Advertisement

ಬದಲಾವಣೆಯ ಸಮಯ ಬಂದಿದೆ!

01:08 AM May 30, 2017 | Team Udayavani |

ಮಧ್ಯರಾತ್ರಿ ಬಸ್‌ ನಿಲ್ಲಿಸಿದಾಗ ರಸ್ತೆ ಪಕ್ಕದಲ್ಲಿ ಕೊನೆಪಕ್ಷ ಮಹಿಳೆಯರು ಮೂತ್ರಬಾಧೆ ತೀರಿಸಲು ಹೋಗುವುದು ಕ್ರೂರ ನರಕ. ಹಾಗಾಗಿ ಹೈವೇಗಳ ಪಕ್ಕದಲ್ಲಿ ಅತ್ಯುತ್ತಮ ಟಾಯ್‌ಲೆಟ್‌ ವ್ಯವಸ್ಥೆ ಬೇಕು. ಹಾಗಂತ ಸರ್ಕಾರಗಳಿಗೆ ಹೇಳಬೇಕಾದವರು ವಿರೋಧ ಪಕ್ಷಗಳೇ? ಅವರ ಅಗತ್ಯಗಳೇ ಬೇರೆ. ಮರಳು, ಬಗರ್‌ಹುಕುಂ, ಅಭಿವೃದ್ಧಿ, ಕಟ್ಟಡ ರಸ್ತೆಗಳನ್ನು ಬಿಟ್ಟು ಅವರು ಮುಂದೆ ಸಾಗಲಾರರು. ಜನರ ನಿರೀಕ್ಷೆ, ಅಗತ್ಯಗಳನ್ನು ಆಡಳಿತ ನಡೆಸುವವರ ಕಿವಿಗೆ ಮುಟ್ಟಿಸುವುದು ಹೇಗೆ?

Advertisement

ದಾಖಲೆಗಳಲ್ಲಿ ತಂದೆಯ ಹೆಸರು ಕಡ್ಡಾಯವೇನಲ್ಲ. ಶಾಲೆಯೋ, ಸರ್ಕಾರಿ ದಾಖಲೆಗಳಲ್ಲೋ ಸಿಂಗಲ್‌ ಪೇರೆಂಟ್‌ ಆದ ತಾಯಿ ಮಕ್ಕಳ ಯೋಗಕ್ಷೇಮಕ್ಕೆ ಜವಾಬ್ದಾರಳಾಗಬಹುದು. ಅದೇ ಪಾಸ್‌ಪೋರ್ಟ್‌ ಮಾಡಿಸುವುದಿದ್ದರೆ ಕಡ್ಡಾಯವಾಗಿ ಅರ್ಜಿಯಲ್ಲಿ ತಂದೆಯ ಹೆಸರನ್ನು ದಾಖಲಿಸಲೇಬೇಕು. ಇದು ಕಾನೂನು. ಆದರೆ ಸಿಂಗಲ್‌ ಪೇರೆಂಟ್‌ ಆದವರು ತಮ್ಮ ಮಕ್ಕಳಿಗೆ ಪಾಸ್‌ಪೋರ್ಟ್‌ ಮಾಡಿಸಲಾಗದಿದ್ದರೆ ಬರೀ ಕಾಯ್ದೆಯನ್ನು ದೂಷಿಸಬೇಕೆ? ಈ ವಿಷಯವೂ ಅಷ್ಟೇ, ಸ್ವಯಂಸೇವಾ ಸಂಸ್ಥೆಗಳಿಗೋ, ರಾಜಕೀಯ ಹಿತಾಸಕ್ತಿಗಳಿಗೋ ಸರಕಲ್ಲ. ಸೋನಿಯಾಗಾಂಧಿಯ ರಾಷ್ಟ್ರೀಯತೆಯ ಪ್ರಶ್ನೆಯಂತೆ ಇದು ಮತ ತಂದುಕೊಡದು. ಓರ್ವ ತಾಯಿ ತನ್ನಂತವರ ಧ್ವನಿಯನ್ನು ಸರ್ಕಾರದ ನೀತಿನಿರೂಪಕರ ಮಟ್ಟಕ್ಕೆ ಕೊಂಡೊಯ್ಯುವುದು ಹೇಗೆ?

