Advertisement

ಬದುಕಿನ ಭಾರ ಹೊತ್ತು ಸಾರ –ಸತ್ವ ತಿಳಿಸುವ ಬಂಗಾರದ ಭವ್ಯ ರಥ ಭಾರತ

05:02 PM Apr 18, 2021 | Team Udayavani |

ಏಷ್ಯಾ ಖಂಡದ ಏಳನೇ ಅತೀ ದೊಡ್ಡ ರಾಷ್ಟ್ರ ಭಾರತ. ಇದು ಕೇವಲ ಗಾತ್ರದಲ್ಲಿ ಮಾತ್ರವಲ್ಲ, ಸಂಸ್ಕೃತಿ, ಚರಿತ್ರೆಯಲ್ಲಿ ಏಕಮೇವಾದ್ವಿತೀಯ ಎಂಬಂತೆ ವಿಶ್ವಕ್ಕೆ ಗುರು ನಮ್ಮ ಭಾರತ.

Advertisement

ಈ ದೊಡ್ಡತನಕ್ಕೆ ಯಾವ ರಾಷ್ಟ್ರವೂ, ನಾಗರಿಕತೆಗಳೂ ಸರಿ ಸಾಟಿಯಲ್ಲ. ಪೌರಾಣಿಕ ಹಿನ್ನೆಲೆ ನೋಡಿದರೆ ಶ್ರೀರಾಮನ ಸಹೋದರ ಭರತನು ದೊರೆತ ರಾಜ್ಯವನ್ನು ಆಳದೆ ತನ್ನ ಅಣ್ಣನ ಮೇಲಿನ ಪ್ರೀತಿ, ಭಕ್ತಿಗೆ ರಾಮನ ಪಾದುಕೆಯನ್ನು ಇಟ್ಟು ರಾಜ್ಯವಾಳಿದ.

ಆ ಸತ್ಯ ನಿಷ್ಠೆಗೆ, ಸಹೋದರತ್ವಕ್ಕೆ ಮೆಚ್ಚಿದ ಶ್ರೀ ರಾಮ ಭರತವರ್ಷ ಎಂಬಂತೆ ಈ ಪುಣ್ಯಭೂಮಿಯು ಕರೆಸಿಕೊಳ್ಳುವಂತೆ ಆಶೀರ್ವದಿಸಿದರು ಎಂಬ ಪ್ರತೀತಿ. ಮಹಾರಾಜ ದುಷ್ಯಂತನ ಪುತ್ರನಾದ ಭರತ ಮಹಾರಾಜನಿಂದ ಈ ಹೆಸರು ಬಂತೆಂಬ ಹಿನ್ನಲೆಯೂ ಇದೆ.

ಬದುಕಿನ ಭಾರ ಹೊತ್ತು ಸಾರ – ಸತ್ವ ತಿಳಿಸುವ ಬಂಗಾರದ ಭವ್ಯ ರಥ ಭಾರತ. ಈ ಭವ್ಯ ರಥದ ನಾಲ್ಕು ಚಕ್ರಗಳು ಚತುರ್ವೇದಗಳು. ಇಡೀ ಜಗತ್ತು ಬಟ್ಟೆ ಹಾಕಿಕೊಳ್ಳುವುದರಿಂದ ಹಿಡಿದು ನಾಗರಿಕತೆಯ ಪ್ರತೀ ಹಂತವನ್ನು ಕಲಿಸಿದ್ದು ಭಾರತ. ವಿದ್ಯುತ್‌ ತಯಾರಿಕೆಯಿಂದ ಹಿಡಿದು ವಿಮಾನಶಾಸ್ತ್ರದ ವರೆಗೆ ಭಾರತೀಯರು ಬರೆಯದ ಪುಸ್ತಕಗಳಿರಲಿಲ್ಲ.

