“ಮುದ್ದು ಮನಸೇ’ ಸಿನಿಮಾ ನಿರ್ದೇಶಿಸಿದ ಅನಂತ್ ಶೈನ್, “ವಿರಾಟ್ ಪರ್ವ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದೆ. ಅದು ಅರು ಗೌಡ. ಯಾವ ಅರು ಗೌಡ ಎಂದು ಕೇಳಿದರೆ “ಮುದ್ದು ಮನಸೇ’, “3 ಗಂಟೆ 30 ದಿನ 30 ಸೆಕೆಂಡ್’ ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿರುವ ಅರುಗೌಡ ಈಗ “ವಿರಾಟ್ ಪರ್ವ’ ತಂಡ ಸೇರಿಕೊಂಡಿದ್ದಾರೆ. ಹಾಗಂತ ಅವರು ಈ ಚಿತ್ರದ ನಾಯಕರಲ್ಲ.
ಮೇಲ್ನೋಟಕ್ಕೆ ನೆಗೆಟಿವ್ ಶೇಡ್‌ನಂತೆ ಕಾಣಿಸಿಕೊಳ್ಳುವ ಅವರ ಪಾತ್ರ ಇಡೀ ಸಿನಿಮಾದುದ್ದಕ್ಕೂ ಸಾಗಿಬರಲಿದೆಯಂತೆ. ಈಗಾಗಲೇ ಅರುಣ್ ಅವರ ಭಾಗದ ಚಿತ್ರೀಕರಣ ನಡೆದಿದ್ದು, ಸಖತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಕೋಲಾರ ಹಿನ್ನೆಲೆಯಲ್ಲಿ ಅವರ ಪಾತ್ರ ಸಾಗಿಬರಲಿದ್ದು, ಫೈಟರ್ ಶಿವ ಎಂಬ ಪಾತ್ರ ಮಾಡುತ್ತಿದ್ದಾರೆ. “ಅರುಣ್ ಅವರು ಚಿತ್ರದಲ್ಲಿ ಒಂದು ವಿಶೇಷ ಪಾತ್ರ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಅವರ ಲುಕ್, ಮ್ಯಾನರೀಸಂ ಎಲ್ಲವೂ ಸಂಪೂರ್ಣ ಭಿನ್ನವಾಗಿದ್ದು, ಹೊಸ ಬಗೆಯಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ. ಅವರ ಈ ಹಿಂದಿನ ಯಾವ ಸಿನಿಮಾಗಳ ಶೇಡ್‌ಗಳು ಕೂಡಾ ಈ ಪಾತ್ರದಲ್ಲಿ ಇರುವುದಿಲ್ಲ. ಕಥೆಗೆ ಪ್ರಮುಖ ಟ್ವಿಸ್ಟ್ ಕೊಡುವಲ್ಲಿ ಅವರ ಪಾತ್ರ ಮಹತ್ವದ್ದಾಗಿದ್ದು, ಈಗಾಗಲೇ ಚಿತ್ರೀಕರಣ ಮುಗಿದಿದೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಅನಂತ್ ಶೈನ್. ಈ ಹಿಂದೆ ಅನಂತ್ ಶೈನ್ ಅವರ “ಮುದ್ದು ಮನಸೇ’ ಚಿತ್ರದಲ್ಲೂ ಅರು ಗೌಡ ನಾಯಕರಾಗಿ ನಟಿಸಿದ್ದರು.
ಇನ್ನು ಅನಂತ್ ಶೈನ್ “ವಿರಾಟ್ ಪರ್ವ’ ಚಿತ್ರದಲ್ಲಿ ರೆಗ್ಯುಲರ್ ಪ್ಯಾಟರ್ನ್ ಬಿಟ್ಟು ಈ ಬಾರಿ ಹೊಸ ಜಾನರ್‌ನತ್ತ ವಾಲಿದ್ದು, ಇಂದಿನ ಟ್ರೆಂಡ್‌ಗೆ ಒಗ್ಗುವಂತಹ ಕಥೆ ಮಾಡಿಕೊಂಡಿದ್ದಾರೆ. ವಿಭಿನ್ನ ಮನಸ್ಥಿತಿಯ ಮೂವರು ಹುಡುಗರ ಸುತ್ತ ಇಡೀ ಸಿನಿಮಾ ಸುತ್ತಲಿದ್ದು, ಹೊಸ ಬಗೆಯ ಕಥೆಯಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸ ಅನಂತ್ ಶೈನ್ ಅವರಿಗಿದೆ. ಅರು ಗೌಡ ಅಲ್ಲದೇ, ಚಿತ್ರದಲ್ಲಿ ಆಭಿನಯ ಪ್ರಮುಖ ಪಾತ್ರ ಮಾಡಿದ್ದಾರೆ.
ಮಾತು ಬಾರದ ಹಾಗೂ ಶ್ರವಣ ದೋಷವಿರುವ ಅಭಿನಯ “ಕಿಚ್ಚು’ ಸಿನಿಮಾದಲ್ಲಿ ತಮ್ಮ ನಿಜ ಜೀವನದ ಪಾತ್ರವನ್ನೇ ಮಾಡಿದ್ದರು. ಆದರೆ, “ವಿರಾಟ ಪರ್ವ’ ಸಿನಿಮಾದಲ್ಲಿ ತಮ್ಮ ನಿಜ ಜೀವನಕ್ಕೆ ವಿರುದ್ಧವಾದ, ಸವಾಲಿನ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾದುದ್ದಕ್ಕೂ ಪಟಪಟನೇ ಮಾತನಾಡುವ ಪಾತ್ರ ಸಿಕ್ಕಿದೆ. ಯಶವಂತ್ ಶೆಟ್ಟಿ ಕೂಡಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ಎಸ್.ಆರ್.ಮೀಡಿಯಾ ಪ್ರೊಡಕ್ಷನ್ಸ್‌ನಡಿ ಸುನೀಲ್ ನಿರ್ಮಿಸುತ್ತಿದ್ದಾರೆ.