Advertisement

ಆರ್ಟಿಸ್ಟ್ಸ್ ಫೋರಂನ ರಜತ ಸಂವತ್ಸರ ಕಲಾಪ್ರದರ್ಶನ

08:20 AM Aug 18, 2017 | Team Udayavani |

ಕಲೆ- ಕಲಾವಿದ- ಕಲಾ ಪ್ರದರ್ಶನ- ಕಲಾಸಂಸ್ಥೆ ಯಾವುದೇ ಇರಲಿ ಅದು ತಾನಿರುವ ಪರಿಸರದ ಅಭಿರುಚಿಗೆ ಅನುಗುಣವಾಗಿ ಇರಬೇಕು. ತನ್ನ ಪರಿಸರದಲ್ಲಿರುವ ಕಲಾಭಿಮಾನಿಗಳ ಆಸಕ್ತಿಗಳನ್ನು ಕಂಡುಕೊಂಡು ಅದಕ್ಕೆ ತಕ್ಕಂತೆ ಕಲಾಪ್ರದರ್ಶನ ನೀಡಿದಾಗ ಆ ಸಂಸ್ಥೆ ಬೆಳೆಯಬಲ್ಲುದು. ಈ ದೃಷ್ಟಿಯಿಂದ ಗಮನಿಸುವಾಗ ಉಡುಪಿ ಜಿಲ್ಲೆ ಅಭಿವೃದ್ಧಿಗೊಳ್ಳುತ್ತಿರುವ ಜಿಲ್ಲೆಯಾಗಿರುವುದರಿಂದ ಮುಂಬೈ, ಬೆಂಗಳೂರಿನಂತಹ ತೀರಾ ಆಧುನಿಕ ಕಲ್ಪನೆಯ ಕಲಾಪ್ರದರ್ಶನ ಇಲ್ಲಿಗೆ ಹಿತವೆನಿಸುವುದಿಲ್ಲ. ಇಲ್ಲಿ ಹಳೆ ಬೇರಿನೊಂದಿಗೆ ಹೊಸ ಚಿಗುರೂ ಬೇಕು. ಸಾಂಪ್ರದಾಯಿಕ, ನೈಜ ಕಲಾಕೃತಿಗಳೊಂದಿಗೆ ಒಂದಿಷ್ಟು ನವ್ಯ ದೃಷ್ಟಿಕೋನದ ಕಲಾಕೃತಿಗಳಿದ್ದರೆ ಇಲ್ಲಿ ಕಲಾಪ್ರದರ್ಶನ ಗೆಲ್ಲುತ್ತದೆ. ಈ ಸತ್ಯವನ್ನು ಬಲ್ಲ ಉಡುಪಿಯ ಆರ್ಟಿಸ್ಟ್ಸ್ ಫೋರಂ ಕಲಾವಿದರ ಬಳಗ ಇಲ್ಲಿನ ಪರಿಸರಕ್ಕೆ ತಕ್ಕಂತೆ ಕಲಾಪ್ರದರ್ಶನ, ಕಲಾಚಟುವಟಿಕೆಗಳನ್ನು ನಡೆಸುತ್ತಾ ಜನಮನ ಗೆದ್ದಿದೆ. ಅದರ ಪರಿಣಾಮವಾಗಿ ಇದೀಗ ತನ್ನ ರಜತ ವರ್ಷದ ಸಂಭ್ರಮವನ್ನು ಆಚರಿಸುವಂತಾಗಿದೆ. ಒಂದು ಉತ್ತಮ ಕಲಾಪ್ರದರ್ಶನವನ್ನು ನೀಡುತ್ತಿದೆ. 