ವೇದಗಳು, ಮಾನವ ಉಗಮ ರಹಸ್ಯಗಳು, ಖಗೋಳದಿಂದ ಲೋಹದಶಾಸ್ತ್ರದ ವರೆಗೆ ಭಾರತೀಯರಿಗೆ ಗೊತ್ತಿಲ್ಲದ ವಿಷಯಗಳಿರಲಿಲ್ಲ. ಪ್ರಾಣಿಶಾಸ್ತ್ರದಲ್ಲೂ ಭಾರತ ಎತ್ತಿದ ಕೈಯಾಗಿತ್ತು. ವೈದ್ಯಶಾಸ್ತ್ರ, ಕಲೆ – ಸಂಸ್ಕೃತಿಗಳ ತವರೂರು ಭಾರತ.

Advertisement

ಭೂಮಿ ಮತ್ತು ಸೂರ್ಯನ ಮಧ್ಯದ ದೂರವನ್ನು ಮೊದಲು ನಿಖರವಾಗಿ ಕಂಡುಹಿಡಿದು ಹೇಳಿದ್ದು ಯಾರು? ಜಗತ್ತಿಗೆ ಮೊಟ್ಟ ಮೊದಲ ಪ್ಲಾಸ್ಟಿಕ್‌ ಸರ್ಜರಿ ಕಲಿಸಿಕೊಟ್ಟದ್ದು ಯಾರು? ಸೂರ್ಯ ಭೂಮಿಯ ಸುತ್ತ ತಿರುಗುತ್ತಿಲ್ಲ, ಭೂಮಿ ಸೇರಿದಂತೆ ಎಲ್ಲ ಗ್ರಹಗಳೂ ಸೂರ್ಯನ ಸುತ್ತ ಸುತ್ತುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಂಡವರು ಯಾರು? ಈ ಎಲ್ಲ ಪ್ರಶ್ನೆಗಳಿಗೂ ಪಠ್ಯ ಪುಸ್ತಕಗಳು ಯುರೋಪಿಯನ್‌ ವಿಜ್ಞಾನಿಗಳ ಹೆಸರು ಹೇಳುತ್ತವೆ. ಆದರೆ, ಇವರಿಗಿಂತ ಸಹಸ್ರಾರು ವರ್ಷಗಳ ಹಿಂದೆ ಭಾರತೀಯರು ಇದನ್ನು ಕಂಡುಹಿಡಿದಿದ್ದರು. ವರಹಾವತಾರ ತನ್ನ ಕೋರೆ ಹಲ್ಲುಗಳಲ್ಲಿ ದುಂಡಗಿನ ಭೂಮಿಯನ್ನು ಎತ್ತಿ ಹಿಡಿದಿರುವ ಬಗ್ಗೆ ಉಲ್ಲೇಖಗಳಿವೆ.

ಬೆಳಕಿನ ವೇಗದ ಬಗ್ಗೆ ಹೇಳಿದ್ದು ಡಚ್‌ ವಿಜ್ಞಾನಿ ಕ್ರಿಸ್ಟಿಯಾನ್‌ ಹುಗೆನ್ಸ್‌ ಅಂತ ಪಠ್ಯಗಳು ಹೇಳುತ್ತವೆಯಾದರೂ ಅದಕ್ಕೂ ಮೊದಲು ಇದನ್ನು ಹೇಳಿದವರು ನಮ್ಮ ಕರ್ನಾಟಕದ ವಿಜಯ ನಗರ ಸಾಮ್ರಾಜ್ಯದ ಪಂಡಿತ ಶಯನ ಅನ್ನೋ ಮೇಧಾವಿ. ಗುರುತ್ವಾಕರ್ಷಣೆ ಅನ್ನುವ ಶಕ್ತಿ ಭೂಮಿಗಿರುವ ಬಗ್ಗೆ ತಿಳಿಸಿದ್ದು ಮತ್ತು ಅದನ್ನು ಕಂಡುಹಿಡಿದದ್ದು ನ್ಯೂಟನ್‌ ಎಂದು ನಾವು ಓದಿದ್ದೇವೆ. ಆದರೆ ನ್ಯೂಟನ್‌ ಹೇಳಿದ್ದು 16ನೇ ಶತಮಾನದಲ್ಲಿ, ಇದಕ್ಕಿಂತ 4 ಶತಮಾನಗಳ ಮೊದಲೇ ಭಾರತೀಯ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯರು ಇದನ್ನು ಹೇಳಿದ್ದರು. ಸೂರ್ಯ ಸಿದ್ಧಾಂತ ಮತ್ತು ಸಿದ್ಧಾಂತ ಶಿರೋಮಣಿ ಎಂಬ ಇವರ ಗ್ರಂಥಗಳಲ್ಲಿ ಇದರ ಉಲ್ಲೇಖಗಳಿವೆ. ಅಂದರೆ ಭಾರತ ನಿಜವಾಗಿಯೂ ವಿಶ್ವ ಗುರುವಾಗಿತ್ತು ಮತ್ತು ಆ ಸ್ಥಾನವನ್ನು ಮತ್ತು ಆ ಭವ್ಯತೆಯನ್ನು ಆಧುನಿಕ ಜಗತ್ತಿನಲ್ಲೂ ವಿಭಿನ್ನ ರೀತಿಯಲ್ಲಿ ಉಳಿಸಿಕೊಂಡಿದೆ ಎಂದರೆ ತಪ್ಪಲ್ಲ.

