Advertisement

ಗೆಳೆತನವನ್ನು ಕಾಪಿಡುವ ಬಗೆ

03:45 AM Mar 07, 2017 | |

ಸಮಾನ ಮನಸ್ಕರು ಯಾರುಎಂದು ಗುರುತಿಸಿ ಗೆಳೆತನ ಮಾಡಿದರೆ ಯಾವುದೇ ರಗಳೆ ಇರುವುದಿಲ್ಲ. ಫ‌ಲವತ್ತಾದ ಭೂಮಿಯಲ್ಲಿ, ಉತ್ತಮ ಗುಣಮಟ್ಟದ ಬೀಜ ಬಿತ್ತಿ ನೀರೆರೆದರೆ ಅದು ಕಲ್ಪನೆಗೂ ಮೀರಿ ಬೆಳೆದು ನಿಲ್ಲುತ್ತದೆ. ಅದರಂತೆ ಗೆಳೆತನ ಬೆಳೆಯಬೇಕು, ಆ ಬಾಂಧವ್ಯ ನೂರ್ಕಾಲ ಬಾಳಬೇಕು. ಭೂಮಿ, ಬೀಜದ ಆಯ್ಕೆ ನಿಮ್ಮದು

Advertisement

ಗೆಳೆತನ ಎಲ್ಲರ ಬದುಕಲ್ಲೂ ಅರಳಿ ನಿಲ್ಲುವ ಸಂಬಂಧ. ಗೆಳೆತನವಿಲ್ಲದ ಬದುಕು ಬದುಕೇ ಅಲ್ಲ. ಪ್ರತಿಯೊಬ್ಬರಿಗೂ ಗೆಳೆಯರು ಇದ್ದೇ ಇರುತ್ತಾರೆ. ಗಂಡು-ಹೆಣ್ಣು  ಎಂಬ ಭೇದವಿಲ್ಲದೆ, ಜಾತಿ, ಭಾಷೆ, ಧರ್ಮ, ಕಾಲ, ದೇಶ ಇವುಗಳಾವುದರ ಅಡ್ಡಿ ಇಲ್ಲದೆ ಗೆಳೆತನ ಬೆಳೆದು ನಿಲ್ಲುತ್ತದೆ. ಬಾಲ್ಯದಲ್ಲಿ ನೂರೆಂಟು ಮಧುರ ಅನುಭವಗಳನ್ನು ನಮ್ಮದಾಗಿಸಿದ, ಶಾಲಾ ದಿನಗಳ ಚಡ್ಡಿ…ಗಳನ್ನು ಯಾರಾದರೂ ಮರೆಯುತ್ತಾರೆಯೆ!? 
       
ಹಂತ ಹಂತವಾಗಿ ಬೆಳೆಯುವ ನಾವು ಎಷ್ಟೆಲ್ಲಾ ಗೆಳೆತನವನ್ನು ಸಂಪಾದಿಸಿಕೊಂಡಿರುತ್ತೇವೆ ಎಂದು ಒಮ್ಮೆ ತಿರುಗಿ ನೋಡಿದರೆ, ನಮಗೇ ಆಶ್ಚರ್ಯವಾಗುತ್ತದೆ. ಪ್ರಯಾಣದಲ್ಲಿ, ಕೆಲಸದ ಸ್ಥಳಗಳಲ್ಲಿ, ವಾಸಿಸುವ ಪ್ರದೇಶಗಳಲ್ಲಿ, ಶಾಲಾ- ಕಾಲೇಜುಗಳಲ್ಲಿ, ಹಬ್ಬ- ಜಾತ್ರೆಗಳಲ್ಲಿ, ಮದುವೆ ಮನೆಗಳಲ್ಲಿ ಹೀಗೆ ಸಕಲೆಂಟು ಕಡೆಗಳಲ್ಲಿ ಗೆಳೆತನ ಜನ್ಮ ತಳೆಯುತ್ತದೆ. ಕೆಲವು ಅಲ್ಪಾವಧಿಯವಾದರೆ, ಕೆಲವು ಆಜನ್ಮ ಪರ್ಯಂತ ಜತೆಗಿರುತ್ತವೆ.    
    
ಗೆಳೆತನಗಳು ಪರಸ್ಪರ ಸಣ್ಣ ಪುಟ್ಟ ನೆರವಿನೊಂದಿಗೆ ಬಂಧವನ್ನು ಗಟ್ಟಗೊಳಿಸುತ್ತವೆ. ಒಮ್ಮೊಮ್ಮೆ ಜೀವ ಉಳಿಸಬಲ್ಲವು ಕೂಡ. ಇಂಥ ಅಮೂಲ್ಯ ಗೆಳೆತನವನ್ನು ಕಾಪಿಟ್ಟುಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೆ?  
   
