ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (370 ನೇ ವಿಧಿ) ವನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಲಿರುವ ಅರ್ಜಿಗಳ ವಿಚಾರಣೆಯ ತೀರ್ಪು ಇಂದು ಹೊರಬರುವ ಸಾಧ್ಯತೆ ಇದೆ.
ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಆಜಾದ್, ಕಾಶ್ಮೀರ ಟೈಮ್ಸ್ ನ ಕಾರ್ಯನಿರ್ವಾಹಕ ಸಂಪಾದಕ ಅನುರಾಧಾ ಭಾಸಿನ್ ಮತ್ತು ಇತರ ಕೆಲವರು ಕಾಶ್ಮೀರದಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲದೆ ‘ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧಗಳು ಮೂಲಭೂತ ಹಕ್ಕುಗಳ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ‘ ಎಂದು ತಿಳಿಸಿದ್ದರು. ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ಮತ್ತು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿರುವ ತ್ರಿಸದಸ್ಯಪೀಠ ತೀರ್ಪು ನೀಡುವ ಸಾಧ್ಯತೆ ಇದೆ ಎಂದು ಮಾಧ್ಯಮದ ವರದಿ ತಿಳಿಸಿದೆ
ರಾಜ್ಯದ ವಿಶೇಷ ಸ್ಥಾನಮಾನ ರದ್ದತಿಯಿಂದ ಆಗಬಹುದಾದ ಪ್ರತಿಭಟನೆಗಳನ್ನು ನಿಯಂತ್ರಿಸುವ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದ ಮೂವರು ಮಾಜಿ ಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮತ್ತು ಮೆಹಬೂಬಾ ಮುಫ್ತಿ ಅವರಿಗೆ ಗೃಹ ಬಂಧನ ವಿಧಿಸಲಾಗಿತ್ತು. ಜೊತೆಗೆ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಮಾಡುವ ಒಂದು ದಿನದ ಮೊದಲು ಮೊಬೈಲ್ ಅಂತರ್ಜಾಲ ಸೇವೆಯನ್ನು ರದ್ದುಗೊಳಿಸಲಾಗಿತ್ತು.
ಸದ್ಯ ಹೆಚ್ಚಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆಯಾದರೂ ಪ್ರಮುಖ ರಾಜಕಾರಣಿಗಳ ಬಂಧನ ಮುಂದುವರಿದಿದೆ. ಡಿಸೆಂಬರ್ 31 ರಂದು ಕಾಶ್ಮೀರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನೆಟ್ ಬ್ರಾಡ್ ಬ್ಯಾಂಡ್ ಸೇವೆ ಮತ್ತು ಮೊಬೈಲ್ ಗಳಲ್ಲಿ ಕಿರು ಸಂದೇಶವನ್ನು ಆರಂಭಿಸಲಾಗಿತ್ತು. ಮೊಬೈಲ್ ಸೇವೆ ಸಡಿಲಿಸಲಾಗಿದೆಯಾದರೂ ಅಂತರ್ಜಾಲ ಕಡಿತ ಮುಂದುವರಿದಿದೆ.
ಆದರೇ ಕಳೆದ ನವೆಂಬರ್ ನಲ್ಲಿ ನಡೆದ ವಿಚಾರಣೆಯ ವೇಳೆ ಕೇಂದ್ರವು ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು.