Advertisement

126ನೇ ತಿದ್ದುಪಡಿಯಲ್ಲಿ ಮೂಡಿಬಂದ ವಿಧಿ ಬಿಂದುಗಳು

10:11 AM Dec 21, 2019 | sudhir |

ಸಾಂವಿಧಾನಿಕ ಪಟ್ಟದಿಂದ ಕಳಚಿಕೊಳ್ಳಲಿದೆ ಆಂಗ್ಲೋ-ಇಂಡಿಯನ್ನರಿಗೆ ಸಂಸತ್ತಿನಲ್ಲಿ ನೀಡಲಾಗುವ ಮೀಸಲಾತಿ. ನಮ್ಮ ಸಂಖ್ಯೆ ವಿಶ್ವದಾದ್ಯಂತ 5 ಲಕ್ಷ, ಭಾರತದಲ್ಲಿ 2 ಲಕ್ಷ’ ಎಂದು ರಾಜ್ಯ ಸಭೆಯಲ್ಲಿ ಡೆರಿಕ್‌ ಒಬ್ರಿಯನ್‌ ವಾದಿಸಿದ್ದರು. ಆದರೂ, ಈ ತಿದ್ದುಪಡಿಗೆ ತಡೆಯೊಡ್ಡುವಲ್ಲಿ ಅವರಿಗೆ ನೆರವು ಉಭಯ ಸದನಗಳಲ್ಲೂ ದೊರಕಲಿಲ್ಲ.

Advertisement

“ನಮ್ಮ ದೇಶದ ಸಂವಿಧಾನ ನಿಂತ ನೀರಿನಂತಾಗಬಾರದು. ಬದಲಾಗಿ ಅದು ಚಲಿಸುವ ಸಲಿಲದಂತಿರಬೇಕು’. ಇದು ನಮ್ಮ ಸಂವಿಧಾನಕರ್ತರ ಮನದ ಮಹದಾಸೆಯಾಗಿತ್ತು. ಅದಕ್ಕಾಗಿಯೇ ಮುಂದಿನ ಪೀಳಿಗೆಗಳ ಆಶೋತ್ತರಗಳು ಪ್ರತಿಫ‌ಲಿಸುವ ತೆರದಲ್ಲಿ 368ನೇ ವಿಧಿಯಲ್ಲಿ ತಿದ್ದುಪಡಿಗಳ ಬಗೆಗೆ ಸಾಧ್ಯತೆಯ ಹೆಬ್ಟಾಗಿಲು ತೆರೆಯಲಾಗಿದೆ. ಇದರ ಅನ್ವಯ ಡಿ.10ರಂದು ಲೋಕಸಭೆ ಹಾಗೂ ಡಿ.12ರಂದು ರಾಜ್ಯ ಸಭೆ ಅನುಮೋದಿಸಿದ 126ನೇ ಸಾಂವಿಧಾನಿಕ ತಿದ್ದುಪಡಿಯ ಮಹತ್ವಪೂರ್ಣ ಅಂಶವನ್ನು ತುಂಬಿ ನಿಂತಿದೆ.

1) ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡಗಳಿಗೆ ಕೇಂದ್ರ ಶಾಸಕಾಂಗ ಹಾಗೂ ರಾಜ್ಯ ವಿಧಾನ ಮಂಡಳಿಗಳಲ್ಲಿ “ರಿಸರ್ವೇಶನ್‌’ ಇನ್ನೂ 10 ವರ್ಷಗಳ ಕಾಲ ಮುಂದುವರಿಕೆ. ಹಾಗೂ…

2) ಆಂಗ್ಲೋ – ಇಂಡಿಯನ್‌ ಸಮುದಾಯದ “ರಿಸರ್ವೇಶನ್‌’ ಸ್ಥಗಿತಗೊಳಿಸುವಿಕೆ.

