Advertisement
ಮ್ಯಾಚ್ ಫಿಕ್ಸಿಂಗ್ ಎಂಬ ಭೂತಕ್ಕೆ ಸಿಕ್ಕಿ, ಭಾರತದ ಕ್ರಿಕೆಟ್ ಲೋಕ ನಲುಗಿ ಹೋಗಿತ್ತು. ಕ್ರಿಕೆಟ್ ಅನ್ನು ಧರ್ಮದಂತೆ ಆರಾಧಿಸುತ್ತಿದ್ದ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮೇಲೆ ನಂಬಿಕೆಯನ್ನೇ ಕಳೆದುಕೊಂಡಿದ್ದರು.
Related Articles
Advertisement
ಭಾರತ ತಂಡವು, ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ, ಪಂದ್ಯಗಳನ್ನು ಗೆಲ್ಲಬೇಕು ಎಂಬ ಕನಸು ಹೊತ್ತವರು ಗಂಗೂಲಿ.2000ರಲ್ಲಿ ಕೀನ್ಯದಲ್ಲಿ ನಡೆದ ICC knockout champions trophy ತಂಡದಲ್ಲಿ ಯುವರಾಜ್ ಜಹೀರ್ ಖಾನ್‌ನಂತಹ ಯುವ ಪ್ರತಿಭೆಗಳನ್ನು ತಂಡಕ್ಕೆ ಸೇರಿಸಿಕೊಂಡು, ತಂಡವನ್ನು ಫೈನಲ್‌ವರೆಗೂ ಕೊಂಡೊಯ್ದರು. ಹಾಗೆಯೇ 2002ರ ಶ್ರೀಲಂಕಾದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ತಲುಪಿ, ಪಂದ್ಯ ಮಳೆಗೆ ಆಹುತಿಯಾದಾಗ ಟ್ರೋಫಿಯನ್ನು ಶ್ರೀಲಂಕಾ ದೊಂದಿಗೆ ಹಂಚಿಕೊಂಡರು. 2002ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ NatWest series ಅನ್ನು ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ಗೆದ್ದು, ತಮ್ಮ ಶರ್ಟ್ ಬಿಚ್ಚಿ ಫ್ಲಿಂಟಾಫ್ಗೆ ದಾದ ಕೊಟ್ಟ ಟಕ್ಕರ್ ಎಂದೂ ಮರೆಯಲು ಸಾಧ್ಯವಿಲ್ಲ. 2003ರಲ್ಲಿ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ಕೊಂಡೊದಿದ್ದು ಗಂಗೂಲಿಯ ಇನ್ನೊಂದು ಹೆಗ್ಗಳಿಕೆ. ಇದು ಗಂಗೂಲಿ ವಿದೇಶದ ಗೆಲುವಿನ ಕಥೆಯಾದರೆ, ಅವರು ತಂಡವನ್ನು ಕಟ್ಟಿದ, ಆಟಗಾರರನ್ನು ಬೆಳೆಸಿದ ರೀತಿಯೇ ಗಂಗೂಲಿಯನ್ನು ಇತರ ನಾಯಕರಿಗಿಂತ ಉತ್ತುಂಗದ ಸ್ಥಾನದಲ್ಲಿ ನಿಲ್ಲಿಸುತ್ತದೆ. 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್‌ಗೆ ಮೊದಲು ಖಾಯಂ ಸ್ಥಾನ ಇರಲಿಲ್ಲ. ಗಂಗೂಲಿ ಯುವರಾಜ್‌ಗೆ ಸತತ ಅವಕಾಶ ನೀಡಿ, ತಮ್ಮ ಸ್ಥಾನವನ್ನು ಖಾಯಂ ಮಾಡಿಕೊಳ್ಳಲು ನೆರವಾದರು. ಹಾಗೆಯೇ ಸೆಹ್ವಾಗ್, ಮೊದಲು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ಸೆಹ್ವಾಗ್‌ಗೆ ಹೆಚ್ಚು ಯಶಸ್ಸು ಸಿಗಲಿಲ್ಲ. ಆದ್ದರಿಂದ ಗಂಗೂಲಿ ತಮ್ಮ ಓಪನರ್ ಸ್ಥಾನವನ್ನು ಸೆಹ್ವಾಗ್‌ಗೆ ನೀಡಿದರು. ಸೆಹ್ವಾಗ್ ಆಡಿದ ರೀತಿ ನಮಗೆ ಗೊತ್ತೇ ಇದೆ. ಹಾಗೆಯೇ ಹರ್ಭಜನ್ ಸಿಂಗ್ ಕೂಡ ತಂಡಕ್ಕೆ ಬೇಕೆ ಬೇಕು ಎಂದು ಸೇರಿಸಿಕೊಂಡರು. ಹರ್ಭಜನ್ ಬೆಳೆದಿದ್ದು ನಾವು ನೋಡಿದ್ದೇವೆ. 