Advertisement

ಕೃತಕ ಬುದ್ಧಿಮತ್ತೆ ಆತಂಕ ಅನಗತ್ಯವಲ್ಲವೇ?

06:00 AM Nov 16, 2018 | |

ನಮ್ಮ ದೇಶದ ಐಟಿ ಕಂಪೆನಿಗಳು ಕೃತಕ ಬುದ್ಧಿಮತ್ತೆಗೆ ವಿನಿಯೋಗಿಸಿದಷ್ಟೇ ಮೊತ್ತವನ್ನು ತಮ್ಮ ಉದ್ಯೋಗಿಗಳ ಪುನರ್‌ ಕೌಶಲಕ್ಕೆ ಮೀಸಲಿಟ್ಟಿರುವುದು ನಿಜಕ್ಕೂ ಸಂತಸದ ವಿಚಾರ. ಪ್ರಸಿದ್ಧ ಕಂಪೆನಿ ವಿಪ್ರೊ ತನ್ನ ಉದ್ಯೋಗಿಗಳನ್ನು ಸಮಕಾಲೀನ ಕೌಶಲಧಾರಿಗಳನ್ನಾಗಿಸಲು “ನ್ಯೂಟನ್‌ ಕ್ರೇಡಲ್‌’ ಎಂಬ ಯೋಜನೆಯನ್ನು ರೂಪಿಸಿ ಈಗಾಗಲೇ ಅನುಷ್ಠಾನಗೊಳಿಸಿದೆ. 

Advertisement

ಕಾಲ ಎಲ್ಲವನ್ನೂ ನಿರ್ಣಯಿಸುತ್ತದೆ. ಕಾಲದ ಚಿಂತನೆ ಮತ್ತು ಪರಿಣಾಮದಲ್ಲಿ ಗಣಿತ, ತರ್ಕ ಒಳಗೊಂಡು ತುಂಬಾ ನಿಖರತೆಯಿಂದ ಕೂಡಿರುತ್ತದೆ. ಕಾಲದ ತೆಕ್ಕೆಯಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಆಗುಹೋಗುಗಳಲ್ಲೂ ಕಾಲ ನಿರ್ಣಾಯಕ ಪಾತ್ರವಹಿಸುತ್ತದೆ. 

ಕಾಲವನ್ನು ಮೂರು ವಿಧವಾಗಿ ವರ್ಗೀಕರಿಸಲಾಗಿದೆ. ಅವು ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ಕಾಲ. ಪ್ರತಿ ಕಾಲಕ್ಕೂ ಅದರದ್ದೇ ಮಹತ್ವವಿದೆ. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಕಾಲದ ಬಗ್ಗೆ ಸಂಪೂರ್ಣವಾಗಿ ಅರಿತುಕೊಳ್ಳಲು ಅದರ ಒಟ್ಟಾರೆ ಪರಿಣಾಮವನ್ನು ಸಮಷ್ಟಿಯಾಗಿಯೇ ಅನುಭವಿಸಬೇಕು. ಅದರಂತೆ, ಕಾಲಕ್ಕೆ ಸಂಬಂಧಿಸಿದ ಪ್ರತಿ ಆಯ್ಕೆ, ನಿರ್ಣಯದಲ್ಲಿ ಮೂರು ಕಾಲಗಳ ಮಹತ್ವ ಮತ್ತು ಪರಿಣಾಮ ಒಳಗೊಂಡಿರುತ್ತದೆ. ಅದು ಹೇಗೆ? ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ದೇಶ ತನ್ನ ಉದ್ದೇಶ ಈಡೇರಿಸಲು ಮತ್ತು ಏಳಿಗೆಗಾಗಿ ತನ್ನ ಗತಕಾಲದ ಅನುಭವದಲ್ಲಿ ವರ್ತಮಾನವನ್ನು ಅಥೆìçಸಿಕೊಂಡು ಭವಿಷ್ಯತ್ತಿನೆಡೆಗೆ ಹೆಜ್ಜೆ ಹಾಕುವುದನ್ನು ನಾವು ನೋಡುತ್ತೇವೆ. ಗತಕಾಲದಲ್ಲಿ ಸಂಭವಿಸಿದ ಕೆಲವೊಂದು ಘಟನೆಗಳು ನಮ್ಮಿಂದ ಮಾಸದೆ ಹೋಗಬಹುದು. ಆದರೆ ವರ್ತಮಾನದ ಪ್ರತಿಯೊಂದು ಆಗುಹೋಗುಗಳಲ್ಲೂ ನಮಗೆ ಹೆಚ್ಚಿನ ನಿಯಂತ್ರಣವಿರುತ್ತದೆ. ಭವಿಷ್ಯದ ಘಟನೆಗಳನ್ನು ಮುನ್ನಂದಾಜಿಸುವುದು ಸುಲಭವಲ್ಲ.  

