Advertisement

ಜಾಗ್ರತೆ ಇಲ್ಲದಿದ್ದರೆ ಇನ್ನೂ  2 ವರ್ಷ ಕೋವಿಡ್ ಕಾಟ

12:43 AM May 02, 2021 | Team Udayavani |

ಆರ್‌ಎನ್‌ಎ ವೈರಸ್‌ ಮತ್ತು ಡಿಎನ್‌ಎ ವೈರಸ್‌ ಎಂದು ಎರಡು ಬಗೆ. ಕೊರೊನಾ ವೈರಸ್‌ ಆರ್‌ಎನ್‌ಎಗೆ ಸಂಬಂಧಿಸಿದ್ದು. ಭಾರತದಲ್ಲಿ ಕೊರೊನಾ ಮೊದಲ ಅಲೆ ಬಂದಾಗ ಸಮಾಜದಲ್ಲಿ ಒಮ್ಮೆಲೆ ಹರಡಿತು. ಆಗಲೇ ಅಮೆರಿಕ, ಯೂರೋಪ್‌ ಮೊದಲಾದೆಡೆ ಎರಡು, ಮೂರನೆಯ ಅಲೆಯೂ ಬಂದಾಗಿತ್ತು. ವೈರಸ್‌ ಸೋಂಕಿನ ಕಾಯಿ ಲೆಗಳು ಯಾವಾಗಲೂ ಒಮ್ಮೆ ಏರಿಕೆಯಾಗಿ ಮತ್ತೆ ಕಡಿಮೆಯಾಗುತ್ತವೆ. ಗಟ್ಟಿಮುಟ್ಟಾದ ದೇಹ ಹೊಂದಿರುವ ವರಲ್ಲಿ ಪ್ರತಿರೋಧಕ ಶಕ್ತಿ ಇರುತ್ತದೆ. ಇದು ದೇಹದಲ್ಲಿ ಸೃಷ್ಟಿಯಾಗುವ ತಾತ್ಕಾಲಿಕ ಪ್ರತಿರೋಧಕ ಶಕ್ತಿ.

Advertisement

ಇದ ರಿಂದಾಗಿ ಸೋಂಕು ಆತನಿಗೆ ತಗಲುವ ಸಾಧ್ಯತೆ ಕಡಿಮೆ ಇರುತ್ತದೆ. ಆಗ ಸಹಜವಾಗಿ ಸೋಂಕು  ಪ್ರಕರಣಗಳು ಇಳಿಮುಖವಾಗುತ್ತವೆ. ಹಾಗೆಂದ ಮಾತ್ರಕ್ಕೆ ವೈರಸ್‌ನ ಅಂತ್ಯವಾಯಿತು ಎಂದಲ್ಲ. ಅದು ತಳಮಟ್ಟದಲ್ಲಿ  ಇರುತ್ತದೆ. ಇಂತಹ ವೈರಸ್‌ಗಳು ಯಾವಾಗ ಮತ್ತೆ ಎದ್ದು ನಿಲ್ಲುತ್ತವೆ ಎಂದರೆ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾ ದಾಗ. ಇದು ಜನರ ನಡವಳಿಕೆಯನ್ನು ಅವಲಂಬಿಸಿರುತ್ತದೆ. ಕಳೆದ ವರ್ಷ ಸೋಂಕಿನ ತೀವ್ರತೆ ಕಡಿಮೆಯಾದಾಗ ನಾವು ಸಾಂಕ್ರಾಮಿಕದಿಂದ ಪಾರಾದೆವು ಎಂಬ ಭ್ರಮೆಯಲ್ಲಿ  ಈ ಹಿಂದಿನ ಜೀವನಶೈಲಿಗೆ ಮರಳಿದೆವು.

ಇದರ ಪರಿಣಾಮ ಈಗ ದೇಶದಲ್ಲಿ ಕೊರೊನಾದ ಎರಡನೇ ಅಲೆ ವ್ಯಾಪಕವಾಗಿ ಹರಡಲಾರಂಭಿಸಿದೆ. ಈಗ ಸೋಂಕು ಹರಡುವುದನ್ನು ನಿಯಂತ್ರಿಸಲು ನಮ್ಮ ಮುಂದಿರುವುದು

ಎರಡೇ ದಾರಿ: ದೈಹಿಕ ಅಂತರ ಕಾಪಾಡುವುದು ಮತ್ತು ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

