ಬೆಂಗಳೂರು: ಕಲಾವಿದರಿಗೆ ಸಂಕೋಚ, ನಾಚಿಕೆ ಇರಬಾರದು ಯಾವ ಪಾತ್ರಕೊಟ್ಟರು ಧೈರ್ಯವಾಗಿ ಮಾಡಬೇಕು ಎನ್ನುತ್ತಿದ್ದ ವಿಷ್ಣುವರ್ಧನ್ ಇಂದಿಗೂ ಯುವ ನಟರಿಗೆ ಸ್ಫೂರ್ತಿದಾತ ಎಂದು ಬಹುಭಾಷಾ ನಟಿ ವಿನಯ ಪ್ರಸಾದ್ ಹೇಳಿದರು.
ಡಾ.ವಿಷ್ಣು ಸೇನಾ ಸಮಿತಿ ನಗರದ ಕುವೆಂಪು ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವದ ಸಮಾರೋಪದಲ್ಲಿ ಡಾ.ವಿಷ್ಣುವರ್ಧನ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದಾಗ ನಾಚಿಕೆ ಸ್ವಭಾವ ಹೆಚ್ಚಿತ್ತು.
ಸಾರ್ವಜನಿಕವಾಗಿ ನೃತ್ಯ ಮಾಡಿದ ಅಭ್ಯಾಸವಿರದಿದ್ದರಿಂದ ಸಾಕಷ್ಟು ಸಂಕೋಚ ಪಡುತ್ತಿದ್ದೆ. ಆದರೆ, ವಿಷ್ಣುವರ್ಧನ್ ನನಗೆ ಕಲಾವಿದರಿಗೆ ಸಂಕೋಚ, ನಾಚಿಕೆ ಇರಬಾರದು ಎಂದು ಬುದ್ದಿಮಾತು ಹೇಳಿ, ಧೈರ್ಯ ತುಂಬಿ ನೃತ್ಯ ಮಾಡಿಸಿದ್ದರು. ಅಂದು ಅವರು ಹೇಳಿಕೊಟ್ಟ ಪಾಠ ಇಂದಿಗೂ ನನಗೆ ಸ್ಫೂರ್ತಿಯಾಗಿದೆ ಎಂದರು.
ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಮಾತನಾಡಿ, ವಿಷ್ಣು ಅವರ ಸ್ಮಾರಕ ನಿರ್ಮಾಣ ಸಮಸ್ಯೆ ಸಾಕಷ್ಟು ಜಟಿಲವಾಗುತ್ತಿದೆ. ಈ ವಿಚಾರವಾಗಿ ವಿಷ್ಣು ಅವರನ್ನು ಬಿದಿಗೆ ತಂದು ನಿಲ್ಲಿಸುವುದಿಲ್ಲ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಿಸಲು ವಕೀಲರು, ನಟರು, ಅಭಿಮಾನಿಗಳನ್ನು ಒಳಗೊಂಡಂತೆ ಸ್ಮಾರಕ ಸಮಿತಿ ರಚನೆ ಮಾಡುತ್ತಿದೆ ಎಂದರು.
ಚಿತ್ರನಟರಾದ ಚರಣ್ ರಾಜ್, ದುನಿಯಾ ವಿಜಯ್, ಪ್ರೇಮ್, ಶ್ರೀನಗರ ಕಿಟ್ಟಿ, ಬಾಲಾಜಿ ರವಿಚಂದ್ರನ್, ರವಿಶಂಕರ್ ಗೌಡ , ನೀನಾಸಂ ಸತೀಶ್, ಸಿಹಿ ಕಹಿ ಚಂದ್ರು, ರವಿಕೃಷ್ಣ, ವಿಜಯ್ ಸೂರ್ಯ, ನಿರ್ದೇಶಕ ರಘುರಾಮ್ ವಿಷ್ಣುವರ್ಧನ್ ಅವರೊಟ್ಟಿಗೆ ಕಳೆದ ದಿನಗಳನ್ನು ನೆನದು ವಿಷ್ಣು ಅಭಿನಯಿಸಿದ ಚಿತ್ರದ ಹಾಡನ್ನು ಹಾಡಿ ನೆರದಿದ್ದವರನ್ನು ರಂಜಿಸಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಉಪಸ್ಥಿತರಿದ್ದರು.
ಅಭಿಮಾನಿಗಳಿಂದ ಜನ್ಮದಿನ ಆಚರಣೆ
ಕೆಂಗೇರಿ: ಕೆಂಗೇರಿ-ಉತ್ತರಹಳ್ಳಿ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ಡಾ,ವಿಷ್ಣುವರ್ದನ್ ಸಮಾಧಿಯಲ್ಲಿ (ಸ್ಮಾರಕ) ವಿಷ್ಣು ಅವರ 68ನೇ ಹುಟ್ಟು ಹಬ್ಬವನ್ನು ಅಭಿಮಾನಿಗಳು ಆಚರಿಸಿದರು.
ಬೆಳಗಿನಿಂದಲೆ ಸಾವಿರಾರು ಸಂಖ್ಯೆಯಲ್ಲಿ ಡಾ.ವಿಷ್ಣುವರ್ದನ್ ಭಕ್ತರು ಅಭಿಮಾನ್ ಸ್ಟುಡಿಯೋ ಆವರಣದಲ್ಲಿರುವ ಡಾ.ವಿಷ್ಣುವರ್ದನ್ ಸಮಾಧಿ ಸ್ಥಳಕ್ಕೆ ಬರಲು ಆರಂಭಿಸಿ ಅಲ್ಲಿ ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿದರು. ಇದೇ ವೇಳೆ ಭಾರತೀಯ ರೆಡ್‌ಕ್ರಾಸ್ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನವನ್ನು ಮಾಡಿದರು.