ವರ್ತಮಾನದಲ್ಲಿದ್ದುಕೊಂಡೇ ಸುಂದರ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ. ಮಿದುಳು ವಿಜ್ಞಾನಿಗಳ ಪ್ರಕಾರ ಆಲೋಚನೆಗಳನ್ನು ಹುಟ್ಟುಹಾಕುವ ಮತ್ತು ಭವಿಷ್ಯದ ಬಗ್ಗೆ ಚಿಂತಿಸುವ ಮಾನವ ಮಿದುಳಿನ ಅಂಗ ಕ್ಷಣ, ಕ್ಷಣಕ್ಕೂ ವಿಕಾಸ ಹೊಂದುತ್ತಲೇ ಇರುತ್ತದೆ. ಪರಿಣಾಮವಾಗಿ ಪ್ರತಿ ವ್ಯಕ್ತಿ ತಾನು ಬೆಳೆದ ಪರಿಸರ, ಪಡೆದ ಶಿಕ್ಷಣ, ಹೊಂದಿದ ಒಡನಾಟ ಮತ್ತು ಅನುಭವಗಳನ್ನು ಬಳಸಿಕೊಂಡು ತನ್ನ ಭವಿಷ್ಯವನ್ನು ರೂಪಿಸುತ್ತಲೇ ಇರುತ್ತಾನೆ. ಈ ಸರಳ ತಣ್ತೀಸಂಸ್ಥೆ ಮತ್ತು ದೇಶಕ್ಕೂ ಅನ್ವಯಿಸುತ್ತದೆ. 
 
ಹಲವು ಹತ್ತು ನಾಳೆಗಳು ಸೇರಿ ಭವಿಷ್ಯದ ನಿರ್ಮಾಣವಾದರೆ, ಅದು ಸದೃಢ, ಸುಂದರವಾಗಿ ಅನಾವರಣಗೊಳ್ಳಲು ಜ್ಞಾನ, ಭರವಸೆ, ನಂಬಿಕೆ, ಪ್ರಯತ್ನ ಮತ್ತು ಶಿಸ್ತು ಅಗತ್ಯ. ಈ ವಿವರಣೆಯನ್ನು ಪ್ರಸ್ತಾವನೆಯಾಗಿರಿಸಿಕೊಂಡು ಇಂದು ವಿಶ್ವ ದಾದ್ಯಂತ ಕೇಳಿ ಬರುತ್ತಿರುವ “ಕೃತಕ ಬುದ್ಧಿಮತ್ತೆ’ (Artificial Intelligence) ಮತ್ತು ಉದ್ಯೋಗ ಬಿಕ್ಕಟ್ಟಿಗೆ ಸಂಬಂಧಿಸಿದ ಚರ್ಚೆ, ಸಂವಾದವನ್ನು ಜಾಗತಿಕ ದೃಷ್ಟಿಕೋನದಿಂದ ವಸ್ತುನಿಷ್ಠವಾಗಿ ಅವಲೋಕಿಸುವ ಒಂದು ಕಿರುಪ್ರಯತ್ನ ಇದು… 

