Advertisement

ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ ಪ್ರಯೋಜನಕಾರಿ: ಡಾ| ನಿರಂಜನ ವಾನಳ್ಳಿ

05:34 PM Dec 05, 2023 | Team Udayavani |

ಬೆಳ್ತಂಗಡಿ: ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಬಲ್ಲ ಯಾಂತ್ರಿಕ ಬುದ್ಧಿಮತ್ತೆಯ (ಆರ್ಟಿಫೀಷಿಯಲ್‌ ಇಂಟಲಿಜೆನ್ಸ್‌) ಜತೆಗೆ ವೃತ್ತಿಪರರು ತಮ್ಮೊಳಗಿನ ಸೃಜನಶೀಲ ಸಾಮರ್ಥ್ಯವನ್ನು ಕಾಯ್ದುಕೊಳ್ಳಬೇಕು. ಕೃತಕ ಬುದ್ಧಿಮತ್ತೆಯಿಂದ ನೈತಿಕಮೌಲ್ಯ ಮತ್ತು ಸಾಮಾಜಿಕ ಜೀವನಕೌಶಲಗಳ ಉದ್ದೀಪನದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಲಿ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ನಿರಂಜನ ವಾನಳ್ಳಿ ಹೇಳಿದರು.

Advertisement

ಉಜಿರೆಯ ಎಸ್‌.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗವು ಡಿ. 4ರಂದು ಆಯೋಜಿಸಿದ “ಮಾನವನ ವರ್ತನೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ ಮತ್ತು ಭವಿಷ್ಯ’ ಎಂಬ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಭವಿಷ್ಯದಲ್ಲಿ ಉದ್ಯೋಗಾವಕಾಶದ ದೃಷ್ಟಿಯಿಂದ ಕೃತಕ ಬುದ್ಧಿಮತ್ತೆ ಆವಶ್ಯಕ ವಾದರೂ ಆಧುನಿಕ ವಿಜ್ಞಾನ ಮತ್ತು
ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಧನೆ, ಪ್ರಗತಿಯ ಹೆಸರಿನಲ್ಲಿ ನಮ್ಮ ಸಹಜವಾದ ಬುದ್ಧಿಮತ್ತೆಯನ್ನು ಅವಗಣಿಸಬಾರದು. ಕೃತಕ ಬುದ್ಧಿಮತ್ತೆ ಅಣುಬಾಂಬಿನಷ್ಟೆ ಅಪಾಯಕಾರಿಯಾಗಿದೆ ಎಂದರು.

ಪ್ರಸ್ತುತ ಕಾಲಘಟ್ಟದಲ್ಲಿ ಡಾಟಾ ವಿಜ್ಞಾನವನ್ನು ಹೊರತುಪಡಿಸಿದರೆ, ಹೆಚ್ಚು ಬೇಡಿಕೆಯಲ್ಲಿರುವ ಮತ್ತೊಂದು ಕ್ಷೇತ್ರವೇ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌. ಮುಂಬರುವ ದಿನಗಳಲ್ಲಿ ಮನುಷ್ಯ ವಲಯದ ಕಾರ್ಯಗಳೆಲ್ಲವೂ ಕೃತಕ ಬುದ್ಧಿ ಮತ್ತೆಯ ಸಹಯೋಗದಲ್ಲಿ ನಡೆಯಲಿವೆ. ಇತ್ತೀಚಿನ ದಿನಗಳಲ್ಲಿ ನಿಸರ್ಗದತ್ತವಾಗಿ ಒದಗಿ ಬಂದ ಸಹಜ ಪ್ರಜ್ಞೆಯನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಆಧುನಿಕ ಮನುಜ ಸೋಲುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.

ಮನೋವಿಜ್ಞಾನ ವಿಭಾಗದ ಗೃಹ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್‌ ಡಾ| ವಿಶ್ವನಾಥ್‌ ಪಿ. ಮಾತನಾಡಿ, ಕೃತಕ ಬುದ್ಧಿಮತ್ತೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಮತ್ತು ಮಹತ್ವ ಹೊಂದಿದರೂ ಇದರಿಂದಾಗಿ
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು, ಸಂಶೋಧನಾ ಪ್ರವೃತ್ತಿ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಕುಂಠಿತವಾಗುವ ಸಾಧ್ಯತೆ ಇದೆ ಎಂದರು.

Advertisement

ಪ್ರಾಂಶುಪಾಲ ಡಾ| ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ| ವಂದನಾ ಜೈನ್‌ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಅಶ್ವಿ‌ನಿ ಎಚ್‌. ವಂದಿಸಿದರು.ಪ್ರಾಧ್ಯಾಪಕಿಯರಾದ ಅಶ್ವಿ‌ನಿ ಶೆಟ್ಟಿ ಮತ್ತು ಸೋನಿಕಾ ನಿರ್ವಹಿಸಿದರು. ವಿಚಾರ ಸಂಕಿರಣದಲ್ಲಿ ದೇಶ- ವಿದೇಶಗಳಿಂದ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next