ಅಹ್ಮದಾಬಾದ್ : ಮುಂಬರುವ 2017ರ ಗುಜರಾತ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ಇಂದು ಶುಕ್ರವಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.
“ಸಂಕಲ್ಪ ಪತ್ರ 2017′ ಎಂಬ ಶೀರ್ಷಿಕೆ ಇರುವ ಈ ಪ್ರಣಾಳಿಕೆಯನ್ನು ಕೇಂದ್ರ ಹಣಕಾಸು ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅನಾವರಣಗೊಳಿಸಿದರು.
ಆ ಬಳಿಕ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಜೇಟ್ಲಿ , “ಕಾಂಗ್ರೆಸ್ ಪಕ್ಷ ಪಾಟಿದಾರ್ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ಸುಳ್ಳು ಭರವಸೆ ನೀಡಿದೆ’ ಎಂದು ಟೀಕಿಸಿದರು.
“ಗುಜರಾತ್‌ನ ಆರ್ಥಿಕ ಬೆಳವಣಿಗೆ ದರವು ಇಡಿಯ ದೇಶದಲ್ಲೇ ಗರಿಷ್ಠವಾಗಿದೆ; ಕಳೆದ ಐದು ವರ್ಷಗಳಲ್ಲಿ ರಾಜ್ಯವು ಸರಾಸರಿ ಶೇ.10ರ ಪ್ರಗತಿಯನ್ನು ಸಾಧಿಸಿದೆ’ ಎಂದು ಹೇಳಿದ ಜೇಟ್ಲಿ , ಬಿಜೆಪಿ ಆಡಳಿತೆಯ ರಾಜ್ಯವನ್ನು ನಿರಾಧಾರವಾಗಿ ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.
ಇದೇ ಡಿ.4ರಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್, ರಾಜ್ಯ ರೈತರಿಗೆ ಪರಿಹಾರ ಮತ್ತು ಬೆಂಬಲ ನೀಡುವುದಕ್ಕೆ ತಾನು ಹೆಚ್ಚಿನ ಒತ್ತು ನೀಡುವುದಾಗಿ ಹೇಳಿತ್ತು.