2001ರ ಕೋಲ್ಕತ್ತಾ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಪಡೆದು ಇತಿಹಾಸ ಬರೆದಿದ್ದರು. ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದ ಶ್ರೀನಾಥ್‌ರನ್ನು ಮತ್ತೆ 2003ರ ವಿಶ್ವಕಪ್ ಆಡುವಂತೆ ಕೇಳಿಕೊಂಡು, ಆಡಿಸಿ, ಭಾರತ ಫೈನಲ್ ತಲುಪಿದ್ದು ಕೂಡ ಒಂದು ಇತಿಹಾಸ. ಇದೇ ವಿಶ್ವಕಪ್‌ನಲ್ಲಿ ದ್ರಾವಿಡ್‌ರನ್ನು ಕೀಪಿಂಗ್ ಮಾಡುವಂತೆ ಕೇಳಿಕೊಂಡು, ತಂಡದಲ್ಲಿ 7 ಜನ ಬಾಟ್ಸ್‌ಮನ್ ಇರುವಂತೆ ನೋಡಿಕೊಂಡರು. 2004ರ ಆಸ್ಟ್ರೇಲಿಯ ಪ್ರವಾಸಕ್ಕೆ ಕುಂಬ್ಳೆ ಬೇಕೆ ಬೇಕು ಎಂದು ಆಯ್ಕೆ ಸಮಿತಿಯ ವಿರುದ್ಧ ಮಾತನಾಡಿ, ಸೇರಿಸಿಕೊಂಡು, ಕುಂಬ್ಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವಂತೆ ಮಾಡಿದ್ದರು. ಆ ಸರಣಿಯಲ್ಲಿ, ಕುಂಬ್ಳೆ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ಅನಂತರ ಕುಂಬ್ಳೆ ಖಾಯಂ ಸ್ಥಾನ ಪಡೆದು, ಭಾರತದ ನಾಯಕರಾಗಿದ್ದು, ನಮಗೆ ಗೊತ್ತೇ ಇದೆ. ಧೋನಿ ಮೊದಲು, ಕೆಳಕ್ರಮಾಂಕದಲ್ಲಿ ಆಡುತ್ತಿದ್ದರು. ಅವರನ್ನು 1ನೇ ಕ್ರಮಾಂಕದಲ್ಲಿ ಆಡಿಸಿ, ತಮ್ಮ ಜಾಗವನ್ನು ಬಿಟ್ಟು ಕೊಟ್ಟಿದ್ದರು. ಸತತ ನಾಲ್ಕು ಇನ್ನಿಂಗ್ಸ್‌ನಲ್ಲಿ ಧೋನಿ ರನ್ ಗಳಿಸದಿದ್ದರೂ ಮತ್ತೆ ಆಡಿಸಿದ್ದರು. ಧೋನಿ ತಮ್ಮ 5ನೇ ಪಂದ್ಯದಲ್ಲಿ ಶತಕ ಗಳಿಸಿ, ಗಂಗೂಲಿ ನಿರ್ಧಾರವನ್ನು ಸಮರ್ಥಿಸಿಕೊಂಡರು. ಅದರ ಅನಂತರ ಧೋನಿ ಬೆಳೆದು ನಿಂತಿದ್ದು ಒಬ್ಬ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಹಾಗೂ ನಾಯಕನಾಗಿ. ಹೀಗೆ ಇರ್ಫಾನ್ ಪಠಾಣ್, ಅಜಿತ್ ಅಗರ್‌ಕರ್, ಆಶಿಶ್ ನೆಹ್ರಾ , ಇವರೆಲ್ಲರಿಗೂ ಆಸರೆಯಾಗಿ ನಿಂತದ್ದು ದಾದಾ. ಗಂಗೂಲಿ ಸಹಾಯದಿಂದ ಬೆಳೆದ ಸೆಹ್ವಾಗ್, ಯುವರಾಜ…, ಜಹೀರ್ ಖಾನ್, ಧೋನಿ, ಹರ್ಭಜನ್ ಸಿಂಗ್ 2011ರ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಕಷ್ಟದ ಸಮಯದಲ್ಲಿ ತಂಡವನ್ನು ಕಟ್ಟಿದ ರೀತಿ, ವಿದೇಶದಲ್ಲಿ ಪಂದ್ಯಗಳನ್ನು ಗೆಲುವುದನ್ನು ಕಲಿಸಿದ್ದು, ಅನೇಕ ಪ್ರತಿಭೆಗಳನ್ನು ಬೆಳೆಸಿದ ರೀತಿ, ತಂಡದ ಸಹ ಆಟಗಾರರೊಂದಿಗೆ ವರ್ತಿಸುತ್ತಿದ್ದ ರೀತಿ, ಗಂಗೂಲಿಯನ್ನು ವಿಶ್ವ ಕ್ರಿಕೆಟ್ ಕಂಡ ಒಬ್ಬ ಶ್ರೇಷ್ಠ ನಾಯಕನನ್ನಾಗಿ ಮಾಡುತ್ತದೆ. ವಿನಯ್ ಜೈನ್, ಕಸಗುಪ್ಪೆ