ಹೊಸದಿಲ್ಲಿ: ರಾಷ್ಟ್ರೀಯ ಶೈಕ್ಷಣಿಕ ಮತ್ತು ತರಬೇತಿ ಕೌನ್ಸಿಲ್ (ಎನ್‌ಸಿಇಆರ್‌ಟಿ), 12ನೇ ತರಗತಿಯ ಸಮಾಜ ಪಠ್ಯದಲ್ಲಿರುವ “Politics in India since Independence’ ಎಂಬ ಪಾಠವನ್ನು ಪರಿಷ್ಕರಣೆಗೊಳಿಸಿದೆ.
ಅದರಲ್ಲಿ, ಕಾಶ್ಮೀರದ ವಿಶೇಷ ಸ್ಥಾನ ಹಿಂಪಡೆಯಲು ಕಾರಣವಾದ ಸಂವಿಧಾನದ 370ನೇ ಕಲಂ ರದ್ದು ವಿಷಯವನ್ನು ಸೇರಿಸಲಾಗಿದೆ.
ಆದರೆ, ಕಾಶ್ಮೀರದ ಪ್ರತ್ಯೇಕತಾವಾದವನ್ನು ಪ್ರಚುರಪಡಿಸುವ Separatism and Beyond ಎಂಬ ವಿಷಯವನ್ನು ಕೈಬಿಡಲಾಗಿದೆ. 2021-22ರ ಶೈಕ್ಷಣಿಕ ಸಾಲಿನಿಂದ ಈ ಪಠ್ಯವನ್ನು ಬೋಧಿಸಲಾಗುತ್ತದೆ.
ಕಳೆದ ವರ್ಷ ಆ. 5ರಂದು, ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿತ್ತಲ್ಲದೆ, ಜಮ್ಮು ಕಾಶ್ಮೀರವನ್ನು, ಜಮ್ಮು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿತ್ತು.
ಕೈಬಿಡಲಾಗಿರುವ ವಿಷಯದಲ್ಲಿ, “ಕಾಶ್ಮೀರದಲ್ಲಿ ಮೂರು ಬಗೆಯ ಗುಂಪುಗಳಿದ್ದವು. ಒಂದು ಗುಂಪು ಕಾಶ್ಮೀರವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿಸಬೇಕು ಎಂಬ ಗುರಿಯನ್ನು ಹೊಂದಿದ್ದರೆ, ಮತ್ತೊಂದು ಗುಂಪು ಕಾಶ್ಮೀರವನ್ನು ಪಾಕಿಸ್ಥಾನದೊಂದಿಗೆ ಸೇರಿಸುವ ಇಂಗಿತ ಹೊಂದಿತ್ತು.
ಮಗದೊಂದು ಗುಂಪು, ಕಾಶ್ಮೀರವನ್ನು ಭಾರತದ ಸ್ವತಂತ್ರ ರಾಜ್ಯವನ್ನಾಗಿಸಬೇಕು ಎಂಬ ಇರಾದೆ ಹೊಂದಿತ್ತು” ಎಂಬ ಸಾಲುಗಳಿವೆ.