗೆ ವ್ಯಾಪ್ತಿಗೆ ಬರಲಿ ಎಂದದ್ದಕ್ಕೆ ತಬ್ಬಿಬ್ಬು

01:57 PM Apr 27, 2017 | Karthik A |

ಹೊಸದಿಲ್ಲಿ: ಒಂದು ಮಿತಿಯ ಬಳಿಕ ಕೃಷಿಯಿಂದ ಬರುವ ಆದಾಯವನ್ನು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ನೀತಿ ಆಯೋಗದ ಸದಸ್ಯ ವಿವೇಕ್‌ ದೇಬ್‌ರಾಯ್‌ ಹೇಳಿರುವುದು ಕೇಂದ್ರ ಸರಕಾರಕ್ಕೆ ಮುಜುಗರ ತಂದೊಡ್ಡಿದೆ. ಜತೆಗೆ ವೈಯಕ್ತಿಕ ಆದಾಯ ತೆರಿಗೆಯಲ್ಲಿರುವ ಎಲ್ಲ ವಿನಾಯಿತಿಗಳನ್ನೂ ತೆಗೆದು ಹಾಕಬೇಕೆಂದು ಹೇಳಿದ್ದಾರೆ. ಕೃಷಿ ಆದಾಯಕ್ಕೆ ವಿನಾಯಿತಿ ಇರುವುದನ್ನು ತೆರಿಗೆ ಕಳ್ಳರು ದುರುಪಯೋಗ ಮಾಡುತ್ತಾರೆ. ಅದನ್ನು ತಡೆಯಲು ಇಂಥ ಕ್ರಮ ಅಗತ್ಯ ಎಂದು ದೇಬ್‌ರಾಯ್‌ ಪ್ರತಿಪಾದಿಸಿದ್ದರು. ಅದಕ್ಕೆ ಬುಧವಾರ ಪ್ರತಿಕ್ರಿಯೆ ನೀಡಿರುವ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಸರಕಾರದ ಮುಂದೆ ಕೃಷಿ ಆದಾಯಕ್ಕೆ ತೆರಿಗೆ ವಿಧಿಸುವ ಪ್ರಸ್ತಾವವೇ ಇಲ್ಲ ಎಂದಿದ್ದಾರೆ. 

Advertisement

ತೆರಿಗೆ ವಿಧಿಸಿ: ತೆರಿಗೆ ಮೂಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಿರ್ದಿಷ್ಟ ಮಿತಿಗಿಂತಲೂ ಹೆಚ್ಚಿರುವ ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕು ಮತ್ತು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ರದ್ದು ಮಾಡಬೇಕು ಎಂದು ನೀತಿ ಆಯೋಗದ ಸದಸ್ಯ ವಿವೇಕ್‌ ದೇಬ್‌ರಾಯ್‌ ಹೇಳಿದ್ದಾರೆ. ಕೃಷಿಕರಿಗೆ ಹೊರೆಯಾಗಬಾರದು ಎಂಬ ಉದ್ದೇಶದಿಂದ ಕೃಷಿ ಆದಾಯವನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ ಕೆಲವರು ತಮ್ಮ ಆದಾಯ ಕೃಷಿ ಮೂಲದಿಂದ ಬರುತ್ತಿದೆ ಎಂದು ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚನೆ ಮಾಡುತ್ತಿದ್ದಾರೆ. ಅಲ್ಲದೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ವೈಯಕ್ತಿಕ ಆದಾಯ ತೆರಿಗೆ ಒಂದೇ ರೀತಿ ಇರಬೇಕು. ಹಾಗೇ ನಿರ್ದಿಷ್ಟ ಮಿತಿಗಿಂತಲೂ ಹೆಚ್ಚಿರುವ ಕೃಷಿ ಆದಾಯಕ್ಕೂ ತೆರಿಗೆ ವಿಧಿಸಬೇಕು,’ ಎಂದು  ಅವರು ಹೇಳಿದ್ದರು.

ಇಲ್ಲ ಅಂಥ ಪ್ರಸ್ತಾವವೇ ಇಲ್ಲ: ದೇಬ್‌ರಾಯ್‌ ಹೇಳಿಕೆಯಿಂದ ಮುಜುಗರಕ್ಕೆ ಒಳಗಾದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಪ್ರತಿಕ್ರಿಯೆ ನೀಡಿ, ಅಂಥ ಪ್ರಸ್ತಾವವೇ ಕೇಂದ್ರದ ಮುಂದೆ ಇಲ್ಲವೆಂದಿದ್ದಾರೆ. ಸಾಂವಿಧಾನಿಕವಾಗಿ ಕೇಂದ್ರ ಸರಕಾರಕ್ಕೆ ಅಂಥ ಅಧಿಕಾರವೇ ಇಲ್ಲ ಎಂದು ಹೇಳಿದ್ದಾರೆ. ಇದರ ಜತೆಗೆ ನೀತಿ ಆಯೋಗ ಕೂಡ ತೆರಿಗೆ ವಿಧಿಸುವ ಪ್ರಸ್ತಾವ ವಿವೇಕ್‌ ದೇಬ್‌ರಾಯ್‌ರ ವೈಯಕ್ತಿಕ ಅಭಿಪ್ರಾಯವೇ ಹೊರತು ಆಯೋಗದ್ದಲ್ಲ ಎಂದಿದೆ. 

ಕರಡು ಪ್ರತಿಯಲ್ಲಿದೆ ಪ್ರಸ್ತಾವ‌
ನೀತಿ ಆಯೋಗದ ಕರಡು ಪ್ರಸ್ತಾವದಲ್ಲಿ ಉಲ್ಲೇಖವಾಗಿರುವಂತೆ ತೆರಿಗೆಯನ್ನು ಯಾರು ತಪ್ಪಿಸುತ್ತಾರೆಯೋ ಅದರ ಬಗ್ಗೆ ಪರಿಶೀಲನೆ ಆಗಬೇಕು. ಅದರಲ್ಲಿ ಕೃಷಿಗೆ ನೀಡಿರುವ ವಿನಾಯಿತಿ ದುರುಪಯೋಗವಾಗುವ ಬಗ್ಗೆ ಪ್ರಸ್ತಾವವಿದೆ. ಕೃಷಿಯ ಮೂಲಕ ಆದಾಯವಿದೆ ಎಂದು ತೋರಿಸಿ ವಂಚನೆ ಎಸಗುವಂಥವರ ಆದಾಯವನ್ನು ತೆರಿಗೆ ವ್ಯಾಪ್ತಿಯಡಿ ತರಬೇಕು ಎಂದು ಹೇಳಲಾಗಿದೆ.

ದೇಬ್‌ರಾಯ್‌ ಅವರಿಗೆ ರೈತರ ಜೀವನ ಕ್ರಮದ ಬಗ್ಗೆ ಅರಿವು ಇಲ್ಲ. ಹೀಗಾಗಿಯೇ ಅಂಥ ಸಲಹೆಗಳನ್ನು ನೀಡುತ್ತಿದ್ದಾರೆ.
– ವೀರೇಂದ್ರ ಸಿಂಗ್‌, ಬಿಜೆಪಿ ರೈತ ಮೋರ್ಚಾ ನಾಯಕ

Advertisement
Advertisement

Udayavani is now on Telegram. Click here to join our channel and stay updated with the latest news.

Next