ಸಮಸ್ಯೆ ನಮ್ಮ ದೇಶದ್ದಷ್ಟೇ ಅಲ್ಲ. ಬೇರೆ ಬೇರೆ ರಾಷ್ಟ್ರಗಳಲ್ಲೂ ಇವೆ. ಫೇಸ್‌ಬುಕ್‌, ಟ್ವಿಟ್ಟರ್‌, ವ್ಯಾಟ್ಸ್‌ಪ್‌ನಂತ ಸಾಮಾಜಿಕ ಜಾಲತಾಣಗಳು ಕೂಡ ತಮ್ಮದೇ ಸ್ಥರದಲ್ಲಿ ಕೆಲಸ ಮಾಡುತ್ತಿವೆ. ಆದರೆ ಇವು ಬಯಲಿನಲ್ಲಿ ನಿಂತು ಕೂಗಿದ ಸ್ವರೂಪದಲ್ಲಷ್ಟೇ ಕಾಣಿಸುತ್ತವೆ. ಕೂಗು ಗಟ್ಟಿಯಾಗಿದ್ದರೆ ಮಾತ್ರ ಆಳುವ ಕಿವಿಗಳಿಗೆ ತಲುಪಬಹುದು. ಸಾರ್ವಜನಿಕರ ಸಾರ್ವತ್ರಿಕ ವಿಚಾರದ ದೂರು, ಅನಿವಾರ್ಯವಾಗುವ ಬದಲಾವಣೆ, ಅಭಿವೃದ್ಧಿಯ ಆಶಯಗಳನ್ನು ಸರ್ಕಾರಗಳಿಗೆ ಮುಟ್ಟಿಸುವ ಸಾಂಸ್ಥಿಕ ಧ್ವನಿ ಬೇಕು. ಅದು ದೇಶದ ಕಟ್ಟಕಡೆಯ ಮನುಷ್ಯನಿಂದಲೂ ಅಭಿಪ್ರಾಯ ಸಂಗ್ರಹಿಸಿ, ಆಳುವ ಜನತಾ ದೊರೆಗೆ ಮುಟ್ಟಿಸಬೇಕು. ಈ ನಿಟ್ಟಿನಲ್ಲಿ ಒಂದಾದರೂ ಸೂಕ್ತ ವ್ಯವಸ್ಥೆ ಇದೆಯೇ?

ಸ್ವಾರ್ಥ ಜಗತ್ತಿನ ಆಶಾಕಿರಣ
ಸಮಾಜದ ಎಲ್ಲರನ್ನು ಸೇರಿಸಿ ಒಂದು ಧ್ವನಿಯಾಗುವ ಮತ್ತು ಆ ಕೂಗನ್ನು ಆಡಳಿತದ ಸಂಬಂಧಿಸಿದ ಕೇಂದ್ರ ವ್ಯವಸ್ಥೆಗೆ ತಲುಪಿಸುವ ಶಿಷ್ಟ ವ್ಯವಸ್ಥೆಯನ್ನು ಒಂದು ಯಕಶ್ಚಿತ್‌ ವೆಬ್‌ಸೈಟ್‌ ಮಾಡುತ್ತಿದೆ. ಜನರಿಗೆ ವಿಷಯವನ್ನು ಆಯ್ದು ಚರ್ಚೆಗೆ ಬಿಡುವ ಸ್ವಾತಂತ್ರ್ಯ ಕೊಡುವ ಈ ವೆಬ್‌ಸೈಟ್‌ ಪಾರದರ್ಶಕವಾಗಿದೆ. ಜನಪರವಾಗಿದೆ, 196 ದೇಶಗಳಲ್ಲಿ ಈ www.change.org ವೆಬ್‌ ಹಬ್ಬಿದೆ. ವೆಬ್‌ ಎಂಬುದೇ ಪ್ರಪಂಚವ್ಯಾಪಿ. ಬಳಕೆಯಾಗುತ್ತಿದೆ ಎಂಬುದು ಹೆಚ್ಚು ಮುಖ್ಯ. ನೆನಪಿರಲಿ, ಈವರೆಗೆ 21,560 ವಿಚಾರಗಳಲ್ಲಿ ಜನಸಾಮಾನ್ಯರ ಧ್ವನಿಯನ್ನು ಬ್ಯೂರೋಕ್ರಸಿ ಒಪ್ಪಿಕೊಂಡಿದೆ. ಸರಾಸರಿಯ ಲೆಕ್ಕದಲ್ಲಿ ಪ್ರತಿ ಘಂಟೆಗೆ ಒಂದು ವಿಚಾರದಲ್ಲಿ ಈ ವೆಬ್‌ನ ಮತ ಸಂಗ್ರಹದ ವಿಚಾರ ಆಳುವ ಕಿವಿಗಳಿಗೆ ತಲುಪಿ ಸೂಕ್ತ ಪರಿಹಾರ ಲಭ್ಯವಾಗುತ್ತಿದೆ. ಇಲ್ಲಿನ ಅಂಕಿ ಅಂಶಗಳು ಪ್ರತಿ ಘಂಟೆಗೆ ಪ್ರಗತಿ ಕಾಣುತ್ತದೆ ಎಂಬುದನ್ನೂ ಇಲ್ಲೇ ಹೇಳಬೇಕು.