ಇದಕ್ಕೆ ಉತ್ತಮ ನಿದರ್ಶನವೆಂದರೆ ಅದು ಕೋವಿಡ್‌-19ರ ಕಾಲ. ಉಳಿದೆಲ್ಲ ದೇಶಗಳು ಕಣ್ಣಿಗೆ ಕಾಣದ ಕರಿನೆರಳಾದ ಕೊರೊನಾಕ್ಕೆ ವಿಲವಿಲ ಒದ್ದಾಡುತ್ತಿದ್ದವು. ಕೆಲವು ಮುಂದುವರಿದ ರಾಷ್ಟ್ರಗಳೂ ಕೂಡ ಹೀನಾಯ ಸ್ಥಿತಿಗೆ ತಲುಪಿದ್ದವು. ಗಮನಾರ್ಹ ಅಂಶವೆಂದರೆ, ಅಲ್ಲಿನ ಜನ ಸಂಖ್ಯೆ ನಮ್ಮ ದೇಶದ ಅರ್ಧದಷ್ಟೂ ಇರಲಿಲ್ಲ. ಕೆಲವು ರಾಷ್ಟ್ರಗಳಲ್ಲಂತೂ ಕರ್ನಾಟಕದಷ್ಟೂ ಜನರಿಲ್ಲದಿದ್ದರೂ ಕೊರೊನಾ ದಾಳಿಗೆ ಕಂಗೆಟ್ಟಿದ್ದವು. ಪ್ರತಿಷ್ಠಿತ ರಾಷ್ಟ್ರಗಳ ಕೆಲ ಅಧ್ಯಕ್ಷರು ಅಲ್ಲಿಯ ಸ್ಥಿತಿಗೆ ಮರುಗಿ ಅಸಹಾಯಕರಂತೆ ಅತ್ತದ್ದೂ ಇದೆ. ಆದರೆ ಭಾರತ ತನ್ನವರನ್ನು ಧೈರ್ಯದಿಂದ ತವರಿಗೆ ಕರೆತಂದು ಔದಾರ್ಯದ ಜತೆಗೆ ತನ್ನ ಹಿರಿಮೆಯನ್ನು ಸಾರಿತ್ತು. ಅನಾಹುತಗಳು ನಡೆದರೂ ಮುಂದುವರಿದ ರಾಷ್ಟ್ರಗಳು ಭಾರತದ ಬಗ್ಗೆ ಊಹಿಸಿದ್ದು ಸುಳ್ಳಾಗಿತ್ತು. ಕೊನೆಗೆ ಆ ರಾಷ್ಟ್ರಗಳೇ ಪ್ರಶಂಸಿಸುವಂತೆ ವೈವಿಧ್ಯತೆಯಲ್ಲಿ ಏಕತೆಯ ಸತ್ಯ, ಸತ್ವ, ತತ್ತ್ವಗಳನ್ನು ಸಾರಿತ್ತು ಭಾರತ.

