ಮೀರತ್: ರಮಾನಂದ ಸಾಗರ್ ಅವರ “ರಾಮಾಯಣ’ ಧಾರಾವಾಹಿ “ರಾಮ’ನ ಪಾತ್ರಧಾರಿ ಅರುಣ್ ಗೋವಿಲ್ ಅವರು ಮಂಗಳವಾರ ಮೀರತ್ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ಉತ್ತರ ಪ್ರದೇಶದ ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಸೇರಿದಂತೆ ಬಿಜೆಪಿಯ ನಾಯಕರು ಹಾಜರಿದ್ದರು.
ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಗೋವಿಲ್ ಬಳಿ ಒಟ್ಟು 3.19 ಕೋಟಿ ರೂ. ಆಸ್ತಿ ಇದ್ದು, ಅವರ ಪತ್ನಿ ಬಳಿ 2.76 ಕೋಟಿ ರೂ. ಆಸ್ತಿ ಇದೆ. ಗೋವಿಲ್ ಕೈಯಲ್ಲಿ 3.75 ಲಕ್ಷ ನಗದು, 10 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಮರ್ಸಿಡೆಸ್ ಬೆಂಜ್ ಕಾರ್ ಇದೆ.
ಅವರ ಪತ್ನಿ ಹತ್ತಿರ 4 ಲಕ್ಷ ರೂ. ಇದೆ. 1.34 ಕೋಟಿ ರೂ. ಬ್ಯಾಂಕ್ ಖಾತೆಯಲ್ಲಿದ್ದರೆ, ಪತ್ನಿಯ ಅಕೌಂಟ್‌ನಲ್ಲಿ 85 ಲಕ್ಷ ರೂ. ಇದೆ.
ಅಭ್ಯರ್ಥಿ ಬದಲಿಸಿದ ಸಮಾಜವಾದಿ ಪಾರ್ಟಿ
ಸಮಾಜವಾದಿ ಪಾರ್ಟಿ(ಎಸ್‌ಪಿ) ಮೀರತ್ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿದೆ. ಸಾರ್ಧಾನಾ ಕ್ಷೇತ್ರದ ಶಾಸಕ ಅತುಲ್ ಪ್ರಧಾನ್ ಅವರನ್ನು ಕಣಕ್ಕಿಳಿಸಿದೆ. ಈ ಮೊದಲು ಭಾನು ಪ್ರತಾಪ್ ಸಿಂಗ್‌ಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ, ಅರುಣ್ ಗೋವಿಲ್‌ಗೆ ಬಿಜೆಪಿ ಟಿಕೆಟ್ ನೀಡಿದ ಬೆನ್ನಲ್ಲೇ ಎಸ್‌ಪಿ ಅಭ್ಯರ್ಥಿಯನ್ನು ಬದಲಿಸಿದೆ. ಈ ಮಧ್ಯೆ, ಆಗ್ರಾ ಕ್ಷೇತ್ರಕ್ಕೆ ಸುರೇಶ್ ಚಂದ್ ಕದಮ್ ಅವರಿಗೆ ಸಮಾಜವಾದಿ ಪಕ್ಷವು ಟಿಕೆಟ್ ಘೋಷಿಸಿದೆ. ಮೀರತ್‌ನಲ್ಲಿ ಏ.26ರಂದು ಮತದಾನ ನಡೆಯಲಿದೆ.