ಪಾಸ್‌ಪೋರ್ಟ್‌ ವಿಚಾರವನ್ನೇ ತೆಗೆದುಕೊಂಡರೆ, ನಮ್ಮ ದೇಶದ ಅತ್ಯಂತ ಸಾಮಾನ್ಯರಲ್ಲೊಬ್ಬರಾದ ಪ್ರಿಯಾಂಕ ಗುಪ್ತ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರಿಗೆ ಪಿಟೀಷನ್‌ ಹಾಕುತ್ತಾರೆ. ಈವರೆಗೆ ದೇಶದ 1,15,140 ಜನ ಇದನ್ನು ಬೆಂಬಲಿಸಿದ್ದಾರೆ. ಕೇಂದ್ರದ ಇನ್ನೊಬ್ಬ ಸಚಿವೆ ಮನೇಕಾ ಸಂಜಯ್‌ಗಾಂಧಿ ಕೂಡ ಇದನ್ನು ಬೆಂಬಲಿಸಿ ಸಹಿ ಹಾಕಿದ್ದರು. ಅವರು ಪತ್ರ ಬರೆದು ಈ ಗಂಭೀರ ವಿಚಾರವನ್ನು ಸುಷ್ಮಾ ಅವರ ಗಮನಕ್ಕೆ ತಂದು ಪಾಸ್‌ಪೋರ್ಟ್‌ ಅರ್ಜಿಯಲ್ಲಿ ಅಗತ್ಯ ಮಾರ್ಪಾಡು ಮಾಡುವಲ್ಲಿ ಒತ್ತಡ ಹೇರುವುದಾಗಿ ಘೋಷಿಸಿದ್ದರು. ಅದರಂತೆ ಆಯಿತು ಕೂಡ. ವಿಷಯದ ಗಂಭೀರತೆಯನ್ನು ಅರಿತ ಸುಷ್ಮಾ ಸ್ವರಾಜ್‌ ವಿದೇಶಾಂಗ ವ್ಯವಹಾರ ಖಾತೆ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಒಳಗೊಂಡ ಮೂರು ಸದಸ್ಯರ ಸಮಿತಿ ರಚಿಸಿ, ಈ ವಿಚಾರದಲ್ಲಿ ಸೂಕ್ತ ಸಲಹೆ ನೀಡಲು ನಿರ್ದೇಶಿಸಿದರು. ಇಲ್ಲಿನ ಶಿಫಾರಸುಗಳ ಅನ್ವಯ, ಏಕ ಪೋಷಕರ ಮಕ್ಕಳ ಪಾಸ್‌ಪೋರ್ಟ್‌ ನಿಯಮಗಳನ್ನು ವಿದೇಶಾಂಗ ಇಲಾಖೆ ಸರಳೀಕರಿಸಲು ಕ್ರಮ ಕೈಗೊಂಡಿದೆ. 1,49,187 ಜನರಿಂದ ಸಹಿ ಹಾಕಿಸಲ್ಪಟ್ಟ ರೆಡ್‌ ಬಸ್‌ನಲ್ಲಿ ಹೆಚ್ಚಿನ ಭದ್ರತೆ ಬೇಕು ಎಂಬ ಪಿಟಿಷನ್‌ ಈಗಾಗಲೇ ಸಮ್ಮತಿ ಪಡೆದಿದ್ದು, ಫ್ರೀ ಬೇಸಿಕ್ಸ್‌ನ ವಿಚಾರದಲ್ಲಿ ಗೂಗಲ್‌ ಹಿಂದೆ ಸರಿದಿದ್ದು ಕೆಲವು ಉದಾಹರಣೆಗಳಷ್ಟೇ. ಹೆದ್ದಾರಿ ಪಕ್ಕದ ಮಹಿಳೆಯರ ಸುರಕ್ಷಿತ ಮೂತ್ರಾಲಯದ ಬೇಡಿಕೆಗೆ ಈವರೆಗೆ 1,76,363 ಜನ ಬೆಂಬಲಿಸಿದ್ದಾರೆ ಮತ್ತು  ಮುಂದುವರೆದಿದೆ!