ಕೃತಕ ಬುದ್ಧಿಮತ್ತೆ ಎಂದರೇನು?: ಸಾಮಾನ್ಯವಾಗಿ ಬುದ್ಧಿಮತ್ತೆಯನ್ನು ಮಾನವನ ಮಿದುಳಿನ ಸಾಮರ್ಥ್ಯ ಮತ್ತು ಅದರ ಕಾರ್ಯಾಚರಣೆಗಳಿಗೆ ಸಂಬಂಧಿಸಿ ವ್ಯಾಖ್ಯಾನಿಸಲಾಗಿದೆ. ಮೂಲಭೂತವಾಗಿ ಬುದ್ಧಿಮತ್ತೆಯನ್ನು ವ್ಯಕ್ತಿಯ ಅಥೆìçಸಿಕೊಳ್ಳುವ ಸಾಮರ್ಥಯವೆಂದೂ ಪರಿಗಣಿಸಲಾಗಿದೆ. ಬುದ್ಧಿಮತ್ತೆಯಲ್ಲಿ ಹಲವು ವಿಧಗಳಿವೆ. ವ್ಯಕ್ತಿಯಿಂದ ವ್ಯಕ್ತಿಗೆ ಅದು ಭಿನ್ನವಾಗಿದೆ. ಮಾನವ ಮಿದುಳಿನ ಬುದ್ಧಿಮತ್ತೆಯನ್ನು “ಸಾಮಾನ್ಯ ಬುದ್ಧಿಮತ್ತೆ’ (General intelligence) ಎನ್ನಲಾಗಿದೆ. ಇದು ದೇವರು ಮಾನವನಿಗೆ ನೀಡಿದ ವರವೂ ಹೌದು. ಕೃತಕ ಬುದ್ಧಿಮತ್ತೆಯ ಗುಣಲಕ್ಷಣ, ಸ್ವಭಾವ ಮತ್ತು ಕಾರ್ಯಚರಣೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ ಅದನ್ನು ಅರಗಿಸಿಕೊಳ್ಳಲು ಹರಸಾಹಸ ಪಡಬೇಕು. ತೀರಾ ಸರಳವಾಗಿ ಕೃತಕ ಬುದ್ಧಿಮತ್ತೆಯನ್ನು ಯಂತ್ರ ಕಲಿಕೆಗೆ (Machine Learning) ತತ್ಸಮಾನಗೊಳಿಸಲಾಗಿದೆ. ಕೃತಕ ಮಿದುಳಿನಿಂದ ನಿರ್ಮಿಸಿದ ಮಾನವ ಯಂತ್ರಗಳು ಮಾನವನ ಹಾಗೆ ಚಿಂತಿಸಿ, ಮಾನವ ರೀತಿಯ ಕಾರ್ಯ ಚಟುವಟಿಕೆಗಳನ್ನು ನಡೆಸುವುದನ್ನು ನೋಡಿದಾಗ ನಿಬ್ಬೆರಗಾಗುತ್ತೇವೆ. ಒಂದರ್ಥದಲ್ಲಿ ಇದನ್ನು ಸ್ವಾಭಾವಿಕ ಬುದ್ಧಿಮತ್ತೆಯ ಮೇಲೆ ಕೃತಕ ಬುದ್ಧಿಮತ್ತೆಯ ವಿಜಯವೆಂದೂ ಹೇಳಬಹುದು.

