ಬೀದರ್: ರಾಜ್ಯದ 15 ಜಿಲ್ಲೆಗಳಲ್ಲಿ ಹಸು ಮತ್ತು ಎಮ್ಮೆಗಳಲ್ಲಿ ಕೃತಕ ಗರ್ಭಧಾರಣೆಯ ಪ್ರಮಾಣ ಶೇ 50ರಷ್ಟು ಇದ್ದು ಅಧಿಕಾರಿಗಳು ಇನ್ನೂ ಹೆಚ್ಚಿನ ಶ್ರಮವಹಿಸಿ ಶೇ 100 ರಷ್ಟು ಪ್ರಗತಿ ಸಾಧಿಸಲೇ ಬೇಕು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಬೀದರ್ ಜಿಲ್ಲೆಯ ಔರಾದ ತಾಲೂಕಿನಲ್ಲಿ 2ನೇ ಸುತ್ತಿನ “ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮ”ಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದಾಯ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಪಶುಸಂಗೋಪನೆ ಮೇಲೆ ಗ್ರಾಮೀಣ ಭಾಗದ ಜನ ಹೆಚ್ಚು ಅವಲಂಬಿತರಾಗಿದ್ದಾರೆ. ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸಿ ಅವರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿದ್ದರೆ ಹಾಗೂ 15 ಜಿಲ್ಲೆಗಳಲ್ಲಿ “ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮ”ಯಶಸ್ವಿ ಆಗದಿದ್ದರೆ ಅಧಿಕಾರಿಗಳಿಗೆ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದೆಂದು ಸಚಿವರು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹಸು ಮತ್ತು ಎಮ್ಮೆಗಳಲ್ಲಿ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಪ್ರಗತಿ ಶೇ. 50ಕ್ಕಿಂತ ಕಡಿಮೆ ಇರುವ ರಾಜ್ಯದ 17 ಜಿಲ್ಲೆಗಳಲ್ಲಿ (ಬಾಗಲಕೋಟೆ, ಬಳ್ಳಾರಿ, ಬೀದರ, ಬೆಳಗಾವಿ, ಚಿತ್ರದುರ್ಗ, ಚಿಕ್ಕಮಗಳೂರು, ದಾವಣಗೆರೆ, ಧಾರವಾಡ, ಗದಗ, ಕೊಪ್ಪಳ, ಕೊಡಗು, ಕಲಬುರಗಿ, ಶಿವಮೊಗ್ಗಾ, ವಿಜಯಪುರ, ರಾಯಚೂರು, ಯಾದಗಿರಿ ಮತ್ತು ಉತ್ತರಕನ್ನಡ ) ರೈತರ ಮನೆ ಬಾಗಿಲಿನಲ್ಲಿ ಉಚಿತವಾಗಿ ಕೃತಕ ಗರ್ಭಧಾರಣೆ ಸೇವೆ ಒದಗಿಸುವುದು, ಉತ್ಕೃಷ್ಟ ಗುಣಮಟ್ಟದ ಕರುಗಳ ಜನನ, ಹೆಚ್ಚಿನ ಹಾಲು ಉತ್ಪಾದನೆ, ಹೆಚ್ಚು ಹೆಚ್ಚು ರೈತರಿಗೆ ಕೃತಕ ಗರ್ಭಧಾರಣೆ ತಂತ್ರಜ್ಞಾನವನ್ನು ತಲುಪಿಸುವುದು ಮತ್ತು ಈ ಮೂಲಕ ರೈತರ ಆದಾಯ ಮಟ್ಟವನ್ನು ಹೆಚ್ಚಿಸುವ ಉದ್ದೇಶಗಳೊಂದಿಗೆ ಭಾರತ ಸರ್ಕಾರದ “ರಾಷ್ಟ್ರೀಯ ಗೋಕುಲ್ ಮಿಷನ್”ಯೋಜನೆಯಡಿ “ರಾಷ್ಟ್ರೀಯ ಕೃತಕ ಗರ್ಭಧಾರಣಾ ಕಾರ್ಯಕ್ರಮ”ವನ್ನು ಭಾರತ ಸರ್ಕಾರದ ಶೇ. 100 ರಷ್ಟು ಆರ್ಥಿಕ ನೆರವಿನಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕರ್ನಾಟಕ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಳಿ ಉನ್ನತೀಕರಣಕ್ಕಾಗಿ ರೈತರ ಬಳಿ ಇರುವ ಅನಿರ್ದಿಷ್ಟ ಮತ್ತು ಮಿಶ್ರತಳಿ ಹಸು ಹಾಗೂ ಎಮ್ಮೆಗಳಲ್ಲಿ ಉತ್ಕೃಷ್ಟ ಗುಣಮಟ್ಟದ ದೇಶಿ ಮತ್ತು ವಿದೇಶಿ ತಳಿ ಹೋರಿಗಳ ವೀರ್ಯ ಬಳಸಿ ಕೃತಕ ಗರ್ಭಧಾರಣೆ ಮಾಡಲಾಗುತ್ತದೆ. ಸದರಿ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಪ್ರತಿ ಕೃತಕ ಗರ್ಭಧಾರಣೆಗೆ 50 ರೂ. ಮತ್ತು ಪ್ರತಿ ಕರುವಿನ ಜನನಕ್ಕೆ 100 ರೂ. ರಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.
ಅನೇಕ ಜಿಲ್ಲೆಗಳಲ್ಲಿ ಪಶು ವೈದ್ಯರು ನಿಷ್ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಈ ಯೋಜನೆಯು ನೂರು ಪ್ರತಿಶತ ಯಶಸ್ವಿಗೊಳಿಸುವ ಸಂಕಲ್ಪ ತಮ್ಮದಾಗಿದ್ದು, ಪಶು ವೈದ್ಯಕೀಯ ಸಿಬ್ವಂದಿಗಳು ಕೂಡಲೇ ಕಾರ್ಯತತ್ಪರರಾಗಿ ಮೂಕ ಪ್ರಾಣಿಗಳ ಸೇವೆ ಮಾಡಬೇಕು, ನಿಗದಿ ಪಡಿಸಿದ ಗುರಿಯನ್ನು ತಲುಪಲಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಸಚಿವ ಚವ್ಹಾಣ ಎಚ್ಚರಿಸಿದರು