ಹೊಸದಿಲ್ಲಿ : ಮಾನವ ಹಕ್ಕುಗಳಿಗೆ ಬೆದರಿಕೆಯಾಗಿರುವ ಭಯೋತ್ಪಾದಕರು ಮತ್ತು ಮಾವೋವಾದಿಗಳ ವಿರುದ್ಧ ಸೇನಾ ಬಲ ಪ್ರಯೋಗಿಸಲೇಬೇಕಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅರುಣ್ ಜೇತ್ಲಿ ಅವರು ಕಾಂಗ್ರೆಸ್ ಪಕ್ಷ ಮತ್ತು ಮಾನವ ಹಕ್ಕು ಸಮೂಹಗಳಿಗೆ ಎದಿರೇಟು ನೀಡಿದ್ದಾರೆ.
ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಜೇತ್ಲಿ ಅವರು ಪ್ರಕೃತ ಖಾತೆ ರಹಿತ ಕೇಂದ್ರ ಸಚಿವರಾಗಿದ್ದು ಫೇಸ್ ಬುಕ್‌ನ ತಮ್ಮ ಬ್ಲಾಗ್‌ನಲ್ಲಿ ಮಸ್‌ಕ್ಯುಲರ್ ಪಾಲಿಸಿ (ರಟ್ಟೆ ಬಲ ಪ್ರಯೋಗದ ನೀತಿ) ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಿದ್ದಾರೆ.
ಶರಣಾಗಲು ಒಲ್ಲದ, ಮಾನವ ಹಕ್ಕುಗಳಿಗೆ ಬೆದರಿಕೆಯಾಗಿ ಪರಿಣಮಿಸಿರುವ ಉಗ್ರರು ಮತ್ತು ಮಾವೋವಾದಿಗಳ ವಿರುದ್ಧ ಸರಕಾರದ ತನ್ನ ಭದ್ರತಾ ಬಲವನ್ನು ತೋರಿಸಿದರೆ ಅದು ಮಸ್‌ಕ್ಯುಲರ್ ಪಾಲಿಸಿ ಎನಿಸುವುದಿಲ್ಲ; ಬದಲು ಅದು ರಾಜಕೀಯ ಪರಿಹಾರಕ್ಕೆ ಕಾಯಲಾಗದ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಸರಕಾರ ಕಾನೂನುಸಮ್ಮತವಾಗಿರುವ ತನ್ನ ಭದ್ರತಾ ಬಲವನ್ನು ಉಪಯೋಗಿಸಲೇಬೇಕಾಗುತ್ತದೆ ಎಂದು ಜೇತ್ಲಿ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಪಿಡಿಪಿ – ಬಿಜೆಪಿ ಮೈತ್ರಿ ಕೂಟ ಸರಕಾರ ಪತನದ ಬಳಿಕದಲ್ಲಿ ಹೇರಲಾಗಿರುವ ರಾಜ್ಯಪಾಲರ ಆಳ್ವಿಕೆಯಿಂದಾಗಿ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮತ್ತೆ ಮಸ್‌ಕ್ಯುಲರ್ ಪಾಲಿಸಿ’ ಮರಳುವಂತಾಗುತ್ತದೆ ಎಂಬ ಭೀತಿಯನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದರು.
“ಕೆಲವೊಮ್ಮೆ ನಾವು ನುಡಿ ಬಂಧಗಳನ್ನು ಸೃಷ್ಟಿಸುವುದರಲ್ಲೇ ತೊಡಗಿಕೊಳ್ಳುತ್ತೇವೆ. ಅಂತಹ ಒಂದು ನುಡಿ ಬಂಧವೇ “ಕಾಶ್ಮೀರದಲ್ಲಿನ ಮಸ್‌ಕ್ಯುಲರ್ ಪಾಲಿಸಿ’. ಕೊಲೆಗಾರನನ್ನು ನಿಭಾಯಿಸುವುದು ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗುತ್ತದೆ; ಅದಕ್ಕಾಗಿ ರಾಜಕೀಯ ಪರಿಹಾರವನ್ನು ಕಾಯಲು ಸಾಧ್ಯವಾಗುವುದಿಲ್ಲ’ ಎಂದು ಜೇತ್ಲಿ ಅಭಿಪ್ರಾಯಪಟ್ಟಿದ್ದಾರೆ.