Advertisement
ಭೀಮ್ ಆ್ಯಪ್ Bharat Interface for Money ಎಂಬ ದೀರ್ಘ ಹೆಸರಿನ ಹೃಸ್ವ ರೂಪವೇ BHIM. ಇದು ಆಂಡ್ರಾಯ್ಡ್ ಫೋನ್ ಆಧಾರಿತ ತಂತ್ರಾಂಶ. 3 ವಾರಗಳ ಹಿಂದೆ (19.12.2016) ಕಾಕುವಿನಲ್ಲಿ ವಿವರಿಸಿದ ಯುಪಿಐ ತಂತ್ರಾಂಶ ಆಧರಿಸಿ ತಯಾರಿಸಲಾದ ಈ ತಂತ್ರಾಂಶ ಒಂದು ಮೊಬೈಲ್ ಎಪ್ಲಿಕೇಶನ್. ಹಾಗೆ ನೋಡುವುದಾದರೆ ವೈಯಕ್ತಿಕ ಬ್ಯಾಂಕ್‌ಗಳ ಹೆಸರಿನಲ್ಲಿ ಬ್ಯಾಂಕ್‌ಗಳು ಬಿಡುಗಡೆ ಮಾಡಿರುವ ಯುಪಿಐ ತಂತ್ರಾಂಶಕ್ಕೂ ಇದೀಗ ಪ್ರಧಾನಿ ಅವರು ಬಿಡುಗಡೆ ಮಾಡಿರುವ ಭೀಮ್ ಹೆಸರಿನ ಯುಪಿಐ ತಂತ್ರಾಂಶಕ್ಕೂ ಯಾವುದೇ ತಾಂತ್ರಿಕ ವ್ಯತ್ಯಾಸವಿಲ್ಲ. ಆದರೂ ಭೀಮ್ ಆ್ಯಪ್‌ಗೂ ಬ್ಯಾಂಕ್‌ಗಳು ನೀಡುವ ಯುಪಿಐ ಆ್ಯಪ್‌ಗೂ ವ್ಯಾವಹಾರಿಕವಾದ ಒಂದು ದೊಡ್ಡ ವ್ಯತ್ಯಾಸವಿದೆ. ಅದೇನೆಂದರೆ ಭೀಮ್ ಆ್ಯಪ್‌ನಲ್ಲಿ ಒಂದು ಒಂದು ಬಾರಿಗೆ ರೂ. 10,000 ಹಾಗೂ ದಿನವೊಂದಕ್ಕೆ ರೂ. 20,000ದವರೆಗೆ ವ್ಯವಹಾರ ಮಾತ್ರ ನಡೆಸಬಹುದು. ಬ್ಯಾಂಕ್‌ಗಳ ಯುಪಿಐ ಆ್ಯಪ್‌ಗ್ಳಲ್ಲಿ ದಿನವೊಂದಕ್ಕೆ ರೂ. 1,00000 ವರೆಗೆ ವ್ಯವಹಾರ ನಡೆಸಬಹುದು. ಹಾಗಾಗಿ ಈಗಾಗಲೇ ಬ್ಯಾಂಕ್ ಯುಪಿಐ ಇದ್ದವರು ಪ್ರತ್ಯೇಕವಾಗಿ ಭೀಮ್ ಇನ್ಸ್ಟಾಲ್ ಮಾಡಬೇಕಾದ ದರ್ದು ಏನಿಲ್ಲ.