ಒಮ್ಮೊಮ್ಮೆ ಹೀಗೂ ಆಗಬಹುದು, ಏನೆಂದರೆ. ಒಂದು ಸಣ್ಣ ಸಿಡುಕು, ಕೋಪ, ಉದಾಸೀನ, ನಿರ್ಲಕ್ಷ, ಮೈಮರೆವು ಜತನದಿಂದ ಕಾಪಾಡಿಕೊಂಡು ಬಂದ ಗೆಳೆತನವನ್ನು ನಾಶ ಮಾಡಿಬಿಡುತ್ತದೆ. ಆಗಲೇ ನೋಡಿ ನಾವು ಸಂದಿಗ್ಧತೆಗೆ ಸಿಲುಕುವುದು. ಗೆಳೆತನವೊಂದು ಕಡಿದು ಹೋಯಿತು ಎಂದರೆ, ಹೆತ್ತ ತಾಯಿ ಮಗುವೊಂದನ್ನು ಕಳೆದುಕೊಂಡ ಹಾಗೆ. ಇದರಿಂದ ಆಗುವ ಸಂಕಟಕ್ಕೆ ಕೊನೆಯಿಲ್ಲ. ಹಾಗೆಯೇ ನಾವು ಕೆಲವು ಸ್ವಯಂಪ್ರೇರಿತ ನಿರ್ಬಂಧಗಳನ್ನು ವಿಧಿಯಿಲ್ಲದೆ ವಿಧಿಸಿಕೊಳ್ಳಬೇಕು.  
     
ಅತಿಯಾದರೆ ಅಮೃತವೂ ವಿಷ. ಗೆಳೆತನದ ನಡುವೆ ಸೂಕ್ತ ಅಂತರ ಇರಲಿ. ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತೇವಲ್ಲಾ ಅಷ್ಟು. ಹತ್ತಿರವಿದ್ದರೆ ಸುಡುತ್ತೆ, ದೂರ ಸರಿದರೆ ಬೆಚ್ಚಗಾಗುವುದಿಲ್ಲ. ಅಂತರ ಕಾಯ್ದುಕೊಳ್ಳುವುದು ನಮ್ಮ ನಮ್ಮ ಕುಶಲತೆಗೆ ಬಿಟ್ಟದ್ದು. ಆಗಾಗ ನವೀಕರಿಸಬೇಕು. ಹಬ್ಬಗಳು, ಹೊಸ ವರ್ಷ, ಹುಟ್ಟಿದ ಹಬ್ಬ ಮೊದಲಾದ ಸಂದರ್ಭಗಳಲ್ಲಿ ಪರಸ್ಪರರು ಶುಭಕೋರುವ ಮೂಲಕ ಹಳತಾದ ಗೆಳೆತನಗಳನ್ನು ನವೀಕರಿಸಬೇಕು. ಅನುಮಾನಗಳು ಸುಳಿಯದ ಹಾಗೆ ವರ್ತಿಸಬೇಕು. 

ಆಕಸ್ಮಿಕವಾಗಿ ಕಹಿ ಘಟನೆಗಳಿಂದ ಆದ ನೋವನ್ನು ದೀರ್ಘ‌ಕಾಲ ಉಳಿಸಿಕೊಳ್ಳಬಾರದು. ಮರೆತು ಮುನ್ನಡೆಯಬೇಕು. ಒಂದು ಸಲ “ಸಾರಿ’ ಕೇಳಿದರೆ ಗಂಟೇನೂ ಹೋಗುವುದಿಲ್ಲ. ಗೆಳೆತನಗಳು ಬಾಳಿಕೆ ಬರಬೇಕೆಂದರೆ ಅವು ವಯಸ್ಸಿನ ಹರಕತ್ತನ್ನು ಬೇಡುತ್ತವೆ. ವಯಸ್ಸಿನ ಕಾರಣಕ್ಕಾಗಿ ಹೊಂದಿಕೆಯಾಗದ ಗೆಳೆತನಗಳನ್ನು ಮುಂದುವರೆಸದಿರುವುದು ಉತ್ತಮ. ಅಭಿರುಚಿಗಳನ್ನು ಅರಿತು ಗೆಳೆತನ ಮಾಡಬೇಕು. ಗಮನಿಸಿ ನೋಡಿ: ಏಕರೀತಿಯ ಅಭಿರುಚಿಯನ್ನು ಹೊಂದಿರುವರು ಹೆಚ್ಚು ಆತ್ಮೀಯರಾಗಿರುತ್ತಾರೆ. ಅಂಥ ಗೆಳೆತನಗಳು ಶತಮಾನಗಳು ಕಳೆದರೂ ಉಳಿಯುತ್ತವೆ.  
     
ಒಟ್ಟಾರೆ ಹೇಳುವುದಾದರೆ ಸಮಾನ ಮನಸ್ಕರು ಯಾರು ಎಂದು ಗುರುತಿಸಿ ಗೆಳೆತನ ಮಾಡಿದರೆ ಯಾವುದೇ ರಗಳೆ ಇರುವುದಿಲ್ಲ. ಫ‌ಲವತ್ತಾದ ಭೂಮಿಯಲ್ಲಿ, ಉತ್ತಮ ಗುಣಮಟ್ಟದ ಬೀಜ ಬಿತ್ತಿ ನೀರೆರೆದರೆ ಅದು ಕಲ್ಪನೆಗೂ ಮೀರಿ ಬೆಳೆದು ನಿಲ್ಲುತ್ತದೆ. ಅದರಂತೆ ಗೆಳೆತನ ಬೆಳೆಯಬೇಕು, ಆ ಬಾಂಧವ್ಯ ನೂರ್ಕಾಲ ಬಾಳಬೇಕು. ಭೂಮಿ, ಬೀಜದ ಆಯ್ಕೆ ನಿಮ್ಮದು, ಏನಂತೀರ?!  

– ಲಹರಿ     

Advertisement

Udayavani is now on Telegram. Click here to join our channel and stay updated with the latest news.

Next