Advertisement

ಕೃತಕ ಬುದ್ಧಿಮತ್ತೆ ಕ್ರಾಂತಿಸರ್ವವ್ಯಾಪಿ: ಇಂದು ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ ಮತ್ತು ಯಾಂತ್ರೀಕರಣ ವೈವಿಧ್ಯಮಯವಾಗಿ ಶರವೇಗದಲ್ಲಿ ಚಲಿಸುತ್ತಿದೆ. ಸಂಶೋಧಕರು ಕೃತಕ ಬುದ್ಧಿಮತ್ತೆಯನ್ನು “ನಾಲ್ಕನೆಯ ಕೈಗಾರಿಕಾ ಕ್ರಾಂತಿ’ ಎಂದು ಈಗಾಗಲೇ ಬಣ್ಣಿಸಿದ್ದಾರೆ. ಅಮೆರಿಕದಲ್ಲಿ ಸುಮಾರು 78,000 ಮಂದಿ ಸಂಶೋಧಕರು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಂಶೋದನೆಗೈಯುತ್ತಲಿದ್ದು ಚೀನದಲ್ಲಿ 40,000 ಮಂದಿ ಈ ಕ್ಷೇತ್ರದಲ್ಲಿ ಕಾರ್ಯನಿರತರಾಗಿದ್ದಾರೆ. ಜೊತೆಗೆ 2030ರಲ್ಲಿ ಚೀನವು ಕೃತಕ ಬುದ್ಧಿಮತ್ತೆಯಲ್ಲಿ ಜಗತ್ತಿನ “ಸೂಪರ್‌ ಪವರ್‌’ ಪಟ್ಟವೇರಲು ಈಗಾಗಲೇ ತಾಲೀಮು ನಡೆಸಿದೆ. ನಮ್ಮ ದೇಶದ ನೀತಿ ಆಯೋಗ “ಭಾರತದ ಸರ್ವರಿಗೂ ಕೃತಕ ಬುದ್ಧಿಮತ್ತೆ’ ಅನ್ನುವ ಧ್ಯೇಯ ವಾಕ್ಯವನ್ನು ಈಗಾಗಲೇ ಬಿಡುಗಡೆಗೊಳಿಸಿದೆ. ಹಾಗೆಯೇ ಐರೋಪ್ಯ ಒಕ್ಕೂಟ, ಜಪಾನ್‌, ಫ್ರಾನ್ಸ್‌, ಇಂಗ್ಲೆಂಡ್‌ ಮುಂತಾದ ರಾಷ್ಟ್ರಗಳು ಕೃತಕ ಬುದ್ಧಿಮತ್ತೆ ಅಭಿವೃದ್ಧಿಗೆ ಅಪಾರ ಬಂಡ‌ವಾಳವನ್ನು ವಿನಿಯೋಜಿಸುತ್ತಲಿದೆ. ಒಂದು ಮಾತು ನಾವು ಇಲ್ಲಿ ಒಪ್ಪಿಕೊಳ್ಳಲೇ ಬೇಕು. ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ವಿಶ್ವವ್ಯಾಪಿ ಕ್ರಾಂತಿ ನಡೆಯುತ್ತಲಿದೆ. 

ಉದ್ಯೋಗ ಬಿಕ್ಕಟ್ಟು: ಕೃತಕ ಬುದ್ಧಿಮತ್ತೆ ಮತ್ತು ಉದ್ಯೋಗ ಬಿಕ್ಕಟ್ಟಿಗೆ ಸಂಬಂಧಿಸಿ ಇತ್ತೀಚಿಗೆ ಬಿಡುಗಡೆಗೊಂಡ ಕೆಲವೊಂದು ಅಂಕಿಅಂಶಗಳನ್ನು ವಿಶ್ಲೇಷಿಸೋಣ. ಅಮೇರಿಕ ಪ್ರತಿವರ್ಷ 5 ಮಿಲಿಯ ಉದ್ಯೋಗಗಳನ್ನು ತಂತ್ರಜ್ಞಾನ ಮತ್ತು ವ್ಯಾಪಾರದಲ್ಲಾಗುವ ಬದಲಾವಣೆಗಳಿಂದ ಕಳೆದುಕೊಳ್ಳುತ್ತಿದ್ದು,  23 ಮಿಲಿಯದಷ್ಟು ಹೊಸ ಉದ್ಯೋಗಗಳನ್ನು ಅದೇ ಕಾಲಾವಧಿಯಲ್ಲಿ ಸೃಷ್ಟಿಸಿ ಹೊಸ ದಾಖಲೆ ನಿರ್ಮಿಸುತ್ತಿದೆ. 

ಮೆಕಿನ್ಸೆ ಜಾಗತಿಕ ಸಂಸ್ಥೆಯ ವರದಿಯಂತೆ 2030ರ ಸುಮಾರಿಗೆ ಸರಿಸುಮಾರು 15 ಪ್ರತಿಶತದಷ್ಟು ಜಾಗತಿಕ ಕಾರ್ಮಿಕ ವರ್ಗ ಕೃತಕ ಬುದ್ಧಿಮತೆೆ¤ ಅನುಷ್ಠಾನದಿಂದ ಸ್ಥಾನಪಲ್ಲಟಗೊಳ್ಳಲಿದೆ. ಸಾಮಾನ್ಯ ಕೌಶಲ ಮತ್ತು ಜ್ಞಾಪಕ ಶಕ್ತಿಯನ್ನು ಬಯಸುವ ಕೆಲಸಗಳನ್ನು ಯಂತ್ರಗಳು ಸ್ವಾಧೀನಪಡಿಸಿಕೊಂಡು ಅತ್ಯಧಿಕ ಕೌಶಲ ಬಯಸುವ ಕೆಲಸಗಳನ್ನು ಕಾರ್ಮಿಕ ವರ್ಗಕ್ಕೆ ವರ್ಗಾಯಿಸಿ ಉದ್ಯೋಗ ವಲಯದಲ್ಲಿ “ಕೃತಕ ಅಸಮತೋಲನ’ ಸೃಷ್ಟಿಸುವ ಸಾಧ್ಯತೆ ಬಹುತೇಕ ರಾಷ್ಟ್ರಗಳಲ್ಲಿ ತಲೆದೋರಿದೆ. ಈ ಸಂದಿಗ್ಧತೆಯಿಂದ ಹೊರಬರಲು ಕಾರ್ಮಿಕ ವರ್ಗಕ್ಕೆ ಸಂದಭೋìಚಿತವಾಗಿ ಪುನರ್‌ ಕೌಶಲ ಒದಗಿಸುವ ಜವಾಬ್ದಾರಿ ಪ್ರತಿವಲಯದ ಮೇಲಿದೆ. ಉದಾಹರಣೆಗೆ, ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿಯೇ ತರಬೇತಿಗೊಳಿಸುತ್ತಿದ್ದು ಸ್ಪರ್ಧಾತ್ಮಕ ಮಾರುಕಟ್ಟೆಯ ಅವಶ್ಯಕತೆಗಳು ಇದಕ್ಕೆ ಸಂಪೂರ್ಣವಾಗಿ ತದ್ವಿರುದ್ಧವಾಗಿ ಕಾರ್ಯನಿರ್ವಹಿಸುತ್ತದೆ. ಕೃತಕ ಬುದ್ಧಿಮತ್ತೆ, ಇಂಟರ್‌ನೆಟ್‌ ಆಫ್ ಥಿಂಗ್ಸ್‌, ಮೊಬೈಲ್‌ ಟೆಕ್ನಾಲಾಜೀಸ್‌-ಇವೇ ಮುಂತಾದ ವೈವಿಧ್ಯಮಯ ಕೌಶಲಗಳನ್ನು ಮೈಗೂಡಿಸಿಕೊಂಡ ಇಂಜಿನಿಯರ್‌ಗಳಿಗೆ ಉದ್ದಿಮೆಗಳಲ್ಲಿ ಬಹಳಷ್ಟು ಬೇಡಿಕೆಯಿದೆ. ಈಚೆಗೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ. ಮುಂಬರುವ ಐದು ವರ್ಷದೊಳಗೆ ಮಾಹಿತಿ ತಂತ್ರಜ್ಞಾನ ವಲಯದ ಉದ್ಯೋಗಿಗಳು ಕಡ್ಡಾಯವಾಗಿ ಪುನರ್‌ ಕೌಶಲ ಹೊಂದದಿದ್ದಲ್ಲಿ ಅವರು ತಮ್ಮ ಉದ್ಯೋಗಗಳಲ್ಲಿ ಅಪ್ರಸ್ತುತರಾಗುವುದಂತೂ ಖಂಡಿತ. ಭವಿಷ್ಯದ ಭೀತಿ ವರ್ತಮಾನದ ಚಿಂತನೆಯನ್ನು ಹೇಗೆ ಬದಲಿಸುತ್ತದೆ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆಯಲ್ಲವೇ? 

