ಕಲಬುರಗಿ: ಸರ್ಕಾರ ರೂಪಿಸಿರುವ ಯೋಜನೆಗಳನ್ನು ಕಲಾವಿದರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಆ ಮೂಲಕ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಬದ್ಧತೆಯಿಂದ ಕೆಲಸ ಮಾಡಲಾಗುತ್ತಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ, ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಗುರುವಾರ ಶ್ರೀ ಕನಕ ಪುರಂದರ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದರಾದ ವಿಧವೆಯರಿಗೆ 500ರೂ. ಮಾಸಾಶನ, ಕಲಾವಿದರಿಗೆ 2 ಸಾವಿರ ರೂ. ಮಾಸಾಶನ ನೀಡಲಾಗುತ್ತಿದೆ. ಅಲ್ಲದೇ ಸಂಘ-ಸಂಸ್ಥೆಗಳ ಆರ್ಥಿಕ ಬಲವರ್ಧನೆಗೂ ಇಲಾಖೆ ಶ್ರಮಿಸಲಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಭೀಮಾಶಂಕರ ಫಿರೋಜಾಬಾದ್ ಮಾತನಾಡಿ, ಅಖಂಡ ಕರ್ನಾ ಟಕಕ್ಕೆ ಏಕರೂಪದ ಸಾಂಸ್ಕೃತಿಕ ನೀತಿ ಜಾರಿಗೆ ತರುವುದು ಅವಶ್ಯ. ಆದರೆ, ಕಲ್ಯಾಣ ಕರ್ನಾಟಕ ಭಾಗವನ್ನು ಸಾಂಸ್ಕೃತಿಕವಾಗಿ ಕಡೆಗಣಿಸಲಾಗುತ್ತಿದೆ. ಈ ಭಾಗದ ಕಲಾವಿದರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೌಲಭ್ಯ ಪಡೆದುಕೊಂಡು ಕಲಾವಿದರ ಬದುಕು ಹಸನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಗೃಹ ನಿರ್ಮಾಣದ ಕೋಶಾಧ್ಯಕ್ಷ ಎಸ್. ಪಿ. ಸುಳ್ಳದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಸಂಘದ ಅಧ್ಯಕ್ಷ ಬಸಯ್ಯ ಬಿ. ಗುತ್ತೇದಾರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಹನೀಫಾ ಶೇಖ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಬಿ. ಗುತ್ತೇದಾರ, ಆಳಂದ ಘಟಕದ ಅಧ್ಯಕ್ಷ ಸಿದ್ಧರಾಮ ಪಾಟೀಲ, ಶಹಾಬಾದ ಘಟಕದ ಅಧ್ಯಕ್ಷ ಶಿವಪುತ್ರ ಕರಣಿಕ ಇತರರು ಇದ್ದರು.
ಬಸಯ್ಯ ನಿರೂಪಿಸಿದರು. ಆಕಾಶವಾಣಿ ಕಲಾವಿದ ಅಣ್ಣಾರಾವ್ ಶೆಳ್ಳಗಿ, ಮತ್ತಿಮುಡ ಪ್ರಾರ್ಥನೆ ಗೀತೆ ಹಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಾಬುರಾವ ಕೋಬಾಳ ವಂದಿಸಿದರು. ನಂತರ ಕಲಾವಿದರಾದ ಸೈದಪ್ಪ ಸಪ್ಪನಗೋಳ, ಬಲಭೀಮ ನೆಲೋಗಿ, ಮಹಾಂತಪ್ಪ ಮಂದೇವಾಲ, ಚೇತನ ಬಿ.ಕೆ, ವಿಜಯಲಕ್ಷ್ಮೀ ಕೆಂಗನಾಳ, ಅಶ್ವಿನಿ ಹಿರೇಮಠ ಸಂಗೀತ ಸೇವೆ ನಡೆಸಿಕೊಟ್ಟರು.