ಮೈಮರೆತದ್ದೇ ಕಾರಣ

Advertisement

ಭಾರತ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ. ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿ ಕೊಂಡಾಗ ಇಷ್ಟೊಂದು ಜನಸಂಖ್ಯೆಯುಳ್ಳ ದೇಶದಲ್ಲಿ ಸೋಂಕು ತೀವ್ರಗತಿಯಲ್ಲಿ ಹರಡುತ್ತದೆ. ಆದರೆ ಕಳೆದ ವರ್ಷ ಸರಕಾರ ಲಾಕ್‌ಡೌನ್‌ ಜಾರಿಗೊಳಿಸಿ ಕಟ್ಟುನಿಟ್ಟಿನ ನಿರ್ಬಂಧ ಹೇರಿದ ಪರಿಣಾಮ ಸೋಂಕಿನ ಹರಡುವಿಕೆ ಪ್ರಮಾಣ ಕಡಿಮೆಯಾಯಿತು. ಆದರೆ ಸರಕಾರ ಮತ್ತು ವೈದ್ಯಲೋಕ ಸೋಂಕಿನ ಬಗ್ಗೆ ಜಾಗೃತರಾಗಿರಿ ಎಂದು ಪದೇ ಪದೆ ಹೇಳಿದರೂ “ಭಾರತೀಯರ ರೋಗನಿರೋಧಕ ಶಕ್ತಿ ಹೆಚ್ಚು’, “ಕೊರೊನಾ ಎಲ್ಲ ಸುಳ್ಳು’, “ನಮಗೇನೂ ಆಗುವುದಿಲ್ಲ’ ಎಂಬೆಲ್ಲ ಭಂಡ ಧೈರ್ಯದಿಂದ ನಾವು ಕಾಲ ಕಳೆದೆವು. ಇದು  ವೈರಸ್‌ ಹರಡಲು ಅನುಕೂಲವಾಯಿತು.

ಲಾಕ್‌ಡೌನ್‌ ಪರಿಣಾಮ

ಲಾಕ್‌ಡೌನ್‌ ಪರ-ವಿರೋಧ ಚರ್ಚೆಗಳೇನೇ ಇರಲಿ ಇದು ಆರ್ಥಿಕ ನಷ್ಟ, ವ್ಯವಹಾರ ನಷ್ಟ, ಉದ್ಯೋಗ ನಷ್ಟ ಇತ್ಯಾದಿ ನೇತ್ಯಾತ್ಮಕ ಅಡ್ಡ ಪರಿಣಾಮ ಬೀರಿತು ಎನ್ನುವುದು ಹೌದಾದರೂ ಕೊರೊನಾ ಸೋಂಕಿನಿಂದಾಗಬಹುದಾಗಿದ್ದ ಪರಿಣಾಮವನ್ನು ಗಣನೀಯವಾಗಿ ಕಡಿಮೆ ಮಾಡಿತು ಎನ್ನುವುದರಲ್ಲಿ ಸಂಶಯವಿಲ್ಲ. ಇನ್ನು  ಕಳೆದ ವರ್ಷ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದಾಗಿ ಎಷ್ಟು ಜನರ ಜೀವ ಉಳಿಯಿತು ಎಂದು ಹೇಳುವುದು ಕಷ್ಟ. ಒಂದು ವೇಳೆ ಈ ಬಾರಿ ಲಾಕ್‌ಡೌನ್‌ ಮಾಡದೆ ಇದ್ದಿದ್ದರೆ ಈ ಬಗ್ಗೆ ಅಂದಾಜಿಸಬಹುದಿತ್ತು.

ಮಹಾನಗರಗಳಲ್ಲಿ ಹೆಚ್ಚು ಅಪಾಯ?: ಈ ವರ್ಷದ ಮಾರ್ಚ್‌, ಎಪ್ರಿಲ್‌ನಲ್ಲಿ ಲಾಕ್‌ಡೌನ್‌ ಇದ್ದಿರಲಿಲ್ಲ. ಕೊರೊನಾ ಇಲ್ಲವೆಂದು ನಿರ್ಲಕ್ಷ್ಯ ಮಾಡಿದೆವು. ಈಗ ನಮ್ಮ ನಿಯಂತ್ರಣ ತಪ್ಪುತ್ತಿದೆ. ಎರಡನೆಯ ಅಲೆಯ ತೀವ್ರತೆ ಹೆಚ್ಚಿರುವುದು ಕಂಡುಬರುತ್ತಿದೆ. ಆದರೆ ಇದು ಪೀಕ್‌ (ಗರಿಷ್ಠ) ಹಂತಕ್ಕೆ ಇನ್ನೂ ತಲುಪಿಲ್ಲ. ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ ಪ್ರಪಂಚದ ಬೇರೆ ದೇಶಗಳಿಗಿಂತ ಹೆಚ್ಚು ಮರಣ, ಅದರಲ್ಲೂ ಬೆಂಗಳೂರು, ಮುಂಬಯಿ, ದಿಲ್ಲಿಯಂತಹ ಮೆಟ್ರೋ ನಗರಗಳಲ್ಲಿ ಹೆಚ್ಚು ಹಾನಿ ಉಂಟಾಗಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ ಮೆಟ್ರೋ ನಗರಗಳಲ್ಲಿರುವ ಜನಸಂಖ್ಯೆ.