ನಮ್ಮ ದೇಶದ ಐಟಿ ಕಂಪೆನಿಗಳು ಕೃತಕ ಬುದ್ಧಿಮತ್ತೆಗೆ ವಿನಿಯೋಗಿಸಿದಷ್ಟೇ ಮೊತ್ತವನ್ನು ತಮ್ಮ ಉದ್ಯೋಗಿಗಳ ಪುನರ್‌ ಕೌಶಲಕ್ಕೆ ಮೀಸಲಿಟ್ಟಿರುವುದು ನಿಜಕ್ಕೂ ಸಂತಸದ ವಿಚಾರ. ಪ್ರಸಿದ್ಧ ಕಂಪೆನಿ ವಿಪ್ರೊ ತನ್ನ ಉದ್ಯೋಗಿಗಳನ್ನು ಸಮಕಾಲೀನ ಕೌಶಲಧಾರಿಗಳನ್ನಾಗಿಸಲು “ನ್ಯೂಟನ್‌ ಕ್ರೇಡಲ್‌’ ಎಂಬ ಯೋಜನೆಯನ್ನು ರೂಪಿಸಿ ಈಗಾಗಲೇ ಅನುಷ್ಠಾ ನಗೊಳಿಸಿದೆ. 

ಒಂದು ಸಂಖ್ಯಾ ಮಾದರಿ: ಕೃತಕ ಬುದ್ಧಿಮತ್ತೆ ಮತ್ತು ಉದ್ಯೋಗ ಸಮಸ್ಯೆಗೆ ಸಂಬಂಧಿಸಿದ ಚರ್ಚೆಗಳ ಬೆನ್ನಲ್ಲೇ ಕೆಲವೊಂದು ಹೊಸ ಸಂಶೋಧನೆಗಳು ಈ ಬಗ್ಗೆ ಅನಾವಶ್ಯಕ ಭಯಪಡುವ ಅಗತ್ಯವಿಲ್ಲ ಎಂಬುದನ್ನು ಸಾರಿ ಹೇಳುತ್ತಿವೆೆ. ಕೃತಕಬುದ್ಧಿ ಒಂದು ಸುಂದರ “ಸಂಖ್ಯಾಮಾದರಿ’. ಅದು ಮಾನವನ ಸ್ವಾಭಾವಿಕ ಜ್ಞಾನ, ಸಾಮ್ಯರ್ಥಗಳನ್ನು ಸ್ಥಾನಪಲ್ಲಟಗೊಳಿಸಲಾರದು. ಈ ವಾದವನ್ನು ಮುಂದುವರಿಸಿ ಹೇಳುವುದಾದರೆ ಜಗತ್ತಿನ ಅತ್ಯುತ್ತಮ ರೋಬೋಟ್‌ಗಳು ಮಾನವ ನಿರ್ವಹಿಸುವ ಕೆಲವೊಂದು ನಾಜೂಕಾದ ಕೆಲಸ ಕಾರ್ಯಗಳನ್ನು ನಿಭಾಯಿಸಲಾರವು. ಮಾನವ, ಸಂದಿಗ್ಧತೆ, ಸಂಕೀರ್ಣತೆ ಮತ್ತು ಅಡಚಣೆಗ‌ಳನ್ನು ಯಾವುದೇ ಸಂದರ್ಭಗಳಲ್ಲೂ ಅನಾಯಾಸವಾಗಿ ನಿರ್ವಹಿಸಬಲ್ಲ. ನಮಗೆ ಬಿಕ್ಕಟ್ಟಿನ ಸಂದರ್ಭದಲ್ಲಿ “ಎಸ್ಕೇಪ್‌ ರೂಟ್‌’ ಕಂಡುಕೊಳ್ಳಲು “ಸ್ಕ್ರಿಪ್ಟ್’ನ ಸಹಾಯ ಬೇಕಾಗಿ ಬರುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆ ಸಲಕರಣೆಗಳು “ಸ್ಕ್ರಿಪ್ಟ್’ ಇಲ್ಲದೆ ಕಾರ್ಯನಿರ್ವಹಿಸಲಾರವು. ಮಾನವ ತನ್ನ ಪಾದರಸದಂತಿರುವ ಸಾಮಾನ್ಯ ಬುದ್ಧಿಮತ್ತೆಯನ್ನು ಬಳಸಿಕೊಂಡು ಯಾವುದೇ ಸಂದರ್ಭದಲ್ಲೂ ಸ್ವಲ್ಪ ಹೊತ್ತು ನಿಂತು, ಯೋಚಿಸಿ, ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳಬಲ್ಲ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಿದ್ಧಪಡಿಸಿದ ರೋಬೋಟ್‌ಗಳು ಕೆಲವೊಂದು ನಿರ್ದಿಷ್ಟ ಸಂಕುಚಿತ ಸನ್ನಿವೇಶದಲ್ಲಿ ನರ್ತಿಸಿ, ವಿಜೃಂಭಿಸಿದರೆ, ಮಾನವ ಇಡೀ ಜಗತ್ತನ್ನೇ ತನ್ನ ನರ್ತನ ವೇದಿಕೆಯಾಗಿಸಬಲ್ಲ. ಇದರರ್ಥ ಕೃತಕ ಬುದ್ಧಿಮತ್ತೆ ಅಪ್ರಯೋಜಕ ಎಂದು ಭಾವಿಸಬಾರದು. 