ಭೀಮ್ ಆ್ಯಪ್ ಅಳವಡಿಸಿಕೊಳ್ಳಲು ಒಂದು ಆಂಡ್ರಾಯ್ಡ್ ಮಾದರಿಯ ಸ್ಮಾರ್ಟ್ ಫೋನ್, ಕಾರ್ಯನಿರ್ವಹಿಸಲು ಅಂತರ್ಜಾಲದ ಅಗತ್ಯವಿರುತ್ತದೆ. ಮೊತ್ತ ಮೊದಲನೆಯದಾಗಿ, ನಿಮ್ಮ ಆಂಡ್ರಾಯ್ಡ್ ಫೋನ್ ಮೂಲಕ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿಂದ 1.92 ಎಂಬಿ ಗಾತ್ರದ ಈ ಭೀಮ್ ತಂತ್ರಾಂಶ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕು. (ಅಂತರ್ಜಾಲವಿಲ್ಲದೆ ಯುಎಸ್‌ಎಸ್‌ಡಿ ಪರಿಕಲ್ಪನೆಯಲ್ಲಿ ಕೆಲಸ ಮಾಡಲು ಆಂಡ್ರಾಯ್ಡ್ ಅಲ್ಲದ ಫೀಚರ್ಸ್ ಫೋನುಗಳಿಂದ *99 ಡಯಲ್ ಮಾಡಬೇಕು). ಫೋನ್‌ಗೆ ಡೌನ್‌ಲೋಡ್ ಮಾಡಿಕೊಂಡ ಕೂಡಲೇ, ಮೊತ್ತ ಮೊದಲನೆಯದಾಗಿ ಇಂಗ್ಲಿಷ್ ಹಾಗೂ ಹಿಂದಿ – ಈ ಎರಡು ಬಾಷೆಗಳಲ್ಲಿ ಮಾತ್ರ ಲಭ್ಯವಿರುವ ಈ ಆ್ಯಪ್‌ನಲ್ಲಿ ನಿಮಗೆ ಬೇಕಾದ ಭಾಷೆ ಆಯ್ದುಕೊಳ್ಳಬೇಕು. ಭೀಮ್ ಆ್ಯಪ್‌ನಿಂದ ಅನುಮತಿ ಪಡೆದ ಬಳಿಕ ಅದು ನಿಮ್ಮ ಮೊಬೈಲ್ ನಂಬರನ್ನು ಖಚಿತಪಡಿಸಿಕೊಳ್ಳುತ್ತದೆ. ನಿಮ್ಮ ಫೋನ್‌ನಿಂದ ಎಸ್ಸೆಮ್ಮೆಸ್ ಕಳುಹಿಸಿ ನಿಮ್ಮ ಮೊಬೈಲ್ ನಂಬರಿಗೆ ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಇಲ್ಲವೇ ಎನ್ನುವುದನ್ನು ತಪಾಸಣೆ ಮಾಡುತ್ತದೆ. ಬಳಿಕ ನಿಮಗೆ ನಾಲ್ಕಂಕಿಯ ಒಂದು ಪಾಸ್ ಕೋಡ್ ನೋಂದಾಯಿಸಲು ಹೇಳುತ್ತದೆ. ಇದೇ ನಿಮ್ಮ ಪಾಸ್ ವರ್ಡ್. ಇದನ್ನು ಭವಿಷ್ಯದ ಎಲ್ಲ ವ್ಯವಹಾರಗಳಲ್ಲೂ ಉಪಯೋಗಿಸಬೇಕು. ಈಗ ನಿಮ್ಮ ಹೆಸರಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ಆಧಾರಿತ ಒಂದು ವರ್ಚುವಲ್ ಐಡಿ ತೆರೆದುಕೊಳ್ಳುತ್ತದೆ. ನಿಮ್ಮ ಮೊಬೈಲ್ ಸಂಖ್ಯೆ 9343232321 ಆಗಿದ್ದರೆ ನಿಮ್ಮ ವಿಳಾಸ 9343232321UPI ಎಂದಾಗುತ್ತದೆ. (ಇದನ್ನು ನಿಮಗೆ ಬೇಕಾದಂತೆ ನಿಮ್ಮ ಹೆಸರಿಗೆ ಬದಲಿಸಲೂಬಹುದು) ಇದು ನಿಮ್ಮನ್ನು ನೀವು ಈ ಯುಪಿಐ ಪದ್ಧತಿಯಲ್ಲಿ ಗುರುತಿಸಿಕೊಳ್ಳಲು ಇರುವ ವರ್ಚುವಲ್ ವಿಳಾಸ. ಒಬ್ಟಾತನ ಕೈಯಲ್ಲಿ ಎಷ್ಟೇ ಬ್ಯಾಂಕ್ ಖಾತೆಗಳಿದ್ದರೂ ಈ ಪದ್ಧತಿಯಲ್ಲಿ ಗುರುತಿಸಿಕೊಳ್ಳಲು ಹಾಗೂ ವ್ಯವಹರಿಸಲು ಈ ಒಂದೇ ವರ್ಚುವಲ್ ವಿಳಾಸ ಸಾಕಾಗುತ್ತದೆ. ಆತನ ಯಾವುದೇ ಬ್ಯಾಂಕ್ ಖಾತೆಯನ್ನು ಕೂಡ ಒಂದರ ಬದಲಾಗಿ ಒಂದರಂತೆ ಆ ಒಂದು ವಿಳಾಸಕ್ಕೆ ತಗಲಿಸಿಕೊಳ್ಳಬಹುದಾಗಿದೆ. (ಆದರೆ ಎಲ್ಲ ಖಾತೆಗಳನ್ನೂ ಏಕಕಾಲಕ್ಕೆ ನಮೂದಿಸಲು ಇಲ್ಲಿ ಬರುವುದಿಲ್ಲ) ವರ್ಚುವಲ್ ವಿಳಾಸಕ್ಕೆ ನಿಮ್ಮ ಖಾತೆ ತಗಲಿಸಿಕೊಳ್ಳಲು ನಿಮ್ಮ ಬ್ಯಾಂಕ್ ಹೆಸರನ್ನು ಒತ್ತಿದರೆ ಸಾಕು. ಮೊಬೈಲ್ ನಂಬರ್ ತಗಲಿಸಿಕೊಂಡ ಬ್ಯಾಂಕ್ ಖಾತೆಯನ್ನು ಅದುವೇ ಹುಡುಕಿ ನಿಮ್ಮ ಭೀಮ್ ಖಾತೆಯಲ್ಲಿ ನಮೂದಿಸಿಕೊಳ್ಳುತ್ತದೆ. ಈಗ ತಂತ್ರಾಂಶ ನಿಮ್ಮ ಮೊಬೈಲ್ ನಂಬರಿಗೆ ಒಂದು ಎಂ-ಪಿನ್ ನಂಬರ್ ಕಳುಹಿಸುತ್ತದೆ. ಅದನ್ನು ನೋಡಿಕೊಂಡು ಹಾಗೆಯೇ ಯುಪಿಐ ಒಳಗಡೆ ನಮೂದಿಸಿ ನಿಮ್ಮ ಗುರುತನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲಿಗೆ ರಿಜಿಸ್ಟ್ರೇಶನ್ ಮುಕ್ತಾಯವಾಗುತ್ತದೆ.
Related Articles
Advertisement
ವ್ಯವಹಾರ: ಭೀಮ್ ಆ್ಯಪ್ ಒಳಗಡೆ ಮುಖ್ಯವಾಗಿ 3 ವ್ಯವಹಾರಗಳ ಆಯ್ಕೆಗಳನ್ನು ನೀಡಲಾಗಿದೆ.1. ದುಡ್ಡು ಪಾವತಿ ಮಾಡುವುದು
2. ದುಡ್ಡು ಪಡೆದುಕೊಳ್ಳುವುದು ಹಾಗೂ
3. QR Code ಮೂಲಕ ಪಾವತಿ/ಪಡಕೊಳ್ಳುವುದು ಈಗ ಈ ಪಾವತಿಗಳ ಬಗ್ಗೆ ತುಸು ವಿವರವಾಗಿ ತಿಳಿದುಕೊಳ್ಳೋಣ:
1. ದುಡ್ಡು ಪಾವತಿ: ದುಡ್ಡು ಪಾವತಿ ಮಾಡುವ ಸಂದರ್ಭ ಮೊತ್ತ ಮೊದಲು ಅಂತರ್ಜಾಲ ಲಭ್ಯವಿರುವೆಡೆ ನಿಮ್ಮ ಆಂಡ್ರಾಯ್ಡ್ ಫೋನ್ ಮೂಲಕ ನಿಮ್ಮ ತಂತ್ರಾಂಶವನ್ನು ಲಾಗ್ – ಇನ್ ಆಗಿ ಪ್ರವೇಶಿಸಬೇಕು. ಆ ಬಳಿಕ ‘ಸೆಂಡ್’ ಎಂಬ ಆಯ್ಕೆಯನ್ನು ಒತ್ತಿ. ಅದು ನಿಮ್ಮ ಸದ್ಯಕ್ಕೆ ನಮೂದಿಸಲ್ಪಟ್ಟ ಬ್ಯಾಂಕ್ ಖಾತೆಯಿಂದ ದುಡ್ಡು ಕಳುಹಿಸುತ್ತದೆ. ನಿಮ್ಮ ಬೇರೆ ಖಾತೆಯಿಂದ ದುಡ್ಡು ಕಳುಹಿಸಬೇಕಾಗಿದ್ದಲ್ಲಿ ಭೀಮ್ ಒಳಗಡೆ ಮೊದಲು ನಿಮ್ಮ ಬ್ಯಾಂಕ್ ಬದಲಾಯಿಸಿಕೊಳ್ಳಬೇಕು. ಆಮೇಲೆ ಯಾವ ಖಾತೆಗೆ ದುಡ್ಡು ಪಾವತಿಯಾಗಬೇಕು ಎನ್ನುವುದನ್ನು ಪಡೆಯುವಾತನ ವರ್ಚುವಲ್ ಎಡ್ರೆಸ್ ಸಮೂದಿಸುವ ಮೂಲಕ ದಾಖಲಿಸಬೇಕು. ಆತನ ವರ್ಚುವಲ್ ಎಡ್ರೆಸ್ ಇಲ್ಲದೇ ಇದ್ದರೆ ಅಲ್ಲೇ ಮೇಲೆ ಇರುವ 3 ಬಿಂದುಗಳನ್ನು ಒತ್ತಿ ಅಲ್ಲಿ ಬ್ಯಾಂಕ್ ಖಾತೆ ಹಾಗೂ IFSC ಕೋಡ್ ನಮೂದಿಸಿರಿ. ಬಳಿಕ, ಪಾವತಿಸಬೇಕಾದ ಮೊತ್ತವನ್ನೂ ನಮೂದಿಸಬೇಕು. ಪಾವತಿಯ ವಿಚಾರವಾಗಿ ಸೂಕ್ತ ರಿಮಾಕ್ಸ್ ಕೂಡ ಹಾಕಬಹುದು. ಆ ಬಳಿಕ ಪೇ ಬಟನ್ ಒತ್ತಿ ಕೋರಿಕೆ ದೃಡೀಕರಿಸಿದರೆ ತಂತ್ರಾಂಶ ನಿಮ್ಮ ನಾಲ್ಕಂಕಿಯ ಎಂ-ಪಿನ್ ಕೇಳುತ್ತದೆ. ಎಂ-ಪಿನ್ ನಮೂದಿಸಿ ಸಬ್ಮಿಟ್ ಒತ್ತಿದರೆ ನಿಮ್ಮ ಖಾತೆಯಿಂದ ನಮೂದಿಸಿದ ಮೊತ್ತ ಪಡಕೊಳ್ಳುವವರ ಖಾತೆಗೆ ಆ ಕೂಡಲೇ ವರ್ಗಾವಣೆಯಾಗುತ್ತದೆ. 2. ದುಡ್ಡು ಪಡೆದುಕೊಳ್ಳುವುದು: ಇದಕ್ಕಾಗಿ ತಂತ್ರಾಂಶದ ಒಳಗೆ ರಿಕ್ವೆಸ್ಟ್ ಎಂಬ ಆಯ್ಕೆ ಒತ್ತಿ ಅಲ್ಲಿ ನಿಮ್ಮ ಖಾತೆಯ ವಿವರಗಳನ್ನು (ವರ್ಚುವಲ್ ವಿಳಾಸ ಹಾಗೂ ಖಾತೆ ಸಂಖ್ಯೆ) ತುಂಬಿ ಆ ಬಳಿಕ ಯಾರಿಂದ ಹಣ ಪಡೆಯುವುದಿದೆಯೋ ಅವರ ವರ್ಚುವಲ್ ವಿಳಾಸ ಹಾಗೂ ವರ್ಗಾವಣೆ ಮೊತ್ತ ನಮೂದಿಸಬೇಕು. ನಿಮ್ಮ ಕೋರಿಕೆ ಎಷ್ಟು ಸಮಯಾವಧಿ ವರೆಗೆ ಜೀವಂತವಾಗಿರಬೇಕು ಎನ್ನುವುದನ್ನೂ ಕೂಡ ಆಯ್ದುಕೊಳ್ಳಬೇಕು. ಇದು ಸಾಮಾನ್ಯವಾಗಿ 45 ದಿನಗಳವರೆಗೆ ಇರುತ್ತದೆ. ಈ ಕೋರಿಕೆ ದೃಡೀಕರಿಸಿದರೆ ಕೋರಿಕೆ ಆ ಇನ್ನೊಬ್ಬನ ಯುಪಿಐ ಖಾತೆಯೊಳಕ್ಕೆ ಹೋಗಿ ಕೂತುಬಿಡುತ್ತದೆ. ಆತ ತನ್ನ ಖಾತೆ ತೆರೆದು ನೋಡುವಾಗ ಈ ಕೋರಿಕೆ ಆತನಿಗೆ ಕಾಣಿಸುತ್ತದೆ. ಆತ ಅದನ್ನು ಸ್ವೀಕರಿಸಲೂಬಹುದು ಅಥವಾ ತಿರಸ್ಕರಿಸಲೂಬಹುದು. ಆತನ ಆಯ್ಕೆಯಂತೆ ದುಡ್ಡು ವರ್ಗಾವಣೆಯಾಗುತ್ತದೆ ಅಥವಾ ಆಗದೇ ಇರುತ್ತದೆ. 