ಬೆಂಗಳೂರು: ಯುವ ಕಲಾವಿದರಲ್ಲಿ ಸಮುದಾಯ ಪ್ರಜ್ಞೆ ಬೆಳೆಸಲು ಆದ್ಯತೆ ನೀಡಲಾಗಿದೆ ಎಂದು ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ.ಎಂ.ಎಸ್.ಮೂರ್ತಿ ಹೇಳಿದರು. ನಗರದ ಜೆ.ಸಿ.ರಸ್ತೆಯ ಕನ್ನಡಭವನದ ವರ್ಣ ಆರ್ಟ್ ಗ್ಯಾಲರಿಯಲ್ಲಿ ಶುಕ್ರವಾರ ಲಲಿತಕಲಾ ಅಕಾಡೆಮಿ ಹಮ್ಮಿಕೊಂಡಿದ್ದ ಗ್ರಾಫಿಕ್ ಕಲಾಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಕಲಾವಿದರು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಅಕಾಡೆಮಿ ಕಮ್ಮಟಗಳನ್ನು ಆಯೋಜಿಸಿದೆ,’ ಎಂದು ತಿಳಿಸಿದರು.
“ಮರದಚ್ಚು ಕಲೆಯು ಹಳೆ ಸಾಂಪ್ರದಾಯಿಕ ಕಲೆಯಾಗಿದ್ದು, ಇದೇ ಮೊದಲ ಬಾರಿಗೆ ಅಕಾಡೆಮಿ ಈ ಕಮ್ಮಟ ಆಯೋಜಿಸಿತ್ತು. ರಾಜ್ಯದ ಸುಮಾರು 43 ಹಿರಿ-ಕಿರಿಯ ಕಲಾವಿದರು ಇದರಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಸುಮಾರು 43 ಕಲಾಕೃತಿಗಳನ್ನು ಮರದಚ್ಚು ಕಲೆಯಿಂದಲೇ ರಚಿಸಿರುವುದು ವಿಶೇಷ,’ ಎಂದು ಹೇಳಿದರು.
“ಅಕಾಡೆಮಿ ವತಿಯಿಂದ ಮೊದಲ ಹಂತದಲ್ಲಿ ಗ್ರಾಫಿಕ್ ಮರದಚ್ಚು ಕಲಾ ಕಮ್ಮಟ ಪ್ರಾರಂಭಿಸಲಾಗಿದ್ದು, ನಂತದ ದಿನಗಳಲ್ಲಿ ಪ್ರಿಂಟಿಂಗ್ ಗ್ರಾಫಿಕ್ ಕಲಾ ಕಮ್ಮಟ ಆಯೋಜಿಸಲಾಗುವುದು. ಶೀಘ್ರವೇ ಕಲಾಗ್ರಾಮದಲ್ಲಿ ಗ್ರಾಫಿಕ್ ಸ್ಟುಡಿಯೋ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇಲಾಖೆ ಕ್ರಮಕೈಗೊಳ್ಳಲಿದೆ,’ ಎಂದು ತಿಳಿಸಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ವೆಂಕಟಾಚಲಪತಿ ಮಾತನಾಡಿ, “ಮುದ್ರಣ ಕಲೆಯಾಗಿ ಆರಂಭಗೊಂಡು ನಂತರದಲ್ಲಿ ವಿವಿಧ ತಂತ್ರವಿಧಾನಗಳಿಂದ ಮತ್ತು ಕಲಾವಿದನ ಸೃಜನಶೀಲ ಅಭಿವ್ಯಕ್ತಿಯಿಂದ ಪ್ರಸ್ತುತ ಗ್ರಾಫಿಕ್ ಕಲೆಯಾಗಿ ಅಭಿವೃದ್ಧಿಗೊಂಡಿದೆ. ರಾಜ್ಯದಲ್ಲೂ ಅನೇಕ ಸೃಜನಶೀಲ ಕಲಾವಿದರು ಗ್ರಾಫಿಕ್ ಮಾಧ್ಯಮದಲ್ಲಿ ಕಲಾಕೃತಿ ರಚಿಸುತ್ತಿದ್ದಾರೆ.
ಲಲಿತ ಕಲಾ ಅಕಾಡೆಮಿಯು ಅಗಿಂದ್ದಾಗ್ಗೆ ಗ್ರಾಫಿಕ್ ಕಲೆಯ ಬಗ್ಗೆ ಕಲಾವಿದರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿರುವುದು ಶ್ಲಾಘನೀಯ,’ ಎಂದು ಹೇಳಿದರು. ಕಮ್ಮಟದ ಸಂಪನ್ಮೂಲ ಕಲಾವಿದ ಡಾ.ಶ್ರೀಧರಮೂರ್ತಿ ಮಾತನಾಡಿ, “ರಾಜ್ಯದ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಗ್ರಾಫಿಕ್ ಕಲಾ ತಂತ್ರಜ್ಞಾನದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಗ್ರಾಫಿಕ್ ವಿಭಾಗದ ಶಾಲೆಗಳು ಅಲ್ಲಿ ಇರುವುದಿಲ್ಲ. ಲಲಿತ ಕಲಾ ಅಕಾಡೆಮಿಯ ಈ ಕಮ್ಮಟ ಹೊಸ ಅನುಭವ ನೀಡಿದೆ.
ಯಂತ್ರಗಳ ಅವಶ್ಯಕತೆ ಇಲ್ಲದ ಇದೊಂದು ಸರಳ ಮಾಧ್ಯಮ. ಶಿಬಿರದ ನಂತರ ಮನೆಯಲ್ಲಿಯೇ ಮರದಚ್ಚು ಕಲೆಯ ಈ ಬುಡಕಟ್ಟು ಮಾಧ್ಯಮವನ್ನು ಅಭ್ಯಾಸ ಮಾಡಲು ಅನುಕೂಲ,’ ಎಂದರು. ಸಮಾರಂಭದಲ್ಲಿ ಕಮ್ಮಟದ ಸಂಪನ್ಮೂಲ ಕಲಾವಿದ ಚಂದ್ರಹಾಸ ವೈ.ಜಾಲಿಹಾಳ, ಅಕಾಡೆಮಿ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.