Advertisement

ನಾವೂ ಆಂದೋಲನ ಮಾಡಬಹುದು!
ಒಂದೆಡೆ ಚಳವಳಿಗಳು ಸಾಯುತ್ತಿವೆ. ಅಣ್ಣಾ ಹಜಾರೆ ಲೋಕ್‌ಪಾಲ್‌ ಮಸೂದೆಗೆ ಬೇಡಿಕೆಗೆ ನಡೆಸಿದ ಉಪವಾಸ ಸತ್ಯಾಗ್ರಹ ಸುದ್ದಿಯಾಯಿತೇ ವಿನಃ ಸಾಕಾರವಾಗಲಿಲ್ಲ. ಆವತ್ತು ಲಕ್ಷ, ಲಕ್ಷ ಜನ ಧ್ವನಿ ಎತ್ತಿದ್ದು ಹಾಗೇ ಕಣ್ಮರೆಯಾಯಿತು. ಪೊಲೀಸರು ತಮ್ಮ ಮೂಲಭೂತ ಸೌಕರ್ಯ ಬೇಡಿಕೆಗೆ ಮುಷ್ಕರ ಮಾಡುವುದನ್ನೇ ಪ್ರತಿಬಂಧಿಸಲಾಯಿತು. ಈ ಹಂತದಲ್ಲಿ ದೇಶದ ಬಹುಪಾಲು ಜನರಿಗೆ ಕೈಗೆಟುಕಿರುವ ಅಂತರ್ಜಾಲದ ಮೂಲಕ ಕೂಡ ಚಳವಳಿಗಳನ್ನು ಹುಟ್ಟುಹಾಕಬಹುದು. ಪ್ರಜ್ಞಾವಂತರು ಮತ್ತೆ ವಮಡಿ ಮಾಡಬಾರದಷ್ಟೇ.