3. QR CODE ಮೂಲಕ ಪಾವತಿ/ಪಡೆದುಕೊಳ್ಳುವುದು: ಭೀಮ್ ತಂತ್ರಾಂಶದಲ್ಲಿ ಈ ಸೌಲಭ್ಯ ಕೂಡ ಇದೆ. ಇತ್ತೀಚೆಗಿನ ದಿನಗಳಲ್ಲಿ ಕೆಲವು ಅಂಗಡಿಗಳಲ್ಲಿ ಒಂದು ಫಲಕದಲ್ಲಿ ಪಾವತಿಗಾಗಿ ಒಂದು QR code ಹಾಕಿಟ್ಟಿರುವುದನ್ನು ನೀವು ನೋಡಿರಬಹುದು. ಒಂದು ಚೌಕಾಕಾರದ ಒಳಗೆ ಇನ್ನಷ್ಟು ಚೌಕಾಕಾರದ ಆಕೃತಿಗಳುಳ್ಳ ಮಾಡರ್ನ್ ಆರ್ಟ್ ತರಹ ಕಾಣಿಸುವ ಒಂದು ಚಿತ್ರ. ಅದರೊಳಗೆ ಆ ಅಂಗಡಿಯವರ ಬ್ಯಾಂಕ್ ಖಾತೆ ವಿವರಗಳು ಹುದುಗಿರುತ್ತವೆ. ಆ ಕೋಡನ್ನು ನಿಮ್ಮ ಮೊಬೈಲ್ ಫೋನ್‌ನ ಮೂಲಕ ಸ್ಕಾನ್ ಮಾಡಿ ದುಡ್ಡು ಪಾವತಿಸುವುದು ಅದರ ಉದ್ಧೇಶವಾಗಿದೆ. ಯುಪಿಐ ತಂತ್ರಾಂಶದ ಮೂಲಕ ಅಂತಹ QR codeಗಳನ್ನೂ ಸಹ ನಿಮ್ಮ ಮೊಬೈಲ್ ಮೂಲಕ ಸ್ಕಾನ್ ಮಾಡಿ ಅಂಗಡಿಯವರ ಬ್ಯಾಂಕ್ ಖಾತೆಗೆ ದುಡ್ಡು ಪಾವತಿಸಬಹುದು. ಅಂತೆಯೇ ರಿಜಿಸ್ಟೇಶನ್ ವೇಳೆಯೇ ಸಿದ್ಧವಾಗಿ ನಿಮ್ಮ ಭೀಮ್ ಖಾತೆಯ ಒಳಗೆ ಹುದುಗಿರುವ ನಿಮ್ಮದೇ ಆದಕ್ಕೆ Code ಮೂಲಕ ನೀವು ದುಡ್ಡು ಪಡಕೊಳ್ಳುವುದೂ ಸಾಧ್ಯ. ಇವೆಲ್ಲ ಅಲ್ಲದೆ ಪಾಸ್ ಕೋಡ್ ಬದಲಾವಣೆ, ಹೆಸರು ಬದಲಾವಣೆ, ಹೊಸ ಬ್ಯಾಂಕ್ ಖಾತೆ ಲಿಂಕ್ ಮಾಡುವಿಕೆ, ಬ್ಯಾಲೆನ್ಸ್ ವಿಚಾರಣೆ ಈ ಆ್ಯಪ್ ಒಳಗಡೆ ಕಾಣಸಿಗುತ್ತವೆ. ಶುಲ್ಕ: ಭೀಮ್ ಅಥವಾ ಯಾವುದೇ ಯುಪಿಐ ತಂತ್ರಾಂಶದ ವತಿಯಿಂದ ಈ ವ್ಯವಹಾರಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಇದು ಜನಸಾಮಾನ್ಯರಿಗೆ ಡಿಜಿಟಲ್ ವ್ಯವಹಾರಕ್ಕೆ ತಯಾರಿ ಮಾಡಿದ ಉಚಿತ ಸೇವೆ. ಆದರೆ ನಿಮ್ಮ ಬ್ಯಾಂಕ್ ಯಾವತ್ತಿನಂತೆ ದುಡ್ಡು ವರ್ಗಾವಣೆಗೆ ಸಣ್ಣ ಐಎಂಪಿಎಸ್ ಸೇವಾ ಶುಲ್ಕ ಹೊರಿಸುವ ಸಾಧ್ಯತೆಗಳು ಇವೆ. ಅದು ಭೀಮ್/ಯುಪಿಐ ವ್ಯಾಪ್ತಿಯಿಂದ ಹೊರಗಿನದ್ದು. – ಜಯದೇವ ಪ್ರಸಾದ ಮೊಳೆಯಾರ ; jayadev.prasad@gmail.com