ಏಕಕಾಲದ ಸಮಸ್ಯೆ

ನಮ್ಮ ವ್ಯವಸ್ಥೆಗೂ ಮೀರಿದ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಾಗ ಆರೋಗ್ಯ ಸೌಕರ್ಯಗಳ ಕೊರತೆ ಕಾಡುವುದು ಸಹಜ. ಕೊರೊನಾದಂತಹ ಸಾಂಕ್ರಾಮಿಕದ ಸಂದರ್ಭದಲ್ಲಿ ಏಕಕಾಲದಲ್ಲಿ  ಸೋಂಕಿತರು ಆಸ್ಪತ್ರೆಗೆ ದಾಖಲಾದಾಗ ಈ ಎಲ್ಲ ಸಮಸ್ಯೆಗಳು ಎದುರಾಗಿ ಹಾನಿಗಳು ತೀವ್ರಗೊಳ್ಳುತ್ತವೆ. ಏಕಕಾಲದಲ್ಲಿ ಆಸ್ಪತ್ರೆಗಳಲ್ಲಿ ಬೆಡ್‌, ಐಸಿಯು, ಆಕ್ಸಿಜನ್‌ಗೆ ಭಾರೀ ಪ್ರಮಾಣದ ಬೇಡಿಕೆ ಬಂದಾಗ ಇಂತಹ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ರೋಗಿಗಳನ್ನು ಆರೈಕೆ ಮಾಡುವ ಸಾಧ್ಯತೆಯೇ ಇಲ್ಲದಾಗ ಹೀಗೆ ಆಗುತ್ತದೆ. ದಿಲ್ಲಿಯಲ್ಲೀಗ ಮನೆಗಳಲ್ಲಿಯೇ ಆಕ್ಸಿಜನ್‌ ಸಿಲಿಂಡರ್‌ ಇರಿಸಿಕೊಂಡು ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೈಮೀರುವ ಸ್ಥಿತಿಯಲ್ಲಿ  (ಸ್ಯಾಚುರೇಶನ್‌) ಸಿಲಿಂಡರ್‌ ಪೂರೈಕೆ ಅಸಾಧ್ಯವಾದಾಗ ಮರಣ ಸಹಜವಾಗಿ ಸಂಭವಿಸುತ್ತದೆ.

ಪಂಚನೀತಿ ಪಾಲನೆ

ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡು ವುದು, ಕೈಗಳನ್ನು ಸದಾ ಶುಚಿಯಾಗಿರಿಸಿಕೊಳ್ಳುವುದು, ಗುಂಪುಗೂಡದೆ ಇರುವುದರ ಜತೆಗೆ ವ್ಯಾಕ್ಸಿನ್‌ ಹಾಕಿಕೊಳ್ಳುವುದು ಈ ಸೋಂಕಿನಿಂದ  ಸುರಕ್ಷಿತವಾ ಗಿರಲು ನಾವು ಕಡ್ಡಾಯವಾಗಿ ಪಾಲಿಸಲೇಬೇಕಾದ ಪಂಚಸೂತ್ರಗಳಾಗಿವೆ.

ಯುವಕರಿಗೇಕೆ ಸೋಂಕು?

