Advertisement

ಮೈಸೂರು ದಸರಾ ಗಜಪಡೆಗೆ ಫಿರಂಗಿ ತಾಲೀಮು; ಬೆದರಿದ ಸುಗ್ರೀವ, ಪಾರ್ಥಸಾರಥಿ: ಇಲ್ಲಿದೆ ಚಿತ್ರಗಳು

01:28 PM Sep 12, 2022 | Team Udayavani |

ಮೈಸೂರು: ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗಜಪಡೆ ಹಾಗೂ ಅಶ್ವದಳಕ್ಕೆ ಭಾರೀ ಸದ್ದಿನ ಪರಿಚಯ ಮಾಡಿಸುವ ಸಲುವಾಗಿ ಮೊದಲ ಸುತ್ತಿನ ಫಿರಂಗಿ ತಾಲೀಮು ನಡೆಸಲಾಯಿತು. ಈ ವೇಳೆ ಫಿರಂಗಿಯಿಂದ ಹೊಮ್ಮಿದ ಭಾರಿ ಶಬ್ಧಕ್ಕೆ ಹೊಸ ಆನೆಗಳು ಬೆದರಿದ ಪ್ರಸಂಗ ನಡೆಯಿತು.

Advertisement

ಜಂಬೂ ಸವಾರಿಯಂದು ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ 21 ಸುತ್ತು ಕುಶಾಲತೋಪು ಸಿಡಿಸುವ ಸಂಪ್ರದಾಯವಿದ್ದು, ಈ ವೇಳೆ ಭಾರೀ ಸದ್ದಿಗೆ ಆನೆಗಳು ಹಾಗೂ ಅಶ್ವದಳ ಬೆದರದಂತೆ ಅಭ್ಯಾಸ ಮಾಡಿಸುವ ಸಲುವಾಗಿ ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿಯ ಪಾರ್ಕಿಂಗ್ ಆವರಣದಲ್ಲಿ ಮೊದಲ ಹಂತದ ಫಿರಂಗಿ ತಾಲೀಮು ನಡೆಸಲಾಯಿತು. ಪಿರಂಗಿ ದಳದ 30 ಮಂದಿ ಸಿಎಆರ್ ಪೊಲೀಸರು 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21 ಸಿಡಿಮದ್ದನ್ನು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಭಾರೀ ಶಬ್ಧದ ತಾಲೀಮು ನೀಡಿದರು. ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರ, ಲಕ್ಷ್ಮೀ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಅರ್ಜುನ, ಪಾರ್ಥಸಾರಥಿ, ಸುಗ್ರೀವ, ಶ್ರೀರಾಮ, ವಿಜಯ, ಗೋಪಿ ಸೇರಿದಂತೆ ಅಶ್ವಾರೋಹಿ ದಳದ 40ಕ್ಕೂ ಹೆಚ್ಚು ಕುದುರೆಗಳು ಭಾಗವಹಿಸಿದ್ದವು.

ಬೆದರಿದ ಸುಗ್ರೀವ, ಪಾರ್ಥಸಾರಥಿ: ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸಿರುವ ಸುಗ್ರೀವ, ಭೀಮ ಪಾರ್ಥಸಾರಥಿ, ಭೀಮ ಅನೆಗಳು‌ ಸಿಡಿಮದ್ದಿನ ಭಾರೀ ಶಬ್ದಕ್ಕೆ ಬೆದರಿದವು. ಮುಂಜಾಗ್ರತಾ ಕ್ರಮವಾಗಿ ಈ ಆನೆಗಳ ಕಾಲಿಗೆ ಸರಪಳಿ ಕಟ್ಟಿ ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಮೊದಲ ಸುತ್ತಿನ ಸಿಡಿಮದ್ದು ಸಿಡಿಸುತ್ತಿದ್ದಂತೆ, ಬೆದರಿ ಹಿಂದೆ ಮುಂದೆ ಚಲಿಸಲಾರಂಭಿಸಿದವು. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಕಳೆದ ಎರಡು ವರ್ಷಗಳಿಂದ ಭಾಗವಹಿಸುತ್ತಿರುವ ಧನಂಜಯ ಈ ಬಾರಿಯೂ ಭಾರೀ ಶಬ್ದಕ್ಕೆ ಬೆದರಿದ.

ಇದನ್ನೂ ಓದಿ:ಹೀರೋ ಆದ ನೃತ್ಯ ನಿರ್ದೇಶಕ: ‘ರಾಜ ರಾಣಿ ರೋರರ್‌ ರಾಕೆಟ್‌’ ಮೂಲಕ ಬರುತ್ತಿದ್ದಾರೆ ಭೂಷಣ್

ಬೆಚ್ಚದ ಅರ್ಜುನ, ಅಭಿಮನ್ಯು: ಸಿಡಿಮದ್ದು ತಾಲೀಮಿನಲ್ಲಿ ಎಂದಿನಂತೆ ಈ ಬಾರಿಯೂ ಗಜಪಡೆಯ ಹಾಲಿ ಕ್ಯಾಪ್ಟನ್ ಅಭಿಮನ್ಯು, ಮಾಜಿ ಕ್ಯಾಪ್ಟನ್ ಅರ್ಜುನ ಕೊಂಚವೂ ಬೆದರದೆ ಧೈರ್ಯ ಪ್ರದರ್ಶಿಸಿದವು. ಸಿಡಿಮದ್ದು ಸಿಡಿಸುತ್ತಿದ್ದಂತೆ ಹೊಮ್ಮಿದ ಭಾರೀ ಶಬ್ದಕ್ಕೆ ಎದೆ ಝಲ್ ಎಂದರೂ ಈ ಆನೆಗಳು ಬೆಚ್ಚಲಿಲ್ಲ. ಬದಲಿಗೆ ಜಂಬೂ ಸವಾರಿಯಂದು ಸಿಡಿಮದ್ದು ಸಿಡಿಸುತ್ತಿದ್ದಂತೆ ಮುಂದಡಿಯಿಡುವ ಅಭ್ಯಾಸವಾಗಿ ಅಂತೆಯೇ ಮುಂದಕ್ಕೆ ಹೆಜ್ಜೆ ಹಾಕಿದವು. ಇದೇ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಮಹೇಂದ್ರ ಆನೆ ಬೆಚ್ಚದೆ ತಾಲೀಮು ಯಶಸ್ವಿಗೊಳಿಸಿತು.

Advertisement

ಬೆದರಿದ ಕುದುರೆ, ಘೀಳಿಟ್ಟ ಆನೆಗಳು: ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮುಂದೆ ಅಶ್ವದಳ ಕುದುರೆಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅಶ್ವದಳ ಕುದುರೆಯೊಂದು ಗಾಬರಿಗೊಂಡು ಆನೆಗಳತ್ತ ಸಾಗಿತು. ಇದರಿಂದ ವಿಚಲಿತಗೊಂಡ ಆನೆಗಳು ಘೀಳಿಟ್ಟವು. ಕೊನೆಗೆ ಕುದುರೆಯನ್ನು ನಿಯಂತ್ರಿಸಿ ಬೇರೆ ಕಡೆಗೆ ಕರೆದೊಯ್ದು ಪರಿಸ್ಥಿತಿ ನಿಯಂತ್ರಿಸಲಾಯಿತು.

ಈ ಸಂದರ್ಭ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾ ಪ್ರಸನ್ನ, ಡಿಸಿಎಫ್ ಡಾ.ವಿ.ಕರಿಕಾಳನ್, ಆನೆ ವೈದ್ಯ ಮುಜೀಬ್ ಸೇರಿದಂತೆ ಹಲವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next