Advertisement

ಇಂದ್ರಿಯಗೋಚರ ವಿಷಯವನ್ನು ಸೃಜನಾತ್ಮಕವಾಗಿ ಪ್ರಕಟಿಸುವವನೇ ನಿಜವಾದ ಕಲಾವಿದ. ಕೆಮರಾ ಕಣ್ಣಿನಲ್ಲಿ ಕಾಣುವಂತೆ ಚಿತ್ರಿಸುವುದು ಆತನ ಕೆಲಸವಲ್ಲ. ಕಣ್ಣಲ್ಲಿ ಕಂಡದ್ದನ್ನು, ಕಿವಿಯಲ್ಲಿ ಕೇಳಿದ್ದನ್ನು ಹಾಗೂ ಅನುಭವಜನ್ಯವಾದದ್ದನ್ನು ಮಂಥನ ಮಾಡಿ, ಸಮಾಜಕ್ಕೆ ಹಿತವೆನಿಸುವ ರೀತಿಯಲ್ಲಿ ಅದರ ಹೂರಣವನ್ನು ಕ್ಯಾನ್ವಾಸ್‌ ಮೇಲೆ ರೂಪಿಸುವವನೇ ನಿಜಾರ್ಥದಲ್ಲಿ ಕಲಾವಿದನೆನಿಸುತ್ತಾನೆ. ಇದು ಆತನಿಗೆ ಅನವರತ ಸಾಧನೆ ಹಾಗೂ ಕಲಾಜೀವನದಿಂದ ಸಿದ್ಧಿಸುವುದು ಎಂದು ಪ್ರತಿಪಾದಿಸುತ್ತಾ ಬಂದಿರುವ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ರಮೇಶ್‌ ರಾವ್‌ ತನ್ನ ಬಳಗದಲ್ಲಿ ಅಂತಹ ಕಲಾವಿದರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ತನ್ನ ಬಳಿಗೆ ಬಂದ ಕಲಾವಿದರನ್ನು ತಿದ್ದಿ ತೀಡಿ ಸಮಕಾಲೀನ ಕಲಾ ಬೆಳವಣಿಗೆಗೆ ತಕ್ಕಂತೆ ಅವರನ್ನು ನಿಜಾರ್ಥದಲ್ಲಿ ಕಲಾವಿದರನ್ನಾಗಿ ಮಾಡುತ್ತಿದ್ದಾರೆ. ತಾನು ಸ್ಥಾಪಿಸಿರುವ “ಗ್ಯಾಲರಿ ದೃಷ್ಟಿ’ಯಲ್ಲಿ ಆಗಾಗ್ಗೆ ಉತ್ತಮ ಗುಣಮಟ್ಟದ ಕಲಾ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಹಾಗಾಗಿ ಆರ್ಟಿಸ್ಟ್ಸ್ ಫೋರಂ ಕಲಾಸಂಸ್ಥೆ ರಜತ ವರ್ಷದ ಸಂಭ್ರಮಾಚರಣೆಯನ್ನು ನಡೆಸಲು ಸಾಧ್ಯವಾಗಿದೆ.  

ರಜತ ವರ್ಷದ ಈ ಕಲಾಪ್ರದರ್ಶನದಲ್ಲಿ ಫೋರಂನ ಹಿರಿಯ ಹಾಗೂ ಕಿರಿಯ 28 ಕಲಾವಿದರ 40ಕ್ಕೂ ಹೆಚ್ಚು ಚಿತ್ರಕೃತಿಗಳು ಪ್ರದರ್ಶನ ಗೊಂಡಿದ್ದವು. ಕಲಾಕೃತಿಗಳು ಜಲವರ್ಣ, ಆಕ್ರಿಲಿಕ್‌ ಮತ್ತು ತೈಲವರ್ಣ ಮಾಧ್ಯಮದಲ್ಲಿ ವೈವಿಧ್ಯಮಯ ವಿಷಯಗಳೊಂದಿಗೆ ವಿವಿಧ ಶೈಲಿಗಳಲ್ಲಿ ರಚನೆಗೊಂಡಿದ್ದವು. ಕಲಾವಿದರಾದ ಭಾಸ್ಕರ ರಾವ್‌ ಹಾಗೂ ರಮೇಶ್‌ ರಾಯರ ಜೀವನಚಿತ್ರಗಳು, ಮೋಹನ್‌ ಪೆರ್ಮುದೆಯವರ ಮಳೆಗಾಲದ ನಿಸರ್ಗ, ಲಂಗರು ಹಾಕಿರುವ ಬೋಟ್‌, ಎಚ್‌.ಕೆ. ರಾಮಚಂದ್ರ ಅವರ ಗಲ್ಲಿಯ ದೃಶ್ಯ, ವಸಂತ್‌ ದೇವಾಡಿಗರ ಅಮೂರ್ತ ಭೂದೃಶ್ಯಗಳು, ಪುರುಷೋತ್ತಮ ಅಡ್ವೆಯವರ ಜನಪದ ಶೈಲಿಯ ಗೌರಿಗಣೇಶ, ಕಂದನ್‌ ಅವರ ಆಧುನಿಕ ಷೇರ್‌ಗೂಳಿ, ಶಿವಪ್ಪ ಹಾದಿಮನಿಯವರ ರಾಧಾಕೃಷ್ಣ ಡೈಮಂಡ್‌ ಸ್ಟ್ರೋಕ್‌ ಚಿತ್ರ, ಜಯವಂತ್‌ ಅವರ ಟೆಕÏ$cರ್‌ ಗೂಳಿ, ಶ್ರೀನಾಥ್‌ ಅವರ ನವಚೌಕದ ಜನಪದ ಮುಖವರ್ಣಿಕೆ, ಮಂಜುನಾಥ ಮಯ್ಯರ ಅಕ್ವೇರಿಯಂ, ಅಶೋಕ್‌ ಶೇಟ್‌ಅವರ ಚಿಂತನಾತ್ಮಕ ಶೈಲಿಯ ಚಿತ್ರ, ಸಿಂಧು ಕಾಮತ್‌ ಚಿತ್ರಿಸಿದ ಸ್ಟ್ರೋಕ್‌ ಶೈಲಿಯ ಭಾವಚಿತ್ರಗಳು, ವೀಣಾ ಶ್ರೀನಿವಾಸ್‌ ಅವರ ರಾಧಾಕೃಷ್ಣ ಕಾವಿಚಿತ್ರ ಕಲಾಕೃತಿಗಳು ಆಕರ್ಷಕವಾಗಿದ್ದವು. 