ಇದೀಗ ದೇಶದಲ್ಲಿ ಹರಡುತ್ತಿರುವ ಕೊರೊನಾ ಎರಡನೆಯ ಅಲೆಯ ಸೋಂಕು ಯುವಕರನ್ನು ಆಕ್ರಮಿಸಿಕೊಳ್ಳುತ್ತಿದೆ. 30ರಿಂದ 50ರೊಳಗಿನ ಯುವ ಸಮುದಾಯದವರು ಸೋಂಕಿತರಾಗುತ್ತಿರುವುದನ್ನು ನೋಡುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣವೆಂದರೆ ಗುಂಪುಗೂಡುವಲ್ಲಿ ಮತ್ತು ದೈಹಿಕ ಅಂತರ ಕಾಯ್ದು ಕೊಳ್ಳದಿರುವುದರಲ್ಲಿ ಯುವ ವರ್ಗ ಮುಂದೆ ಇರುವುದೇ ಆಗಿದೆ. ವಯಸ್ಕರು ಈಗಾಗಲೇ ಮೊದಲ ಡೋಸ್‌ ಲಸಿಕೆ ತೆಗೆದುಕೊಂಡಿರುವುದರಿಂದ ಈ ವರ್ಗದವರನ್ನು ಈ ಬಾರಿ ಸೋಂಕು ಅಷ್ಟೊಂದು ಭಾದಿಸದಿರಬಹುದು. ಮೊದಲ ಡೋಸ್‌ ತೆಗೆದುಕೊಂಡವರಿಗೆ ಮೂರು ವಾರದ ಬಳಿಕ ಸೋಂಕು ತಗಲಿದರೂ ಸೋಂಕಿನ ತೀವ್ರತೆ ಕಡಿಮೆಯಾಗಿರುವುದನ್ನು ಕಂಡಿದ್ದೇವೆ.

ಪಲ್ಸ್‌ ಆಕ್ಸಿಮೀಟರ್‌

ಈಗ ಒಮ್ಮೆಲೆ ಆರೋಗ್ಯ ಕುಸಿತವಾಗುವ ಇನ್ನೊಂದು ಲಕ್ಷಣ ಕಾಣುತ್ತಿದ್ದೇವೆ. ರೋಗ ಲಕ್ಷಣ ಎಲ್ಲರಿಗೂ ಕಾಣದೆ ಇರಬಹುದು. ಇದನ್ನು ಕಂಡು ಹಿಡಿಯುವ ಸುಲಭ ಮಾರ್ಗವೆಂದರೆ ಆಮ್ಲಜನಕದ ಪ್ರಮಾಣವನ್ನು ಮನೆಯಲ್ಲಿ ನೋಡುವುದು. 94ಕ್ಕಿಂತ ಆಮ್ಲಜನಕ ಕಡಿಮೆಯಾದರೆ ಕೂಡಲೇ ಚಿಕಿತ್ಸೆ ನೀಡಬೇಕಾಗುತ್ತದೆ. ಹಿಂದೆ ಮನೆಯಲ್ಲಿ ಜ್ವರ ಬಂದರೆ ನೋಡಲು ಥರ್ಮಾ ಮೀಟರ್‌ ಇರಿಸಿಕೊಳ್ಳುತ್ತಿದ್ದರು. ಅದೇ ರೀತಿ ಈಗ ಪಲ್ಸ್‌ ಆಕ್ಸಿಮೀಟರ್‌ ಉಪಕರಣವನ್ನು ತಂದಿರಿಸಿಕೊಂಡು ಆಮ್ಲಜನಕ ಮಟ್ಟವನ್ನು ಆಗಾಗ ಗಮನಿಸಬಹುದು. ಸಾಮಾನ್ಯ ಉಪಕರಣಕ್ಕೆ 1,500 ರೂ., ಉತ್ತಮ ಉಪಕರಣಕ್ಕೆ 3,000 ರೂ. ಇರಬಹುದು. ಆದರೆ ಸದ್ಯ ಮಾರುಕಟ್ಟೆಗೆ ಬೇಡಿಕೆಗೆ ತಕ್ಕಷ್ಟು ಆಕ್ಸಿಮೀಟರ್‌ಗಳು ಪೂರೈಕೆಯಾಗುತ್ತಿಲ್ಲವಾದರೂ ಲಭ್ಯವಿರುವ ಸಂದರ್ಭದಲ್ಲಿ ಇದನ್ನು ಖರೀದಿಸಿಟ್ಟುಕೊಳ್ಳುವುದು ಉತ್ತಮ.

1:10 ಸೋಂಕಿನ ಪ್ರಮಾಣ

ಒಬ್ಬನಿಗೆ ಸೋಂಕು ಇರುವುದು ಪತ್ತೆಯಾದರೆ ಕನಿಷ್ಠ ಆತನ ಸಂಪರ್ಕದ 8-10 ಜನರಿಗೆ ಸೋಂಕು ಬಂದಿದೆ ಎಂದೇ ಅರ್ಥ. ಉಳಿದವರು ಪರೀಕ್ಷೆ ಮಾಡಿಸಿಕೊಳ್ಳದೆ ಇರಬಹುದು ಅಥವಾ ರೋಗ ಲಕ್ಷಣ ಇಲ್ಲದೆ ಇರಬಹುದು.

