Advertisement

371ನೇ ಕಲಂ ಸಮರ್ಪಕ ಜಾರಿಗೊಳಿಸಿ

11:58 AM Dec 20, 2018 | |

ಕಲಬುರಗಿ: ಹೈದ್ರಾಬಾದ-ಕರ್ನಾಟಕ ಭಾಗಕ್ಕೆ ಜಾರಿಯಾಗಿರುವ ವಿಶೇಷ ಸ್ಥಾನಮಾನ 371 (ಜೆ)ನೇ ಕಲಂನ್ನು ಸಂಪೂರ್ಣ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ಅಹಿಂದ ಚಿಂತರ ವೇದಿಕೆ ವತಿಯಿಂದ ಬುಧವಾರ
ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

371 (ಜೆ)ನೇ ಕಲಂ ಜಾರಿಯಾಗಿ ಐದು ವರ್ಷಗಳಾಗುತ್ತಿದೆ. ಆದರೂ, ಸಂವಿಧಾನ ಬದ್ಧವಾಗಿ ಅನುಷ್ಠಾನಗೊಳಿಸದೇ ಈ ಭಾಗದ ಅಭಿವೃದ್ಧಿಯಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ. ಈ ಭಾಗದಲ್ಲಿ ನೇಮಕಾತಿ ಬಗ್ಗೆ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಆರೋಪಿಸಿದರು. 

ಇತ್ತೀಚೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿಗಳು ಆಯಾ ಇಲಾಖೆಯಲ್ಲಿ ಖಾಲಿ ಇರುವ ಮಾಹಿತಿ ಪಟ್ಟಿ ಕಳಿಸಿಕೊಟ್ಟಿದ್ದಾರೆ. ಇದರ ಬದಲು ಆಯಾ ಇಲಾಖೆಯಲ್ಲಿ 371 (ಜೆ)ನೇ ಕಲಂ ಅನುಷ್ಠಾನವಾಗಿರುವ ಬಗ್ಗೆ ಪರಿಶೀಲನೆ ನಡೆಸಿ, ಅನುಷ್ಠಾನ ಪಾಲಿಸದೇ ಇರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಖಾಲಿ ಹುದ್ದೆಗಳ ಪಟ್ಟಿ ಸಂಪೂರ್ಣ ದೋಷ ಪೂರಿತವಾಗಿದ್ದು, ಅಂಕಿ-ಅಂಶಗಳು ವಾಸ್ತವಕ್ಕೆ ದೂರವಾಗಿವೆ ಎಂದು ದೂರಿದರು.

ಹೈ.ಕ ಪ್ರದೇಶಾಭಿವೃದ್ಧಿ ಮಂಡಳಿಗೆ ಇಲ್ಲಿಯವರೆಗೆ ಘೋಷಿಸಿದ ಅನುದಾನ ಬಿಡುಗಡೆಗೊಳಿಸದೇ ಸರ್ಕಾರ ವಂಚಿಸುತ್ತ ಬಂದಿದೆ. ಕಳೆದ 2017-2018ನೇ ಸಾಲಿನ ಬಜೆಟ್‌ನಲ್ಲಿ 1,500 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಿ, ಮಂಡಳಿಗೆ ಒಂದು ಸಾವಿರ ಕೋಟಿ ರೂ. ಮಾತ್ರ ನಿಗದಿಗೊಳಿಸಿದ್ದು ಖಂಡನೀಯ ಎಂದು ಪ್ರತಿಭಟನಾಕಾರರು
ಕಿಡಿಕಾರಿದರು. 

371 (ಜೆ) ಕಲಂ ನಿಯಮದಂತೆ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ನೇಮಕಾತಿ ಮಾಡಬೇಕು ಮತ್ತು ಎಚ್‌ಕೆಆರ್‌ಡಿಬಿಗೆ ನಿಗದಿ ಪಡಿಸಿದ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವೇದಿಕೆ
ರಾಜ್ಯಾಧ್ಯಕ್ಷ ಸಾಯಿಬಣ್ಣ ಜಮಾದಾರ, ರಮೇಶ ಹಡಪದ, ಸಂಜು ಹೊಡಲಕರ, ರಾಚಣ್ಣ ಯಡ್ರಾಮಿ, ಇಸ್ಮಾಯಿಲ್‌ ಮಾಲಗತ್ತಿ, ರಾಜು ನೂಲಕರ, ವಿಶ್ವನಾಥ ಮದನಕರ, ಕೈಲಾಶ್‌ ಮೇಟಿ ಮುಂತಾದವರು ಪಾಲ್ಗೊಂಡಿದ್ದರು.

Advertisement

ಸರ್ಕಾರಕ್ಕೆ ಪ್ರಸ್ತಾವನೆ ಪಶು ಸಂಗೋಪನಾ ಇಲಾಖೆ ನಾಲ್ಕೂ ಡಿಡಿ ಹುದ್ದೆ ಖಾಲಿ ಇರುವ ಕುರಿತು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಸೇರಿದಂತೆ ಜಿಲ್ಲೆಯಲ್ಲಿ ಖಾಲಿ ಇರುವ ಜಿಲ್ಲಾ ಮಟ್ಟದ ಉಪನಿರ್ದೇಶಕ ಹುದ್ದೆಗಳ ನಿಯೋಜನೆ ಸಂಬಂಧ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದೆ.
 ಆರ್‌. ವೆಂಕಟೇಶಕುಮಾರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next