ಹಿಂದುಳಿದ ಜಾತಿ, ಪಂಗಡಗಳಿಗೆ ಯಾವುದೇ “ಮೀಸಲಾತಿ’ ಮೂಲ ಸಂವಿಧಾನ 1950 ಜನವರಿ 26ರಂದು ಲೋಕಾರ್ಪಣೆ ಆದಾಗ ಇರಲೇ ಇಲ್ಲ.

Advertisement

ಮುಂದೆ ಅಂದಿನ ಮದ್ರಾಸ್‌ ಪ್ರಾಂತ್ಯದಲ್ಲಿ ಚಂಪಕಮ್‌ ದೊರೈರಾಜನ್‌ ಮೊಕದ್ದಮೆ ಹಾಗೂ ಶ್ರೀನಿವಾಸನ್‌ ಮೊಕದ್ದಮೆಗಳಲ್ಲಿ ಸ್ವಾತಂತ್ರ್ಯಪೂರ್ವದ ಬ್ರಿಟಿಶ್‌ ಸರಕಾರದ “ಜಾತ್ಯಾಧಾರಿತ ಸರಕಾರಿ ಕಾಯಿದೆ’ಯ ಜಾತಿವಾರು ಮೀಸಲಾತಿ “ಸಂವಿಧಾನದ ಸಮಾನತೆ ಹಕ್ಕಿಗೆ ವಿರುದ್ಧ’ ಎಂಬ ಸರ್ವೋಚ್ಚ ನ್ಯಾಯಾಲಯ ತೀರ್ಪು ಹೊರಹೊಮ್ಮಿತು. ಆಗ ಎಚ್ಚೆತ್ತುಕೊಂಡ ರಾಜಕಾರಣಿಗಳು “ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜಾತಿ, ಬುಡಕಟ್ಟು , ವರ್ಗಗಳಿಗೆಂದು ಕೇವಲ 10 ವರ್ಷಗಳ ಸೀಮಿತ ಕಾಲಮಿತಿಯಲ್ಲಿ ಮೀಸಲಾತಿಯನ್ನು’ 1951ರ ಪ್ರಪ್ರಥಮ ತಿದ್ದುಪಡಿಯಲ್ಲಿ ಜಾರಿಗೊಳಿಸಿದರು.

ಮುಂದೆ 27, 77, 85- ಹೀಗೆ ಸರಣಿ ತಿದ್ದುಪಡಿಗಳು ಒಂದೆಡೆ ಮೀಸಲಾತಿಯ ಕಾಲಮಿತಿಯನ್ನು ಇನ್ನೊಂದೆಡೆ ಜಾತಿ, ಉಪಜಾತಿಗಳ ಸೇರ್ಪಡೆಯ ಭರಪೂರ ಪ್ರಕ್ರಿಯೆಯನ್ನು, ಮತ್ತೂಂದೆಡೆ ಸರಕಾರಿ ಉದ್ಯೋಗ ಇತ್ಯಾದಿ ಹೊಂದಿದ ಬಳಿಕ ಆಂತರಿಕವಾಗಿ ಮೇಲ್ದರ್ಜೆಗೆ ಏರಿಸುವಲ್ಲಿಯೂ ಆದ್ಯತೆ. ಹೀಗೆ ಬಹುಮುಖ ಪ್ರಕ್ರಿಯೆಗೆ ನಾಡಿನಾದ್ಯಂತ ಚಾಲನೆ ತಂದವು. ಈ ತೆರನಾದ ಶಾಸಕಾಂಗದ ಮೀಸಲಾತಿಯ ಕಾಲಮಿತಿ ಇದೇ 25 ಜನವರಿ 2020ಕ್ಕೆ ಮುಕ್ತಾಯಗೊಳ್ಳುವ ನೆಲೆಯಲ್ಲಿ ಪುನಃ 10 ವರ್ಷಗಳ ಕಾಲ, ಅಂದರೆ 25 ಜನವರಿ 2030ರವರೆಗೆ ಮುಂದುವರಿಸಲಾಗಿದೆ. ಹಾಗಾಗಿ, “ಮೋದಿ ಸರಕಾರ ಮೀಸಲಾತಿಗೆ ತಡೆ ಒಡ್ಡುವುದೇ’ ಎಂಬ ಆತಂಕದ ಮೋಡ ಸರಿದಿದೆ. ಈ ಬಗ್ಗೆ, ಪ್ರಚಲಿತ ಪೌರತ್ವ ತಿದ್ದುಪಡಿ ಕಾಯಿದೆಯ ಬಗೆಗೆ ಅಪಪ್ರಚಾರ, ಕಿಚ್ಚು ಹಚ್ಚುವ ಮಂದಿಗೆ ಈ ಹೆಜ್ಜೆಗಾಗಿ ಒಂದಿನಿತು ಥ್ಯಾಂಕ್ಸ್‌ ಹೇಳುವ ವ್ಯವಧಾನವೂ ಇಲ್ಲ.

ಈ ಮಸೂದೆಯ ಇನ್ನೊಂದು ಪ್ರಮುಖ ಅಂಶ, ಬ್ರಿಟಿಶ್‌ಶಾಹಿತ್ವದ ಪಳೆಯುಳಿಕೆಯಂತೆ ಸಂವಿಧಾನದ ಪುಟಗಳಲ್ಲಿ ಸೇರಿಕೊಂಡ ಆಂಗ್ಲೋ- ಇಂಡಿಯನ್‌ ಮಂದಿಗೆ ನೇಮಕಾತಿಯ ಮೂಲಕ ಶಾಸಕಾಂಗದಲ್ಲೇ ಮೀಸಲಾತಿ. 60ರ ದಶಕದಲ್ಲೇ ಸಂವಿಧಾನ ಅಧ್ಯಯನದ ವಿದ್ಯಾರ್ಥಿಯಾಗಿದ್ದಾಗಲೇ, “ಜಮ್ಮು – ಕಾಶ್ಮೀರಕ್ಕೆ ಅನ್ವಯಿಸುವ 370ನೇ ವಿಧಿ’, ಅದೇ ರೀತಿ ಆಂಗ್ಲೋ – ಇಂಡಿಯನ್‌ರಿಗೆ ಮೀಸಲಾತಿಯ 331 ಹಾಗೂ 333ನೇ ವಿಧಿಗಳು ಅಚ್ಚರಿ, ಆತಂಕ ಮೂಡಿಸಿದ್ದವು. ಈಗಾಗಲೇ ಇತಿಹಾಸದ ಒಡಲು ಸೇರಿದ 370ನೇ ವಿಧಿಯಂತೆ, ಈ “ಕಾಲ ಬಾಹಿರ ಮೀಸಲಾತಿ’ ಎನ್ನುವ ತೆರದಲ್ಲಿ ಸಾಂವಿಧಾನಿಕ ಪಟ್ಟದಿಂದ ಕಳಚಿಕೊಳ್ಳಲಿದೆ. 2011ರ ಜನಗಣತಿಯ ಪ್ರಕಾರ ಇಡೀ ರಾಷ್ಟ್ರದಲ್ಲಿ ಆಂಗ್ಲೋ – ಇಂಡಿಯನ್‌ ಜನಸಂಖ್ಯೆ ಕೇವಲ 296. ಬ್ರಿಟಿಶ್‌ ಅಧಿಕಾರಿ ವರ್ಗ ಭಾರತದ ವಧುಗಳನ್ನು ವರಿಸಿ, ಅವರಲ್ಲಿನ ಸಂತಾನವನ್ನು ಸಂವಿಧಾನ ಸಭೆ ವಿಶಿಷ್ಟವಾಗಿ ಗುರುತಿಸಿ, ಈ ತೆರದಲ್ಲಿ ಸಮ್ಮಾನಿಸಿದ್ದೂ ಒಂದು ಸೋಜಿಗ. “ನಮ್ಮನ್ನು ಕ್ರೈಸ್ತ ಜನಾಂಗದ ಜನಗಣತಿಯಲ್ಲೇ ಸೇರಿಸಿದ್ದಾರೆ… ನಮ್ಮ ಸಂಖ್ಯೆ ವಿಶ್ವದಾದ್ಯಂತ 5 ಲಕ್ಷ ಹಾಗೂ ಭಾರತದಲ್ಲಿ ಸುಮಾರು 2 ಲಕ್ಷ ‘ ಎಂಬುದಾಗಿ ರಾಜ್ಯ ಸಭೆಯಲ್ಲಿ ಡೆರಿಕ್‌ ಒ ಬ್ರಿಯನ್‌ ವಾದಿಸಿದ್ದರು. ಆದರೂ, ಈ ತಿದ್ದುಪಡಿಗೆ ತಡೆಯೊಡ್ಡುವಲ್ಲಿ ಅವರಿಗೆ ನೆರವು ಉಭಯ ಸದನಗಳಲ್ಲೂ ದೊರಕಲಿಲ್ಲ. ಹಾಗಾಗಿ, 2 ಸಂಸದರ ಸೀಟು, ಹಾಗೂ 13 ಮಂದಿ ವಿಧಾನ ಸಭೆಗಳ ಶಾಸಕರಿಗೆ ಮುಂದಿನ ದಿನಗಳಲ್ಲಿ ಸಭಾಸೀನತೆ ಹಾಗೂ ಕ್ರಮವಾಗಿ ರಾಷ್ಟ್ರಾಧ್ಯಕ್ಷರಿಂದ ಹಾಗೂ ರಾಜ್ಯಪಾಲರಿಂದ ನೇಮಕಾತಿ ಎಲ್ಲವೂ ಸಾಧ್ಯವಿಲ್ಲ.

