ಕಲಾವಿದ ತನ್ನ ವಿದ್ಯೆಯಲ್ಲಿ ಪರಿಪೂರ್ಣತೆಯೆಡೆಗೆ ಸಾಗುವುದು ಹೇಗೆ? ಕಲಾವಿದನ ಗುಣಲಕ್ಷಣಗಳು ಹೇಗಿರಬೇಕು ಎಂಬುದನ್ನು ವಿಮರ್ಶಿಸಿಕೊಂಡು ಕಲಾವಿದನ ಹಂತಕ್ಕೆ ಏರಬೇಕು. ದಿಢೀರನೆ ಕಲಾವಿದನಾಗಿ ಬೇಗನೆ ಪ್ರಸಿದ್ಧಿಯಾಗಿ, ಹೇರಳ ಹಣಗಳಿಸುವುದೇ ನಮ್ಮ ಗುರಿಯಾಗಬಾರದು.
ಚಿತ್ರಕಲಾವಿದನೊಬ್ಬ ಕಲಾಕೃತಿಯನ್ನು ರಚಿಸಿ ಪ್ರದರ್ಶನಕ್ಕಿಟ್ಟಾಗ ಸಮಾಜಕ್ಕೆ ಅದರ ಸಂದೇಶವೇನು? ಕೊಡುಗೆಯೇನು? ಎಂಬುದನ್ನು ವಿಮರ್ಶಿಸದೆ ನಾವು ಅದನ್ನು ಹೊಗಳುವುದು, ಗುಣದೋಷಗಳಿದ್ದರೂ ಕಲಾವಿದನ ಹೆಸರಿನ ಪ್ರಸಿದ್ಧಿಯ ಮೇಲೆ ಅವನ ಕಲಾಕೃತಿಯನ್ನು ಹೊಗಳುವುದು ಕಲಾವಿದನ ಬೆಳವಣಿಗೆಗೆ ಧಕ್ಕೆ ತರುತ್ತದೆ. ಕಲಾವಿದನ ಮಾನದಂಡವನ್ನು ಮೇರುಕೃತಿ ವಿಷ್ಣುಧರ್ಮೋತ್ತರದಲ್ಲಿ ತಿಳಿಸಿದ್ದಾರೆ. ಆ ವಿಚಾರಗಳು ಪ್ರಾಚೀನವಾದರೂ ಇಂದಿಗೂ ಸಲ್ಲುತ್ತವೆ. ಚಿತ್ರಕಲೆಯಲ್ಲಿ ಹೊಸ ಪ್ರಯೋಗಗಳು, ಶೈಲಿಗಳು ಬರುತ್ತಿರುವುದಾದರೂ ಕಲಾವಿದನಿಗೆ ಚಿತ್ರಕಲೆಯ ಮೂಲಭೂತ ಅಂಶಗಳು ಸರಿಯಾಗಿ ತಿಳಿದಿರದಿದ್ದರೆ ಅವನ ಕಲಾಕೃತಿಗಳು ಗುಣಮಟ್ಟ ಸಾಧಿಸದೆ ಹೋಗಬಹುದು.
ಮೂಲತಃ ಚಿತ್ರಕಲಾವಿದ ರೇಖಾತಜ್ಞನಾಗಿರಬೇಕು. ರೇಖಾಂ ಪ್ರಶಂಸಂತಿ ಆಚಾರ್ಯಃ ಎನ್ನುವಂತೆ ಬರೆಯುವ ರೇಖೆಗಳು ಸ್ಪಷ್ಟ ಹಾಗೂ ಸಂಸ್ಕಾರಭೂಷಿತವಾಗಿರಬೇಕು. ಸುಸ್ನಿಗ್ಧ ವಿಸ್ಪಷ್ಟ ಸುವರ್ಣರೇಖಂ ವಿದ್ವಾನ್ ಯಥಾದೇಶ ವಿಶೇಷವೇಶಂ| ಪ್ರಮಾಣ ಶೋಭಾಭಿರಹಿಯೆ ಮಾನಂಕೃತಂ ಭವೇಚ್ಚಿತ್ರಮಾತೀವಚಿತ್ರಂ|| ಎನ್ನುವಂತೆ ಚಿತ್ರ ಚೆನ್ನಾಗಿ ಮೈದಳೆಯಲು ರೇಖೆಗಳು ನವಿರಾಗಿರಬೇಕು. ಆಯಾ ಸಂಸ್ಕೃತಿಗನುಗುಣವಾಗಿ ಉಡುಗೆ-ತೊಡುಗೆಗಳು, ಅಲಂಕಾರ-ಆಭರಣಗಳಿರಬೇಕು. ತರಂಗಾಗ್ನಿ-ಶಿಕಾಧೂಮ-ವೈಜಯಂತ್ಯಂಬರಾಧಿಕಂ| ವಾಯುಗತ್ಯಾ ಲಿಖೇದ್ಯಸ್ತು ವಿಜ್ಞೆàಯಃ ಸ ತುಚಿತ್ರವಿತ್|| ಚಿತ್ರದೊಳಗೆ ಗಾಳಿ, ಅಲೆ, ಬೆಂಕಿ, ಹೊಗೆ, ಬಾವುಟ, ಮೋಡ ಮುಂತಾದುವುಗಳು ಗಾಳಿಯ ಹೊಡೆತಕ್ಕೆ ಸಿಕ್ಕಿದಂತೆ ಚಿತ್ರಿಸಬಲ್ಲವನೇ ದಿಟವಾದ ಚಿತ್ರಗಾರ. ಸುಪ್ರಜ್ಞ ಚೇತನಾಯುಕ್ತಂ ಮೃತಂ ಚೈತನ್ಯ ವರ್ಜಿತಂ| ನಿಮೊ°àನ್ನತ ಭಾಗಂ ಚ ಯ: ಕರೋತಿ ಸ ಚಿತ್ರವಿತ್|| ಚೇತನಾಯುಕ್ತ ವಸ್ತುಗಳನ್ನೂ, ಕಳೆಗುಂದಿರುವ ವಸ್ತುಗಳನ್ನೂ, ವಾಸ್ತವವಾಗಿರುವ ಉಬ್ಬುತಗ್ಗುಗಳನ್ನೂ ಯಥಾವತ್ತಾಗಿ ಚಿತ್ರಿಸಬಲ್ಲವನೇ ಶ್ರೇಷ್ಠ ಚಿತ್ರಕಾರ.
