ಹೊಸದಿಲ್ಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಫೇಕ್ ರಾಫೇಲ್ ಫೈಟರ್ ಜೆಟ್ ವಿವಾದ’ವನ್ನು ಸೃಷ್ಟಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಪ್ರಧಾನ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಫೇಲ್ ಫೈಟರ್ ಜೆಟ್ ವಿಮಾನ ಖರೀದಿಯು ಫ್ರಾನ್ಸ್ ಮತ್ತು ಭಾರತ ಸರಕಾರದ ನಡುವೆ ನಡೆದಿರುವ ನೇರ ವಹಿವಾಟಾಗಿದೆ. ಇದರಲ್ಲಿ ಯಾವುದೇ ವ್ಯಕ್ತಿ ಭಾಗಿಯಾಗಿಲ್ಲ ಎಂದು ತಮ್ಮ ಫೇಸ್ ಬುಕ್ ಬ್ಲಾಗ್‌ನಲ್ಲಿ ಬರೆದಿರುವ ಜೇಟ್ಲಿ , ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು “ಕೃತಕವಾಗಿ ರಾಫೇಲ್ ವಿವಾದವನ್ನು ಸೃಷ್ಟಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಸರಕಾರವನ್ನು ದೂರಲು ಕಾಂಗ್ರೆಸ್ ಪಕ್ಷದ ಬಳಿ ಯಾವುದೇ ವಿಷಯಗಳಿಲ್ಲ. ಹಾಗಾಗಿ ಅದು ಜಾತ್ಯತೀತತೆಯ ಪುನರ್ ವ್ಯಾಖ್ಯಾನ ಮಾಡುತ್ತಿದೆ ಮತ್ತು ಇದನ್ನು ಬಳಸಿಕೊಂಡು ಬಹುಸಂಖ್ಯಾಕರ ವಿರುದ್ಧವೇ ಬಹುಸಂಖ್ಯಾಕರನ್ನು ಎತ್ತಿ ಕಟ್ಟುತ್ತಿದೆ ಎಂದು ಜೇಟ್ಲಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆ ಮತ್ತು ಕಾರ್ಯ ನಿರ್ವಹಣೆಯ ಜನಮತಗಣನೆ ಆಗಲಿರುವುದರ ಅಪಾಯವನ್ನು ಕಾಂಗ್ರೆಸ್ ಕಂಡುಕೊಳ್ಳುತ್ತಿದೆ ಎಂದು ಜೇತ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಎದುರಾಳಿಗಳ ನಡುವಿನ ಜನಪ್ರಿಯತೆಯ ಅಂತರ ಬಹಳ ಅಗಲಕ್ಕೆ ಬೆಳೆದಿದೆ ಎಂದು ಜೇಟ್ಲಿ ಹೇಳಿದರು.