www.change.org ವೆಬ್‌ ಯಾವುದೇ ಲಾಭಾಂಕಾಂಕ್ಷೆ ಇಲ್ಲದೆ, ಜಾಹೀರಾತುದಾರರ ವೆಬ್‌ ಅಲಂಕಾರವಿಲ್ಲದೆ ನಿರ್ವಹಿಸಲ್ಪಡುತ್ತಿರುವ ವ್ಯವಸ್ಥೆ. ಇದರೊಳಗೆ ತೆರಳಿ ನಮ್ಮ ವಿವರ, ಇ ಮೇಲ್‌ ಐಡಿ ಸಹಿತವಾಗಿ ನೋಂದಾಯಿಸಿಕೊಳ್ಳಬೇಕು. ಫೇಸ್‌ಬುಕ್‌ ಖಾತೆಯ ಮೂಲಕವೂ ಖಾತೆ ತೆರೆಯಬಹುದು. ಇಲ್ಲಿ ನಾವು ಎತ್ತಬೇಕಿರುವ ವಿಷಯವನ್ನು ಆಕರ್ಷಕ ಶೀರ್ಷಿಕೆ ಮೂಲಕ ದಾಖಲಿಸಬೇಕು. ಅದಕ್ಕೆ ನಮ್ಮ ವಾದ, ವಿವರ, ತರ್ಕ, ಪರಿಣಾಮ, ಅಂಕಿಅಂಶ ಇಟ್ಟು ಅಡಿಟಿಪ್ಪಣಿಯನ್ನೂ ದಾಖಲಿಸಬೇಕು. ಶೀರ್ಷಿಕೆ ಚಿಕ್ಕದಾಗಿ ಪರಿಣಾಮಕಾರಿಯಾಗಿದ್ದರೆ ಚೆಂದ, ವಿವರ ಸುಲಭಗ್ರಾಹ್ಯವಾಗಿದ್ದಷ್ಟೂ ಪ್ರಭಾವಯುತ. ಮುಂದಿನ ಹಂತದಲ್ಲಿ, ಈ ಪಿಟಿಷನ್‌ ಯಾರಿಗೆ ಸಲ್ಲಿಸಬೇಕು ಮತ್ತು ಮನವಿದಾರ ನಿರೀಕ್ಷಿಸುವ ಪರಿಹಾರ ಯಾವುದು ಎಂಬ ಬಗ್ಗೆ ಸ್ಪಷ್ಟಪಡಿಸಬೇಕು. ಇದಕ್ಕೆ ಫೋಟೊ, ವಿಡಿಯೋ ಸೇರ್ಪಡೆ ಮಾಡಲೂ ಅವಕಾಶವಿದೆ. ಇದರಿಂದ ಆರು ಪಟ್ಟು ಜನ ಇದನ್ನು ಗಮನಿಸುತ್ತಾರೆ ಎಂದು ಸ್ವತಃ ಚೇಂಜ್‌ ಡಾಟ್‌ ಆರ್ಗ್‌ ವಿಶ್ಲೇಷಿಸಿದೆ. ನಂತರದಲ್ಲಿ ಈ ಪಿಟಿಷನ್‌ ಅನ್ನು ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲೂ ಶೇರ್‌ ಮಾಡಬಹುದು.

ನಡೆದ ಚರ್ಚೆಗಳು ಇಲ್ಲಿಯೇ ಸಾಯುವುದಿಲ್ಲ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ಗ್ಳ ದೋಷವೇ ಇದು. ಇಲ್ಲಿಯ ಚರ್ಚೆಗಳನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಆಗುವುದಿಲ್ಲ. ಹಾಗಾಗಿಯೇ ಜನರ ಧ್ವನಿ ಪ್ರಬಲವಾಗಿದ್ದರೂ ಹಲವು ಬಾರಿ ವಿಷಯ ಸರ್ಕಾರವನ್ನು ಮುಟ್ಟುವುದಿಲ್ಲ. ಎಷ್ಟೋ ಬಾರಿ ಪತ್ರಿಕೆ ಅಥವಾ ಟಿವಿ ಮಾಧ್ಯಮ ಇದನ್ನು ಗಮನಿಸಿ ಸುದ್ದಿ ಮಾಡಿದ ನಂತರ ಸರ್ಕಾರ ಎಚ್ಚರಗೊಳ್ಳುತ್ತದೆ. ಚೇಂಜ್‌ ಡಾಟ್‌ ಆರ್ಗ್‌ನಲ್ಲಿ ಹಾಗಲ್ಲ. ಇಲ್ಲಿನ ವಿಚಾರಗಳು ಭರ್ಜರಿಯಾದ ಜನಬೆಂಬಲ ಪಡೆಯುತ್ತಿದ್ದಂತೆ ಅದನ್ನು ತಲುಪಿಸಬೇಕಾದವರಿಗೆ ಖುದ್ದು ವೆಬ್‌ ನಿರ್ವಾಹಕರು ತಲುಪಿಸುತ್ತಾರೆ. ಒಂದು ಪಿಟಿಷನ್‌ಗೆ ಸಹಿ ಮಾಡಿದವರಿಗೆ ಆ ವಿಚಾರದ ಪ್ರತಿಯೊಂದು ಅಪ್‌ಡೇಟ್‌ಗಳನ್ನು ಮುಟ್ಟಿಸುತ್ತಿರುತ್ತಾರೆ. ಅಷ್ಟೇಕೆ, ಸಹಿ ಮಾಡದ ವೆಬ್‌ ಸದಸ್ಯರಿಗೆ ಸಹಿ ಮಾಡಿ ಎಂದು ಮನವಿಯನ್ನು ತಾನೇ  ಇ.ಮೇಲ್‌ ಮೂಲಕ ಮಾಡುವ ಆಟೋ ವ್ಯವಸ್ಥೆಯನ್ನೂ ಈ ವೆಬ್‌ ಹೊಂದಿದೆ. ಈ ಎಲ್ಲ ಕೆಲಸ ಹೆಚ್ಚು ವೃತ್ತಿಪರವಾಗಿ ನಡೆಯುವುದರಿಂದ ಗಮನ ಸೆಳೆಯುವ ಫ‌ಲತಾಂಶ ಲಭ್ಯವಾಗುತ್ತಿದೆ. 

