ಹೊಸದಿಲ್ಲಿ : IL&FS ಕೇಸಿನಲ್ಲಿ ಸರಕಾರಿ ಕೊಳ್ಳೆಯನ್ನು ಮುಚ್ಚಿ ಹಾಕಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಹತಾಶ ಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
IL&FS ಪ್ರಕರಣವು ದೇಶದ ಹಣಕಾಸು ರಂಗದ ಬಹುದೊಡ್ಡ ಹಗರಣವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಇತರ ಹಗರಣಗಳಲ್ಲಿ ಮಾಡಿರುವಂತೆ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫಿನಾನ್ಸ್ ಸರ್ವಿಸ್ (IL&FS) ಪ್ರಕರಣದಲ್ಲೂ ಹಗರಣವನ್ನು ಮುಚ್ಚಿ ಹಾಕುವ ಹತಾಶ ಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್‌ಜೇವಾಲಾ ಆರೋಪಿಸಿದರು.
“ಇನ್ನೊಂದು ಬಾರಿಯ ಈ ಹಗರಣದಲ್ಲಿ ಮತ್ತೆ ಅದೇ ಮಾತು : ಜವಾಬ್ದಾರಿಯಿಂದ ನುಣುಚಿಕೊಳ್ಳಿ; ಕುಟುಂಬದ ಚಿನ್ನ ಬೆಳ್ಳಿ ಮಾರಿ; ಬಾಲಬಡುಕ ಬಂಡವಾಳಶಾಹಿಗಳನ್ನು ಪಾರು ಮಾಡಿ. ಈ ವರೆಗೆ ಆಗಿರುವ 4M ಕೇಸುಗಳಲ್ಲಿ (ಮಲ್ಯ, ಮೋದಿ ಜೂನಿಯರ್ 1 ಮತ್ತು 2, ಮೆಹುಲ್ ಭಾಯಿ) ಮಾಡಿರುವಂತೆ ಈ ಹಗರಣದಲ್ಲೂ ಅದನ್ನೇ ಮಾಡಿ’ ಎಂದು ಕಾಂಗ್ರೆಸ್ ವ್ಯಂಗ್ಯದಿಂದ ಟ್ವೀಟ್ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಣಕಾಸು ಹಗರಣಗಳನ್ನು ಪ್ರೀತಿಸುತ್ತಾರೆಯೇ ? ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, ಸಾಲ ಬಾಧಿತ ಐಎಲ್ ಆ್ಯಂಡ್ ಎಫ್ಎಸ್ ಗೆ ಎಲ್‌ಐಸಿ ಮೂಲಕ ನೆರವಾಗುವ ಹುನ್ನಾರವನ್ನು ಪ್ರಶ್ನಿಸಿದ್ದಾರೆ.