ಶಿರಸಿ: ಯಕ್ಷಗಾನ, ತಾಳಮದ್ದಲೆಯ ಹಿಮ್ಮೇಳ ಮುಮ್ಮೇಳ ಕಲಾವಿದರು ಅಧ್ಯಯನಶೀಲತೆ ಹೆಚ್ಚಿಸಿಕೊಳ್ಳಬೇಕು. ಇಲ್ಲವಾದರೆ ಈ ಕಲೆಯ ಉಳಿವಿಗೆ ಕೊಡುಗೆ ಕೊಡುವಲ್ಲಿ ಸೋಲುತ್ತೇವೆ ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಜಿ.ಎಲ್.ಹೆಗಡೆ ಕುಮಟಾ ಪ್ರತಿಪಾದಿಸಿದರು.
ಅವರು ನಗರದ ಟಿಎಂಎಸ್ ಸಭಾಂಗಣದಲ್ಲಿ ಯಕ್ಷ ಸಂಭ್ರಮ ಹಮ್ಮಿಕೊಂಡ ಶ್ರೀಕೃಷ್ಣಾಷ್ಟಕ ತಾಳಮದ್ದಲೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲಾವಿದರ ಅಧ್ಯಯನ ಶೀಲತೆ ಯಕ್ಷಗಾನಕ್ಕೆ ಸಹಾಯ ಆಗಬೇಕು ಎಂದ ಅವರು, ಉತ್ತರ ಕನ್ನಡದ ಶಿರಸಿ ಸಾಂಸ್ಕ್ರತಿಕ ಕೇಂದ್ರದ ತಾಳಮದ್ದಲೆಗೆ ವೆಂಕಟಾಚಲ ಭಟ್ಟರು, ಕೃಷ್ಣ ಭಟ್ಟ ಕೆರೇಕೈ ಅವರಂಥ ಶ್ರೇಷ್ಠ ಕಲಾವಿದರೂ ಆಗಿ ಹೋಗಿದ್ದಾರೆ. ಶೇಣಿ ಅವರ ಕಾಲದಿಂದ ಕೂಡ ಇದ್ದ ದಕ್ಷಿಣೋತ್ತರ ಕನ್ನಡದ ಕಲಾ ಬಾಂಧವ್ಯ ಮುಂದುವರಿಕೆ ಆಗುತ್ತಿದೆ ಎಂದರು.
ಜನರ ನಡುವೆ ಕಲೆ ಉಳಿಯಬೇಕು. ಜನ ಹಾಗೂ ಸರಕಾರ ಇನ್ನಷ್ಟು ಬೆಂಬಲ ಕಲೆಯ ಉಳಿಯಬೇಕು ಎಂದು ಹೇಳಿದರು.
ಈ ವೇಳೆ ಟ್ರಸ್ಟ್ ಅಧ್ಯಕ್ಷ ಕೇಶವ ಹೆಗಡೆ ಗಡೀಕೈ, ಕೋಶಾಧ್ಯಕ್ಷ ಸೀತಾರಾಮ ಚಂದು, ಇಂದಿರಾ ಹೆಗಡೆ, ಅಶೋಕ ಹಾಸ್ಯಗಾರ, ಬಾಲಚಂದ್ರ ಹೆಗಡೆ ಕೆಶಿನ್ಮನೆ ಇತರರು ಇದ್ದರು.
ಬಳಿಕ ಹಲಸಿನಳ್ಳಿ ನರಸಿಂಹ ಶಾಸ್ತ್ರಿ, ದೇವದಾಸ್ ಅವರ ಶ್ರೀಕೃಷ್ಣಾನುಗ್ರಹವ ತಾಳಮದ್ದಲೆ ನಡೆಯಿತು.