ಜಾತಿ ಆಧಾರಿತ ಮೀಸಲಾತಿ ನಿಲ್ಲಿಸಿ ಎಂದು 2,65,728 ಜನ ಸರ್ಕಾರವನ್ನು ಒತ್ತಾಯಿಸಿದ್ದು, ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗೆ ಬಿಗಿಕ್ರಮಕ್ಕೆ 1,85,547 ನಾಗರಿಕರು ಆಗ್ರಹಿಸಿರುವುದು, ಮೊಬೈಲ್‌ ಗ್ರಾಹಕರಿಗೆ ಗ್ಯಾರಂಟಿ ನೆಟ್‌ ವೇಗಕ್ಕೆ ಟ್ರಾಯ್‌ ನಿಯಮ ಬೇಕು ಎಂದು 1,51,071 ಗ್ರಾಹಕರು ಕೇಳಿರುವುದು, ಕಲಾಂ ಅವರಿಗಾಗಿ ಸ್ಮರಣೀಯ ಮ್ಯೂಸಿಯಂ ನಿರ್ಮಾಣ ಮಾಡಬೇಕು ಎಂದು 1,13,563 ದೇಶಭಕ್ತರು  ಪ್ರತಿಪಾದಿಸಿರುವುದು ವೆಬ್‌ಸೈಟಲ್ಲಿ ಕಾಣುತ್ತದೆ. ಪಿಟಿಷನ್‌ ದಾಖಲಿಸುವವರು ಹಣ ಕೊಡಬೇಕಾಗಿಲ್ಲ. ಒಂದು ಪಿಟಿಷನ್‌ ಅನ್ನು ಯಶಸ್ವಿಯಾಗಿ ಪ್ರಚಾರ ಮಾಡುವ ಕೆಲಸವನ್ನು ವ್ಯವಸ್ಥಿತವಾಗಿ ವೆಬ್‌ಸೈಟ್‌ ಮಾಡುತ್ತದೆ. ಈವರೆಗೆ 17,97,75,636 ಜನ ಇದರ ಸದಸ್ಯರಾಗಿ ಇಂತದೊಂದು ಆಂದೋಲನವನ್ನು ಬೆಂಬಲಿಸಿದ್ದಾರೆ.