ಭಾರತ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಾಯಿಯಂತೆ, ಗುರುವಿನಂತೆ ಯಾವ ಭೇದ-ಭಾವ, ವೈರತ್ವಗಳನ್ನೂ ಪರಿಗಣಿಸದೆ ಜಾಗತಿಕ ಸಮುದಾಯದಲ್ಲಿ ಕೋವಿಡ್‌- 19 ವಿರುದ್ಧದ ಹೋರಾಟದಲ್ಲಿ ಬದ್ಧತೆ ಪ್ರದರ್ಶಿಸಿದೆ. ಪಾಕಿಸ್ಥಾನ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ಕೋವಿಡ್‌-19 ಲಸಿಕೆ ಭಾರತದಿಂದ ರಫ್ತಾಗಿದೆ. ಕೆಲವು ರಾಷ್ಟ್ರಗಳಿಗೆ ಉಚಿತವಾಗಿ ಕೋವಿಡ್‌ ಲಸಿಕೆ ಹಂಚಿ ತನ್ನ ವಿಶ್ವಮಾನವ ತಣ್ತೀವನ್ನು ಸಾರಿದೆ. ಇದಕ್ಕೆ ಪೂರಕ ಸಾಕ್ಷಿ ಎಂದರೆ ಬ್ರೆಜಿಲ್‌ಗೆ 20 ಲಕ್ಷ ಕೋವಿಡ್‌- 19 ಡೋಸ್‌ ರವಾನಿಸಿದ್ದಕ್ಕೆ ಅಲ್ಲಿನ ಅಧ್ಯಕ್ಷ ಜೈರ್‌ ಬೋಲ್ಸೊನಾರೊ ಹನುಮಂತ ದೇವರು ಸಂಜೀವಿನಿ ಪರ್ವತವನ್ನು ಹೊತ್ತು ಭಾರತದಿಂದ ಬ್ರೆಜಿಲ್‌ಗೆ ಹಾರುವಂತೆ ಚಿತ್ರ ಹಾಕಿ ಭಾರತದ ಪ್ರಧಾನಿ ಮತ್ತು ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದು ಭಾರತದ ಭವ್ಯ ಚರಿತ್ರೆ ಗಡಿಗಳ ಹಂಗನ್ನು ಮುರಿದಿದೆ ಎಂಬುದನ್ನು ನಿರೂಪಿಸಿದೆ.

ತನ್ನ ವಿಶ್ವಗುರುವೆಂಬ ಸತ್ಯವನ್ನು ವಿಶ್ವವೇ ಒಪ್ಪುವಂತೆ ಮಾಡಿದೆ. ಇದು ಶಾಂತಿ ಬಯಸೋ ರಾಷ್ಟ್ರ. ಯುದ್ಧ ಕಾಂಡಗಳನ್ನೇ ಚರಿತ್ರೆಯಾಗಿ ಹೊಂದಿದ ರಾಷ್ಟ್ರ. ಇದು ತನ್ನ ಮೌಲ್ಯಗಳಿಂದ ಜಾಗೃತಗೊಂಡ ರೀತಿ ಅದ್ಭುತ. ತನ್ನ ಸತ್ವ, ಸತ್ಯಗಳಿಂದ ವಿಶ್ವವೇ ಭಾರತದ ಭವ್ಯತೆ, ದಿವ್ಯತೆಗಳಿಗೆ ತಲೆ ಬಾಗುವಂತೆ ಮಾಡಿದೆ. ಭಗವಂತನೇ ಸಾರಥಿಯಾದ ಭವ್ಯ ರಥ ಭಾರತವೆಂದು ಮತ್ತೆ ಮತ್ತೆ ನಿರೂಪಿಸುವಂತೆ ಮಾಡಿದೆ.


ದಿನೇಶ ಎಂ., ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next