ಉಡುಪಿ ರಥಬೀದಿಯ ದೃಶ್ಯವನ್ನು ವಿಭಿನ್ನ ಶೈಲಿಗಳಲ್ಲಿ ಗಣೇಶ್‌ ಕೆ. ಮತ್ತು ಮುಸ್ತಾಫ‌ ಕೆ.ಪಿ. ಚಿತ್ರಿಸಿದ್ದರು. ಕಲಾವಿದರಾದ ನಾಗರಾಜ ಹನೆಹಳ್ಳಿಯವರ ರೇಖಾಶೈಲಿಯ ವೀಣಾ ವಾದಕಿ, ರಾಜೇಂದ್ರ ಕೇದಿಗೆಯವರ ಜೀವನ ಸ್ಕೆಚ್‌ಗಳು, ಶೈಲೇಶ್‌ ಕೋಟ್ಯಾನ್‌ ಚಿತ್ರಿಸಿದ ನೈಜಶೈಲಿಯ ಗೊಲ್ಲಕೃಷ್ಣ, ಜನಾರ್ದನ ಹಾವಂಜೆಯವರ ಪಂಚೆ ಕಲಾಕೃತಿ,  ವಿಘ್ನೇಶ್‌ ಕಳತ್ತೂರು ಚಿತ್ರಿಸಿದ ಸ್ವಾತಂತ್ರ್ಯ ಪಾರಿವಾಳ, ಅರುಣ ಅಮೀನ್‌ರ ಚದುರಿದ ಭೂದೃಶ್ಯಗಳು, ಖುರ್ಷಿದ್‌ ಯಾಕೂಬ್‌ ಅವರ ಮಿನಿಯೇಚರ್‌ ಚಿತ್ರ, ಜೀವನ್‌ ಅವರ  ಯಕ್ಷಮುಖ, ಲಿಯಾಕತ್‌ ಅಲಿಯವರ ಎಸಳುಗಳ ಚಿತ್ರ, ಹಾಗೆಯೇ ಸಕು ಪಾಂಗಾಳ, ಸಂತೋಷ್‌ ಪೈ, ಪವನ್‌ ಕುಮಾರ್‌ ಅತ್ತಾವರರ ಕಲಾಕೃತಿಗಳು ಸಹಾ ವೈವಿಧ್ಯಮಯವಾಗಿದ್ದವು. ಅನೇಕ ಗಣ್ಯರು ಕಲಾಕೃತಿಗಳನ್ನು ವೀಕ್ಷಿಸಿ ಪ್ರಶಂಸಿಸಿದರು. ಸ್ಥಳದಲ್ಲಿಯೇ ಹಲವು ಕಲಾಕೃತಿಗಳು ಮಾರಾಟವಾಗಿರುವುದು ಕಲಾಪ್ರದರ್ಶನದ ಸಫ‌ಲತೆಯನ್ನು ಎತ್ತಿ ತೋರಿಸುತ್ತದೆ. ರಜತ ವರ್ಷಾಚರಣೆಯ ಅಂಗವಾಗಿ ಆರ್ಟಿಸ್ಟ್ಸ್ ಫೋರಂ ವರ್ಷವಿಡೀ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಉಪಾಧ್ಯಾಯ ಮೂಡುಬೆಳ್ಳೆ

Advertisement
Advertisement

Udayavani is now on Telegram. Click here to join our channel and stay updated with the latest news.

Next