ಕಾವೇರಿ ನಮ್ಮದು, ಸ್ಟೀಲ್‌ ಫ್ಲೈ ಓವರ್‌ ಬೇಡ ಅಂದಿದ್ದು ಇಲ್ಲೇ…
‘ಚೇಂಜ್‌’ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಬಳಸಿಕೊಂಡು ಪಿಟಿಷನ್‌ ಸಲ್ಲಿಸಿದವರ ಒಟ್ಟು ಸಂಖ್ಯೆ, ವಿವರ ಲಭ್ಯವಾಗಿಲ್ಲ. ಆದರೆ ಅಂತರ್ಜಾಲದ ಪಯಣಿಗರೇ ಹೆಚ್ಚು ಇರುವ ಬೆಂಗಳೂರು ಇಂತಹ ನೂರಾರು ಸಮಾಜಮುಖೀ ಪಿಟಿಷನ್‌ಗಳನ್ನು ಹುಟ್ಟುಹಾಕಿದೆ. ಸ್ಟೀಲ್‌ ಫೈ ಓವರ್‌ ಬೇಡ ಎಂಬ ಪಿಟಿಷನ್‌ 37,901 ಸಹಿ ಪಡೆದಿದೆ. ಕಾವೇರಿ ಕರ್ನಾಟಕದ್ದು ಎಂಬ ಭಾವನಾತ್ಮಕ ಪಿಟಿಷನ್‌ 33,598 ಜನರ ಬೆಂಬಲ ಗಿಟ್ಟಿಸಿದೆ. ಮಲ್ಟಿಫ್ಲೆಕ್ಸ್‌ಗಳ ಟಿಕೆಟ್‌ ದರ ಗರಿಷ್ಠ 120 ರೂ. ಇರಬೇಕು ಎಂಬ ಕೂಗು ಎರಡು ವರ್ಷಗಳ ಹಿಂದೆಯೇ ಚೇಂಜ್‌ ಡಾಟ್‌ ಆರ್ಗ್‌ನಲ್ಲಿ ಕೇಳಿಬಂದು 49,991 ಜನರ ಸಹಮತ ಗಳಿಸಿತ್ತು. ಕರ್ನಾಟಕದ ಆಮ್‌ಆದ್ಮಿ ಪಕ್ಷ, ಇಲ್ಲಿನ ಬಿಜೆಪಿ ಅಭಿಮಾನಿಗಳು ತಮಗೆ ಲಗತ್ತಾದ ವಿಚಾರಗಳಲ್ಲೂ ಪಿಟಿಷನ್‌ ದಾಖಲಿಸಿದ್ದರು. ಬಿಜೆಪಿ ಮಂದಿ ಬಿ.ಎಸ್‌.ಯಡಿಯೂರಪ್ಪ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ರಾಜ್ಯಾಧ್ಯಕ್ಷರು ಆಗಬೇಕು ಎಂಬ ಒತ್ತಾಯ ದಾಖಲಿಸಿದ್ದರು. ಹಾಗೇ ಟಿಪ್ಪು ಜಯಂತಿ ಆಚರಣೆ ನಿಲ್ಲಲಿ ಎಂಬುದಕ್ಕೂ ಇಲ್ಲಿ ಪಿಟಿಷನ್‌ ದಾಖಲಾಗಿತ್ತು. ಇಂತಹ ಮುಕ್ತ ಅವಕಾಶದಲ್ಲಿ ಪಿಟಿಷನ್‌ಗಳು ತಪ್ಪು ಕಾರಣಕ್ಕೆ ಬಳಕೆಯಾಗುವುದೂ ಇದೆ. ಅಂತಹ ಭಾವನೆಗಳನ್ನು ಪ್ರಚೋದಿಸುವ ವಿಷಯಗಳ ಪಿಟಿಷನ್‌ಗಳಿಗೆ ಬ್ರೇಕ್‌ ಹಾಕುವ ವ್ಯವಸ್ಥೆಯನ್ನೂ Change.org ಮಾಡಬೇಕಿದೆ.

ನಾವೇನು ಮಾಡಬಹುದು?: ಸರ್ಕಾರಕ್ಕೆ ಧ್ವನಿ ಮುಟ್ಟಿಸುವ ಸುಲಭ ವಿಧಾನ ಇದಾಗಿರುವಾಗ ಇ ಮೇಲ್‌ ಅಥವಾ ಫೇಸ್‌ಬುಕ್‌ ಖಾತೆಯನ್ನು ಹೊಂದಿರುವವರು ತಾವೂ ಲಾಗಿನ್‌ ಆಗಿ ತಮ್ಮ ಸಹಮತವನ್ನು ವ್ಯಕ್ತಪಡಿಸಬಹುದು. ವಿಶ್ವದ 18 ದೇಶಗಳಲ್ಲಿ ಕಚೇರಿಯನ್ನು ಹೊಂದಿರುವ ಚೇಂಜ್‌ ಡಾಟ್‌ ಆರ್ಗ್‌ ತನ್ನನ್ನು ‘ಬದಲಾವಣೆಗಾಗಿ ವಿಶ್ವದ ವೇದಿಕೆ’ ಎಂದು ಕರೆದುಕೊಂಡಿದೆ. ಅದನ್ನು ನಿಜ ಮಾಡಲು ನಾವೂ ಕೈಜೋಡಿಸಬೇಕಾದುದು ಅಗತ್ಯ.