ವಸ್ತುವಿನಲ್ಲಿ, ದೃಶ್ಯದಲ್ಲಿ ಕಣ್ಣಾರೆ ಕಾಣದೆ ಇರುವ ಅಂಶಗಳನ್ನು (ಎಂದರೆ ಲಾಲಿತ್ಯ, ಮಾರ್ದನ, ಕಾಠಿಣ್ಯ) ನವರಸಭಾವಗಳನ್ನು (ಶೃಂಗಾರ, ವೀರ, ಕರುಣ, ಅದ್ಭುತ, ಹಾಸ್ಯ, ಭಯಾನಕ, ಭೀಭತ್ಸ, ರೌದ್ರ, ಶಾಂತ) ಋತುಧರ್ಮ, ವಯೋಧರ್ಮ, ಮನೋಧರ್ಮಗಳನ್ನು ಚಿತ್ರದಲ್ಲಿ ಮೂಡಿಸಬೇಕು. ಮುಖ್ಯ ವಿಷಯದ ಕಡೆಗೆ ವೀಕ್ಷಕರ ಗಮನ ಹರಿಯುವಂತೆ ರೇಖಾವಿನ್ಯಾಸ ಮತ್ತು ವರ್ಣಸಂಯೋಜನೆಗಳಿರಬೇಕು. ನೋಡುಗರಲ್ಲಿ ವಿವಿಧ ಭಾವನೆಗಳು ಏರ್ಪಡುವಂತೆ (ಲಿರಿಕಲ್) ಚಿತ್ರಗಾರ ತನ್ನ ಕೌಶಲ್ಯವನ್ನು ತೋರ್ಪಡಿಸಬೇಕು.
ದುರಾಸನಂ ದುರಾನೀತಂ ವಿಪಾಸಾ ಚಾನ್ಯಚಿತ್ತತಾ| ಏತೇಚಿತ್ರ ವಿನಾಶಸ್ಯ ಹೇತವಃ ಪರಿಕೀರ್ತಿತಾ|| ಕಲಾವಿದ ಚಿತ್ರವನ್ನು ರಚಿಸುವಾಗ ನೆಮ್ಮದಿಯಿಂದ ಕೂಡದೆ ಇರುವುದು, ನೀರಡಿಕೆ-ನಿದ್ರಾಯಾಸದಿಂದ ಬಳಲಿರುವುದು, ಮನಸ್ಸು ಬೇರೆಲ್ಲೋ ಹರಿದಿರುವುದು, ಚಿತ್ರಿಸುವ ವಿಷಯದ ಬಗ್ಗೆ ಮಾನಸಿಕ ಸಿದ್ಧತೆ ನಡೆಸದಿರುವುದು ಚಿತ್ರ ಕೆಡಲು ಕಾರಣವಾಗುತ್ತದೆ.
ವಿಷ್ಣುಧರ್ಮೋತ್ತರದಲ್ಲಿರುವಂತೆ ಇನ್ನಿತರ ಪ್ರಾಚೀನ ಕೃತಿಗಳಲ್ಲಿಯೂ ಕಲೆಯ ಬಗ್ಗೆ ಪುಷ್ಟಿದಾಯಕ ಅಂಶಗಳಿವೆ. ದುರದೃಷ್ಟವೆಂದರೆ ಇಂದು ಹೆಚ್ಚಿನ ಕಲಾವಿದರಿಗೆ ಇಂತಹ ಕೃತಿಗಳನ್ನು ಓದುವ ಹವ್ಯಾಸವಿಲ್ಲ. ತಾವು ರಚಿಸಿದ್ದೇ ಕಲಾಕೃತಿ ಎಂಬ ಉದ್ಧಟತನದಿಂದ ಏನೇನನ್ನೋ ಚಿತ್ರಿಸುವುದಿದೆ. ಕೃತಿಚೌರ್ಯ ನಡೆಸಿ ಸ್ವಲ್ಪ ತಿರುಚಿ ತನ್ನ ಹೊಸ ಸೃಷ್ಟಿ ಎಂದು ಹೇಳುವುದಿದೆ. ಈ ಪ್ರವೃತ್ತಿ ನಿಲ್ಲಬೇಕು. ಕಲಾಕೃತಿ ಎಷ್ಟು ಮುಖ್ಯವೋ ಕಲೆಯ ಬಗ್ಗೆ ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯವಾಗುತ್ತದೆ.
– ಉಪಾಧ್ಯಾಯ ಮೂಡುಬೆಳ್ಳೆ