ಸಕಲೇಶಪುರ: ತಾಲೂಕಿನ ವಿವಿಧ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಫೆ.1ರಿಂದ 4ರವರೆಗೆ ಚುನಾವಣೆ ನಡೆಯಲಿದ್ದು ಅಧಿಕಾರದ ಗದ್ದುಗೆ ಹಿಡಿಯಲು ಎಲ್ಲಾ ರೀತಿಯ ತಂತ್ರಗಳನ್ನು ಮಾಡಲಾಗುತ್ತಿದೆ. ಬ್ಯಾಕರವಳ್ಳಿ ಪಂಚಾಯ್ತಿ ಅಧ್ಯಕ್ಷ ಸ್ಥಾನ ಬಿಸಿಎಂ ಬಿ ಮಹಿಳೆಗೆ ಮೀಸಲಾಗಿದ್ದು ಇಲ್ಲಿ ಬಿಜೆಪಿ ಬೆಂಬಲಿತ ಶೀಲಾಮಣಿ ಅವಿರೋಧ ಆಯ್ಕೆ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇದ್ದು ಯಾರು ಅಧಿಕಾರ ಹಿಡಿಯುತ್ತಾರೆಂದು ಕಾದು ನೋಡಬೇಕಾಗಿದೆ.
ಕೆಲವು ಕಡೆ ಮೀಸಲಾತಿ ಸ್ಪರ್ಧಿಗಳಿಲ್ಲ: ವಳಲಹಳ್ಳಿ ಪಂಚಾಯ್ತಿಯ 8 ಸ್ಥಾನಗಳ ಪೈಕಿ 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಇಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರುವುದು ಖಚಿತ ವಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಯಾನ ಹಳ್ಳಿ ಪಂಚಾಯ್ತಿಯ 7 ಸ್ಥಾನಗಳ ಪೈಕಿ 3 ಬಿಜೆಪಿ ಬೆಂಬಲಿತರು, 3 ಜೆಡಿಎಸ್ ಬೆಂಬಲಿತರು ಆಯ್ಕೆ ಯಾಗಿದ್ದು 1 ಸ್ಥಾನದಲ್ಲಿ ಬಿಎಸ್‌ಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದು , ಬಿಎಸ್‌ಪಿ ಬೆಂಬಲಿತ ಅಭ್ಯರ್ಥಿಯ ವಿಶ್ವಾಸಗೊಳಿಸಲು ಜೆಡಿಎಸ್, ಬಿಜೆಪಿ ಮುಖಂಡರು ಕಸರತ್ತು ನಡೆಸುತ್ತಿ ದ್ದಾರೆ.
ಬಾಗೆ ಗ್ರಾಪಂನ 11 ಸ್ಥಾನಗಳಲ್ಲಿ 10 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದು ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ಯುವ ಮುಖಂಡ ರಾಕೇಶ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಉದೇವಾರ ಗ್ರಾಪಂನಲ್ಲಿಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವಸಾಧ್ಯತೆ ಯಿದೆ.
ಬಾಳ್ಳುಪೇಟೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾ ನ ಗಳಲ್ಲಿ ಗೆಲುವು ಸಾಧಿಸಿದ್ದರೂ ಅಧ್ಯಕ್ಷ ಸ್ಥಾನ ಬಿಸಿಎಂ ಎಗೆ ಬಂದಿರುವುದರಿಂದ ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಇಲ್ಲದ ಕಾರಣ ಜೆಡಿಎಸ್ ಸುಲಭವಾಗಿ ಅಧಿಕಾರ ಹಿಡಿಯುತ್ತಿದೆ. ಆನೆಮಹಲ್ ಗ್ರಾಪಂ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಇಲ್ಲಿ ಜೆಡಿಎಸ್ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದರೂ ಗೊಂದಲವುಂಟಾಗಿದೆ. ಒಟ್ಟು 10 ಸ್ಥಾನಗಳಿದ್ದು ಇಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆಂದು ಕಾದು ನೋಡಬೇಕಾಗಿದೆ. ಮಳಲಿ ಗ್ರಾಪಂ ಕುನಿಗನಹಳ್ಳಿ, ಬಿರಡಹಳ್ಳಿ ಗ್ರಾಪಂಗಳು ಜೆಡಿಎಸ್ ಬೆಂಬಲಿತರಿಗೆ ಸುಲಭವಾಗಿ ವಶವಾಗಲಿದ್ದು, ಬೆಳಗೋಡು ಗ್ರಾಪಂನಲ್ಲಿ ಅಧಿಕಾರದ ಗದ್ದುಗೆಗೇರಲು 3 ಪ್ರಮುಖ ಪಕ್ಷಗಳ ಬೆಂಬಲಿತರು ವ್ಯಾಪಕ ಪ್ರಯತ್ನ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕನ್ನಡಿಗರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ: ಡಾ. ಮನು ಬಳಿಗಾರ್ ಕಿಡಿ
ಪ್ರಬಲ ಪೈಪೋಟಿ: ಹೆಬ್ಬಸಾಲೆ ಗ್ರಾಪಂ ವ್ಯಾಪ್ತಿಯ 14 ಸ್ಥಾನಗಳಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು ಜೆಡಿಎಸ್, ಬಿಜೆಪಿ ನಡುವೆ ಅಧಿಕಾರ ಹಿಡಿಯಲು ವ್ಯಾಪಕ ಪೈಪೋಟಿ ಇದೆ. ಬಿಜೆಪಿ ಭದ್ರಕೋಟೆ ಕ್ಯಾಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತರು ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ ಇಬ್ಬರು ನಾಪತ್ತೆಯಾಗಿರುವುದು ಬಿಜೆಪಿ ಪಾಳಯದಲ್ಲಿ ಆತಂಕ ತಂದಿದೆ. ಹಾನುಬಾಳ್ ಗ್ರಾಪಂನಲ್ಲೂ ಅಧಿ ಕಾರ ಹಿಡಿಯಲು ಬಿಜೆಪಿ, ಜೆಡಿಎಸ್ ನಡುವೆ ಪ್ರಬಲ ಪೈಪೋಟಿಯಿದೆ.
ಕುರುಭತ್ತೂರು ಗ್ರಾಪಂನಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಬೆಂಬಲಿತರ ನಡುವೆ ಪ್ರಬಲ ಪೈಪೋಟಿ ಇದೆ. ಯಸಳೂರು, ಚಂಗಡಿಹಳ್ಳಿ, ಐಗೂರು, ಹೊಸೂರು ಗ್ರಾಪಂಗಳಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆಂದು ಕಾದು ನೋಡಬೇಕಾಗಿದೆ.
ಸುಧೀರ್ ಎಸ್.ಎಲ್