ಕೊಡಗು ಮತ್ತು ಕೇರಳದ ಮಹಾ ಪ್ರವಾಹದ ಹಾನಿಗೆ ಪರಿಹಾರವಾಗಿ ಹಲವರು ದಾನ ನೀಡಿದಾಗ ಮಣಿಪಾಲ ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾರ ಈ ದುರಂತಕ್ಕೆ ಕಲಾತ್ಮಕವಾಗಿ ಹೇಗೆ ಪರಿಹಾರ ನೀಡಬಹುದು ಎಂದು ಆಲೋಚಿಸಿ ಪ್ರವೃತ್ತರಾಗುತ್ತಾರೆ. ತನ್ನ ಬಳಗದ ಕಲಾವಿದ್ಯಾರ್ಥಿಗಳೊಡನೆ ಸಮಾಲೋಚನೆ ನಡೆಸಿ ಕಲಾಕೃತಿ ರಚಿಸಿ-ಪ್ರದರ್ಶಿಸಿ-ಮಾರಾಟಮಾಡಿ ಬಂದ ಹಣವನ್ನೆಲ್ಲಾ ನೆರೆ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆಯುತ್ತಾರೆ.
ಕಲಾಕೃತಿ ರಚನೆಗೆ ಯಾವ ವಿಷಯ ಪ್ರಸ್ತುತ ಎನ್ನುವಾಗ ಅವರಿಗೆ ಎದುರಾದದ್ದು ಗೋಮಾತೆ. ನಡೆದಾಡುವ ದೇವತೆ, ಸನಾತನ ಸಂಸ್ಕೃತಿಯ ಪ್ರತೀಕ, ಕಾಮಧೇನು. ಹೀಗೆ ಭಾವನಾತ್ಮಕವಾದ ನಿಲುವಿನೊಂದಿಗೆ ಮುಗ್ಧತೆಗೆ ಸಾಕ್ಷಿಯಾದ ಗೋವು-ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ಕಲಾತ್ಮಕ ಕ್ಷೇತ್ರದಲ್ಲಿ ಅದ್ಭುತ ಸ್ಥಾನ ಹೊಂದಿರುವ ದೈವೀ ಶಕ್ತಿ. ಇಂತಹ ಶಕ್ತಿಯ ಸಾರವನ್ನು ವಿದ್ಯಾರ್ಥಿಗಳಿಗೆ ಉಣಬಡಿಸಿ ಅವರಿಂದ ಸೃಜನಾತ್ಮಕ ಚಿತ್ರಕಲಾಕೃತಿಗಳು ಮೂಡಿಬರುವಂತೆ ಮಾಡಿ, ಅವುಗಳನ್ನು ಸೂಕ್ತ ವೇದಿಕೆಯಲ್ಲಿ ಪ್ರದರ್ಶಿಸಿ, ಜನಸಾಮಾನ್ಯರಿಗೆ ಸಂದೇಶವನ್ನು ಸಾರಿ, ಕಡಿಮೆ ಬೆಲೆಗೆ ಕಲಾಕೃತಿಗಳನ್ನು ಮಾರಾಟಮಾಡಿ ಸುಮಾರು ಐವತ್ತು ಸಾವಿರದಷ್ಟು ನಿಧಿ ಸಂಗ್ರಹಿಸಿ ಕೊಡಗಿನ ಪರಿಹಾರಕ್ಕೆ ನೀಡಿದ್ದಾರೆ.
ಪುಟಾಣಿ ಕಲಾವಿದರಾದ ಆಸ್ತಿಕ್ ಭಾಗವತ್, ವೈಷ್ಣವಿ ಅಡಿಗ, ಆದಿತ್ಯ ಕಾಮತ್, ಅಮೃದಾ ಎಸ್., ಅಮೂಲ್ಯ ಶೇಟ್, ಅನ್ನಪೂರ್ಣ ಶೆಣೈ, ಅನುಷ ಎ. ಎಸ್., ಅಶ್ವಿನ್ ಕುಮಾರ್ ಜಿ. ರಾವ್, ಅಶ್ವಿನ್ ವಿ, ಭುವನ್ ಆರ್., ಬಿ. ವಿನೀತ್ ಶೇರೆಗಾರ್, ಚೈತಾಲಿ ಎ. ಯು. ಚಿರಾಗ್, ಧ್ರುವ ಶೆಟ್ಟಿ, ಗಗನ್ ಎಂ. ಶೆಟ್ಟಿ, ಹರಿತಾ ಅಲಪಾಟಿ, ಕೌಸಲ್ಯ ಎಂ. ಕೆ, ಕೆ. ದೀಕ್ಷಾ ಶೇಟ್, ಕೆ. ತುಷಾರ್, ಲಾವಣ್ಯ ಪ್ರಭು, ಮನೀಷ್ ಎಸ್. ಶೆಟ್ಟಿ, ಎಂ. ಗಾಯತ್ರಿ, ಮಿಥಾಲಿ ಜಿ., ನಿಶ್ಮಿತ್ ಎ.ಎಸ್., ಪೂಜಾ ಶೇಟ್, ಪೂರವ್ ಆರ್. ಶೆಟ್ಟಿ, ಪೂರ್ವಿ ಎಸ್., ಪ್ರಭು ಸುಷ್ಮಾ ಎಸ್, ಪ್ರಣವ್ ಆಚಾರ್ಯ, ಪ್ರತೀಕ್ ಜಿ. ರಚನಾ ಎಂ, ರೋಶ್ನಿ ಆರ್. ಭಕ್ತ, ಸಂಪ್ರದಾ, ಶ್ರೀಯಾ, ಸೃಜಿತ್, ಸ್ಟೆನಿಲಾ ಡಿಸೋಜಾ, ಸುನಿಧಿ ಹೆಬ್ಟಾರ್, ಉಜ್ವಲಾ ಶೇಟ್, ವಿಶಾಕ್…ಹೀಗೆ ಒಟ್ಟು 39 ವಿದ್ಯಾರ್ಥಿಗಳು ತಮ್ಮದೇ ಅಭಿವ್ಯಕ್ತಿಯಲ್ಲಿ ಗೋವುಗಳ ನಾನಾ ಸ್ವರೂಪಗಳನ್ನು, ಮಮತೆ-ಮಾಧುರ್ಯಗಳನ್ನು ಚಿತ್ರಿಸಿದರು. ಇವರಿಗೆ ಮಾರ್ಗದರ್ಶಕರಾಗಿ ಹರೀಶ್ ಸಾಗಾ, ಪವಿತ್ರಾ ಸಿ. ಮತ್ತು ನಯನಾ ಮಕ್ಕಳಿಗೆ ಚಿತ್ರಸಂಯೋಜನೆ, ವರ್ಣಸಂಯೋಜನೆಗಳನ್ನು ಹೇಳಿಕೊಟ್ಟರು.ಗೋನಿಧಿ ಶೀರ್ಷಿಕೆಯಡಿ ಕುಂದಾಪುರ ಮತ್ತು ಮಣಿಪಾಲದ ಆರ್. ಎಸ್. ಬಿ. ಭವನದಲ್ಲಿ ಪ್ರದರ್ಶಿಸಿ ಮನಗೆದ್ದರು.
ಉಪಾಧ್ಯಾಯ ಮೂಡುಬೆಳ್ಳೆ