ಕೃತಕ ಬುದ್ಧಿಮತ್ತೆಯ ಬಳಕೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತಿವೆ. ಸಂಪನ್ಮೂಲಗಳ ಸಾಮರ್ಥ್ಯ ವೃದ್ಧಿ ಕೃತಕ ಬುದ್ಧಿ ಮತ್ತೆಯ ದೊಡ್ಡ ಕೊಡುಗೆ. ಜಲನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಅಟೋಮೊಬೈಲ್ಸ್‌ ಇತ್ಯಾದಿ ಕ್ಷೇತ್ರಗಳಲ್ಲಿ ಇಚ್ಛಿತ ಫ‌ಲವನ್ನು ನೀಡುತ್ತಿದೆ. ದೇಶದ ಸಮಗ್ರ ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಕೃತಕ ಬುದ್ಧಿಮತ್ತೆಯಿಂದ ಹಾನಿಯಾಗಲಾರದು. ಹೊರಗುತ್ತಿಗೆ ಉದ್ಯೋಗ ಚಟುವಟಿಕೆಗಳು ಇದರಿಂದ ತೊಂದರೆ ಅನುಭವಿಸಲಿವೆ. ಬದಲಾವಣೆಗೆ ಒಗ್ಗಿಕೊಂಡು ಸಮಕಾಲೀನ ಜ್ಞಾನ, ಕೌಶಲ, ಸಾಮರ್ಥ್ಯವನ್ನು ಮೈಗೂಡಿಸಿಕೊಂಡಲ್ಲಿ ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ಕೃತಕ ಭಯ, ಆತಂಕ ತನ್ನಿಂದ ತಾನಾಗಿಯೇ ನೀಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಈ ಕುರಿತು ನಡೆಯುವ ಪ್ರತಿ ಸಂವಾದವನ್ನು “ತಂತ್ರಜ್ಞಾನದಿಂದ ಸಮಾಜಕ್ಕೆ’ ವರ್ಗಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

– ಡಾ| ಸುಧೀರ್‌ ರಾಜ್‌ ಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next