ಸೈನ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಈ ಜನಾಂಗಕ್ಕೆ ಸಂಸತ್ತಿನಲ್ಲಿ ಕೃತಜ್ಞತೆ ಅರ್ಪಿಸಲಾಯಿತು. ಕೇವಲ, ಅನಾಯಾಸವಾಗಿ ಶಾಸನ ಸಭೆಗಳಲ್ಲಿ ಬಹುಮತಕ್ಕೆ ಪೂರಕ ಹೇಳಲು ಈ ಸುದೀರ್ಘ‌ ಕಾಲಾವಧಿಯಲ್ಲಿ ಮುಂದೆ ಬಾರದೇ ಇದ್ದುದೇ ಒಂದು ವಿಪರ್ಯಾಸ. ಇದೀಗ ಈ ಸ್ವಾಗತಾರ್ಹ ಹೆಜ್ಜೆ ನವೀನತೆಯನ್ನು ನಮ್ಮ ರಾಜ್ಯಾಂಗ ಘಟನೆಯ ಪುಟಗಳಿಗೆ ಮೂಡಿಸಿದೆ. ಆದರೆ ಉಭಯ ಸದನಗಳಿಂದ ಈ ಮಸೂದೆ ತೇರ್ಗಡೆ ಆದರೂ, ಈ 126ನೇ ತಿದ್ದುಪಡಿ ಜಾರಿಗೆ ಬರಲು 50 ಪ್ರತಿಶತ ವಿಧಾನಸಭೆಗಳ ಅನುಮೋದನೆ ಹಾಗೂ ರಾಷ್ಟ್ರಪತಿಯವರ ಅಂಕಿತ ಅತ್ಯಗತ್ಯ. ಆಗ ಈ ಮೇಲಿನ ಎರಡು ಬದಲಾವಣೆಗಳನ್ನು ತುಂಬಿ ನಿಂತು 126ನೇ ಮಸೂದೆ 104ನೇ ತಿದ್ದುಪಡಿಯಾಗಿ ಹೊರಹೊಮ್ಮಲಿದೆ.

– ಡಾ| ಪಿ. ಅನಂತಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next