ವ್ಯಾಕ್ಸಿನ್‌- ರೆಮಿಡಿಸಿವಿರ್‌

ವ್ಯಾಕ್ಸಿನ್‌ಅನ್ನು ಸೋಂಕು ಬಾರದಂತೆ ತೆಗೆದು ಕೊಳ್ಳುವುದಾದರೆ ರೆಮಿಡಿಸಿವಿರ್‌ ಚುಚ್ಚುಮದ್ದನ್ನು ಸೋಂಕಿತರಿಗೆ ಕೊಡುವುದಾಗಿದೆ. ಇದೂ ಕೂಡ ಎಲ್ಲ ಸೋಂಕಿತರಿಗೆ ಕೊಡುವುದಲ್ಲ. ಗಂಭೀರ ಸ್ಥಿತಿಯ ವರಿಗೆ, ಅಗತ್ಯವಿದ್ದವರಿಗೆ ಮಾತ್ರ ಕೊಡುತ್ತೇವೆ. ಇದರ ಪೂರೈಕೆಯನ್ನು ಔಷಧ ನಿಯಂತ್ರಕರು ನಿರ್ವಹಿಸು ತ್ತಿದ್ದಾರೆ. ಇದರ ಕೊರತೆಯೂ ಇದೆ.

ವ್ಯಾಕ್ಸಿನ್‌ ಕೊರತೆ ಏಕಾಯಿತು?

ನಮ್ಮಲ್ಲಿ ಈಗ ವ್ಯಾಕ್ಸಿನ್‌ ಕೊರತೆ ಉಂಟಾಗಿದೆ. ಇದು “ಹಲ್ಲಿದ್ದಾಗ ಕಡಲೆ ಇಲ್ಲ, ಕಡಲೆ ಇದ್ದಾಗ ಹಲ್ಲಿಲ್ಲ’ ಎಂಬ ಗಾದೆ ಮಾತಿನಂತಾಗಿದೆ. ಮೊದಲು ವ್ಯಾಕ್ಸಿನ್‌ ಪೂರೈಸುವಾಗ ಉಡುಪಿ ಜಿಲ್ಲೆಗೆ ನಿತ್ಯ 12,000 ಬರುತ್ತಿತ್ತು. ಆಗ 4,000ಕ್ಕಿಂತ ಹೆಚ್ಚು ವ್ಯಾಕ್ಸಿನ್‌ಗೆ ಬೇಡಿಕೆ ಇರಲಿಲ್ಲ. ಮಾರುಕಟ್ಟೆ ನಿರ್ವಹಣೆ ಕ್ರಮದಂತೆ ಹೆಚ್ಚು ಬೇಡಿಕೆ ಇರುವಲ್ಲಿಗೆ ಇಲ್ಲಿನ ಪಾಲನ್ನು ವಿತರಿಸಲಾಯಿತು. ಮೈಸೂರಿಂತಹ ಜಿಲ್ಲೆಗಳಲ್ಲಿ ಪೂರೈಕೆಗಿಂತ ಹೆಚ್ಚು ಬೇಡಿಕೆ ಇತ್ತು. ಎಲ್ಲಿ ಬೇಡಿಕೆ ಇರಲಿಲ್ಲವೋ ಅಲ್ಲಿನ ಪ್ರಮಾಣವೂ ಬೇಡಿಕೆ ಹೆಚ್ಚಿಗೆ ಇರುವಲ್ಲಿಗೆ ಹೋಯಿತು. ಈಗ ಬೇಡಿಕೆ ಇರುವಾಗ ಪೂರೈಕೆಯಾಗುತ್ತಿಲ್ಲ. ಇದುವರೆಗೆ ಸರಕಾರ ಸಬ್ಸಿಡಿ ದರ 150 ರೂ.ನಲ್ಲಿ ಖಾಸಗಿ ಆಸ್ಪತ್ರೆಗಳಿಗೆ ವ್ಯಾಕ್ಸಿನ್‌ ಪೂರೈಸುತ್ತಿತ್ತು. 100 ರೂ. ಸೇವಾ ಶುಲ್ಕದೊಂದಿಗೆ ಜನರಿಗೆ ವಿತರಿಸಲಾಗುತ್ತಿತ್ತು. ಮೇ 1ರಿಂದ ಖಾಸಗಿ ಆಸ್ಪತ್ರೆಗಳಿಗೆ ಸರಕಾರಿ ವ್ಯಾಕ್ಸಿನ್‌ ಪೂರೈಕೆ ನಿಲುಗಡೆಯಾಗಿದೆ. ಖಾಸಗಿ ಆಸ್ಪತ್ರೆಯವರು ವ್ಯಾಕ್ಸಿನ್‌ ಉತ್ಪಾದನ ಕಂಪೆನಿಯಿಂದ ತರಿಸಿಕೊಳ್ಳಬೇಕಾಗಿದೆ. ಇದಕ್ಕೆ ಇನ್ನೂ ಸ್ಪಷ್ಟ ಮಾರ್ಗಸೂಚಿ ಬಂದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಕಂಪೆನಿಗಳಿಂದ ಪೂರೈಕೆಯಾಗುವಾಗ ಕನಿಷ್ಠ ಎರಡು ವಾರಗಳಾದರೂ ಬೇಕಾಗಬಹುದು.