ಜನಪರ ಪಿಟಿಷನ್‌ಗೆ ಬೆಂಬಲ ಬೇಕು!
ಸಾಗರದ ಬಳಕೆದಾರರ ವೇದಿಕೆ, ಮೊಬೈಲ್‌ ಕ್ಷೇತ್ರದಲ್ಲಿ ವರ್ಷಕ್ಕೆ ಐದು ದಿನ ರಿಯಾಯ್ತಿ ದರದ ಕಾಲ್‌, ಎಸ್‌ಎಂಎಸ್‌ಗಳನ್ನು ಪ್ರತಿಬಂಧಿಸುವ ಬ್ಲಾಕ್‌ ಔಟ್‌ ನಿಯಮವನ್ನು ಕಿತ್ತುಹಾಕಬೇಕು ಎಂಬ ಆಂದೋಲನವನ್ನು ಕಳೆದ ವರ್ಷ ಆರಂಭಿಸಿದೆ. ಇದಕ್ಕೆ ಹೆಚ್ಚು ಹೆಚ್ಚು ಬೆಂಬಲವೂ ಬೇಕಾಗಿದೆ. 2008ರಲ್ಲಿ ಜಾರಿಗೆ ಬಂದ ಟ್ರಾಯ್‌ ನಿರ್ದೇಶನ ಪ್ರಕಾರ ವರ್ಷದ ಆಯ್ದ ಐದು ದಿನಗಳಲ್ಲಿ ಉಚಿತ, ರಿಯಾಯಿತಿ ದರದ ಎಸ್‌ಎಂಎಸ್‌ ಸೌಲಭ್ಯಕ್ಕೆ ಕೊಕ್‌ ಕೊಡಲು ಕಾನೂನುಬದ್ಧ ಅವಕಾಶ. ಅಂತಹ ದಿನ ಸಾಮಾನ್ಯ ಪ್ಲಾನ್‌ನಲ್ಲಿನಂತೆ ದುಬಾರಿ ದರ ಅನ್ವಯಿಸಿ ಎಸ್‌ಎಂಎಸ್‌ ಕಳುಹಿಸಬಹುದು. ಎಸ್‌ಟಿಗಳಿಗೂ ಆ ದಿನ ರಜೆ! ಇಂತದೊಂದು ನಿಯಮ 2001ರ ವೇಳೆಗೆ ಮೊಬೈಲ್‌ ನೆಟ್‌ವರ್ಕ್‌ ತಂತ್ರಜ್ಯಾನ ಸುಧಾರಿಸಿಲ್ಲದ ಸಂದರ್ಭದಲ್ಲಿ ಬೇಕಾಗಿದ್ದಿರಬಹುದು. ಆದರೆ ಈಗಲೂ ಅದನ್ನು ಮುಂದುವರೆಸುವುದು ತರವಲ್ಲ. ಒಂದೆಡೆ ಮೊಬೈಲ್‌ ಗ್ರಾಹಕರ ಸಂಖ್ಯೆಗೆ ಕಡಿವಾಣ ಹಾಕುವ ನಿಯಮವಿಲ್ಲದಿರುವಾಗ, ಸೇವಾದಾತರ ಗ್ರಾಹಕರ ಸೌಲಭ್ಯಗಳಿಗೆ ಸಿಸ್ಟಂ ಜಾಮ್‌ ಆಗುತ್ತದೆ ಎಂದು ಕತ್ತರಿಹಾಕುವುದೇ? ಈ ಪಿಟಿಷನ್‌ ಟ್ರಾಯ್‌ನ ಗಮನ ಸೆಳೆದು ಬ್ಲಾಕ್‌ಔಟ್‌ ಡೇ ನಿಯಮ ರದ್ದಾದರೆ ದೇಶದ ಸಮಸ್ತ ಮೊಬೈಲ್‌ ಗ್ರಾಹಕರಿಗೆ ಅನುಕೂಲವಾಗುತ್ತದೆ. ವಿವರಗಳು ಹಾಗೂ ಪಿಟಿಷನ್‌ಗಾಗಿ ಇಲ್ಲಿಗೆ ಲಾಗಿನ್‌ ಆಗಿ, https://www.change.org/p/telicom-regulatary-authority-stop-block-out-day-in-mobile-service

– ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next