Advertisement
ತಂದೆ-ತಾಯಿಯ ಪ್ರೀತಿಯಲ್ಲಿ ಬೆಳೆದು ಶಿಕ್ಷಣ ಪಡೆಯಬೇಕಾದ ಮಕ್ಕಳು ಬಾಲ್ಯದಲ್ಲಿಯೇ ಅವರನ್ನು ಕಳೆದುಕೊಂಡು ಬೀದಿ ಪಾಲಾಗುತ್ತಾರೆ. ಇಂತಹ ಮಕ್ಕಳ ಬವಣೆ, ನೋವು ಕಂಡರೆ ಎಂತಹವರೇ ಆದರೂ ಒಂದು ಕ್ಷಣ ಮರುಗುತ್ತಾರೆ. ನೊಂದ ಅನಾಥ ಮಕ್ಕಳ ಬದುಕು ಹೀಗೆಯೇ ಅಲ್ಲವೇ?
Related Articles
Advertisement
ಒಲ್ಲದ ಮನಸ್ಸಿಂದಲೇ ಆ ಹುಡುಗಿ ಆನಾಥಾಶ್ರಮ ಸೇರಿದಳು. ಅಲ್ಲಿ ಅವಳ ಜಾಣ್ಮೆಯನ್ನು ಕಂಡ ಶಿಕ್ಷಕನೊಬ್ಬ ಅವಳಿಗೆ ಆಶ್ರಯ ಒದಗಿಸಿ ವಿದ್ಯಾಭ್ಯಾಸ ಮಾಡಲು ನೆರವು ನೀಡಿ ಶಾಲೆಗೆ ಸೇರಿಸಿದರು. ಅವಳ ಸರಳತೆ, ಮುಗ್ಧತೆ, ಆಸಕ್ತಿ ಅಷ್ಟೇ ಅಲ್ಲ. ಹಾಡುಗಾರಿಕೆ, ನೃತ್ಯ, ಪ್ರಬಂಧ ಸ್ಪರ್ಧೆ ಮತ್ತು ಕ್ರೀಡೆಗಳಲ್ಲಿಯೂ ಮುಂಚೂಣಿಯಲಿದ್ದ ಆ ಹುಡುಗಿಯನ್ನು ಶಿಕ್ಷಕರು ಪ್ರಶಂಸಿಸಿದರು.
ಅನಂತರ ಹೈಸ್ಕೂಲ್‌ಗೆ ಪ್ರವೇಶ ಪಡೆದು ಅತ್ಯುತ್ತಮ ವಿದ್ಯಾರ್ಥಿ ಎನಿಸಿಕೊಂಡಳು. ಹತ್ತನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿ ನಮ್ಮ ಶಾಲೆಗೆ ಕೀರ್ತಿ ತರುವಳು ಎಂಬ ಆಸೆ ಅಲ್ಲಿನ ಶಿಕ್ಷಕರಿಗಿತ್ತು. ಬೇಸಗೆಯ ರಜೆ ನಿಮಿತ್ತ ಊರಿಗೆ ಬಂದವಳನ್ನು ಕಂಡ ವಿಧಿ ಎಲ್ಲಿ ಕಾದು ಕುಳಿತಿತ್ತೋ ಗೊತ್ತಿಲ್ಲ. ಅವಳ ಬದುಕಿಗೆ ಇತಿ ಹಾಡಿತು. ಕಣ್ಣ ತುಂಬಾ ಕನಸು ಕಟ್ಟಿದವಳು ಮತ್ತೆ ಕಣ್ಣು ತೆರೆಯಲಿಲ್ಲ. ಪುಟ್ಟ ಹುಡುಗಿಯ ಜೀವನದ ಬಹುದೊಡ್ಡ ಕನಸು ಕೊನೆಗೂ ಈಡೇರಲಿಲ್ಲ.
ನಾವಿಬ್ಬರೂ ಓದುತ್ತಿದ್ದುದು ಒಂದೇ ಶಾಲೆಯಲ್ಲಿ. ನನಗಿಂತ ಒಂದು ವರ್ಷ ಚಿಕ್ಕವಳಾದರೂ ಯಾವಾಗಲೂ ನನ್ನ ಜತೆಯಲ್ಲೇ ಇರುತ್ತಿದ್ದಳು. ತಾನು ಅನುಭವಿಸಿದ ಕಷ್ಟಗಳನ್ನೆಲ್ಲ ನನ್ನೊಂದಿಗೆ ನೋವಿನಿಂದ ಹೇಳಿಕೊಳ್ಳುತ್ತಿದ್ದವಳು. ವಿಧಿ ಅವಳನ್ನು ನನ್ನಿಂದ ಶಾಶ್ವತವಾಗಿ ದೂರ ಮಾಡಿತು. ನನ್ನ ಮುದ್ದಿನ ತಂಗಿಯ ನೆನಪು ನನ್ನನ್ನೂ ಬಿಡದೆ ಕಾಡುತ್ತಿದೆ. ಅರಳಬೇಕಾದ ಬದುಕು ಇಷ್ಟು ಬೇಗ ಕಮರಿ ಹೋಯಿತು. ವಿಧಿಯಾಟ… ಬಲ್ಲವರಾರು?
ಲಕ್ಷ್ಮೀ ಬಿ., ಕಲಬುರಗಿ ವಿಶ್ವವಿದ್ಯಾಲಯ