2ನೇ ಡೋಸ್‌ ವಿಳಂಬಕ್ಕೆ ಗಾಬರಿ ಬೇಡ

ಒಂದು ವೇಳೆ ಮೊದಲ ಡೋಸ್‌ ತೆಗೆದು ಕೊಂಡವರು ಎರಡನೆಯ ಡೋಸ್‌ ತೆಗೆದು ಕೊಳ್ಳುವಾಗ ಲಸಿಕೆ ಅಲಭ್ಯತೆಯ ಕಾರಣದಿಂದ ವಿಳಂಬವಾದರೂ ಬಹಳ ತೊಂದರೆ ಇಲ್ಲ. ಲಸಿಕೆ ಲಭ್ಯವಾದಾಗ ತೆಗೆದುಕೊಳ್ಳಬಹುದು. ಇದಕ್ಕಾಗಿ ಗಾಬರಿಗೊಳ್ಳಬೇಕಾಗಿಲ್ಲ.

(ಲೇಖಕರು ಕೊರೊನಾ ಮೊದಲ ಅಲೆಯ ಸಂದರ್ಭ ಡಾ|ಟಿಎಂಎ ಪೈ ಕೋವಿಡ್‌ ಆಸ್ಪತ್ರೆಯ ನೋಡಲ್‌ ಅಧಿಕಾರಿಯಾಗಿದ್ದರು.)

ಖಾಯಂ ಸಾಂಕ್ರಾಮಿಕದ ಸಾಧ್ಯತೆ

ಈಗ ಎರಡನೆಯ ಅಲೆ ಖಂಡಿತವಾಗಿ ಮುಗಿಯುತ್ತದೆ. ಮೂರನೆಯ ಅಲೆ ಬಂದೇ ಬರುತ್ತದೆ, ನಾಲ್ಕನೆಯ ಅಲೆಯೂ ಬರಬಹುದು. ಒಬ್ಬರೋ ಇಬ್ಬರೋ ಅಲ್ಲ, ಪ್ರತಿಯೊಬ್ಬರೂ ಜಾಗ್ರತೆ ವಹಿಸದೆ ಇದ್ದರೆ ಇದು ಖಾಯಂ ಸಾಂಕ್ರಾಮಿಕ (ಪರ್ಮನೆಂಟ್‌ ಪೆಂಡಮಿಕ್‌)ವಾಗಿ ಉಳಿದುಕೊಳ್ಳುವ ಸಾಧ್ಯತೆಗಳಿವೆ. ಹೀಗಾಗುವುದಾದರೆ ಅದಕ್ಕೆ ಕಾರಣ ನಮ್ಮ ಸಮಾಜವೇ. ನಮ್ಮ ನಡವಳಿಕೆ ಪ್ರಕಾರ ಇದು ಆಗುತ್ತದೆ.  ಇನ್ನು ಕನಿಷ್ಠ ಎರಡು ವರ್ಷವಾದರೂ ಈ ಸೋಂಕಿನ ಪರಿಣಾಮ ಇದ್ದೇ ಇರುತ್ತದೆ ಎಂದು ನನಗನಿಸುತ್ತದೆ.

 ಡಾ| ಶಶಿಕಿರಣ್‌ ಉಮಾಕಾಂತ್‌

ವೈದ್ಯಕೀಯ ಅಧೀಕ್ಷಕರು, ಡಾ|ಟಿಎಂಎ ಪೈ ಆಸ್ಪತ್ರೆ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next