Advertisement

ಪ್ರೋತ್ಸಾಹದಿಂದ ಕಲೆ, ಕಲಾವಿದನ ಉಳಿವು

08:51 PM Jan 29, 2020 | Lakshmi GovindaRaj |

ತುಮಕೂರು: ಜನರಿಗೆ ಹತ್ತಿರವಾಗುವ ಉದ್ದೇಶದಿಂದ ರಂಗ ಚಟುವಟಿಕೆಗಳು ನಡೆಯುತ್ತಿದ್ದು, ಗ್ರಾಮೀಣ ಕಲಾ ಚಟುವಟಿಕೆ ಉಳಿಸುವ ಕೆಲಸ ಮಾಡಬೇಕಿದೆ ಎಂದು ತಾಲೂಕು ಕಸಾಪ ಅಧ್ಯಕ್ಷೆ ಡಾ.ಬಿ.ಸಿ.ಶೈಲಾ ನಾಗರಾಜು ಅಭಿಪ್ರಾಯಪಟ್ಟರು. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗತಂಡ ದಿಂದ ಹಮ್ಮಿಕೊಂಡಿದ್ದ “ನಾವೆಲ್ಲಿದ್ದೇವೆ?’ ನಾಟಕ ಪ್ರಯೋಗದಲ್ಲಿ ಮಾತನಾಡಿದರು.

Advertisement

ಆಧುನಿಕ ಮಾಧ್ಯಮಗಳ ವ್ಯಸನದ ನಡುವೆಯೇ ನಾಟಕಗಳು ಜನರನ್ನು ಸೆಳೆಯುತ್ತಿದೆ. ಸಾಂಸ್ಕೃತಿಕ ತಲ್ಲಣಗಳ ನಡುವೆ ನಮ್ಮನ್ನು ಜೀವಂತವಾಗಿಟ್ಟಿರುವುದು ನಾಟಕ ಕಲೆ. ನೆಲ ಮೂಲ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ನೀಡುವುದರ ಜೊತೆಗೆ ನಾಟಕ ರಂಗ ಬೆಳೆಸಬೇಕಿದೆ. ಕಲೆ ಜನರು ಆಸ್ವಾಧಿಸುವುದರಿಂದ ನಾಟಕ ರಂಗ ಉಳಿದುಕೊಂಡಿದೆ ಎಂದು ನುಡಿದರು.

ಪ್ರಾಧ್ಯಾಪಕ ಡಾ.ಗಂಗಬೈರಯ್ಯ ಮಾತನಾಡಿ, ಆರೋಗ್ಯ ಪೂರ್ಣ ಸಮಾಜ ಕಟ್ಟುವ ನಿಟ್ಟಿನಲ್ಲಿ ರಂಗಸಂಸ್ಕೃತಿ ಪ್ರಮುಖ ವಾಗಿದೆ. ನಾಟಕ ಕಲೆ ಲಲಿತ ಕಲೆಯ ಸಂಗಮ. ಎಲ್ಲಾ ಕಲೆ ಆಸ್ವಾದಿಸುವ ಏಕೈಕ ಕಲೆ ನಾಟಕ. ಕಾವ್ಯಕ್ಕಿಂತಲೂ ನಾಟಕ ರಮ್ಯವಾಗಿರುತ್ತದೆ. ಅದಕ್ಕಾಗಿಯೇ ಎಲ್ಲರನ್ನೂ ಒಳಗೊಳ್ಳುತ್ತದೆ ಎಂದು ಹೇಳಿದರು.

ಶ್ರಮ ಸಂಸ್ಕೃತಿಯ ಮೂಲವಾದ ನಾಟಕ ಹಿಂದೆ ಶೂದ್ರ ಕಲೆಯಾಗಿ, ಸಾಮಾಜಿಕವಾಗಿ ಮನ್ನಣೆ ಪಡೆದಿದ್ದರಿಂದಲೇ ಪ್ರೇಕ್ಷಕರಿಗೆ ಸಾತ್ವಿಕ ಗುಣ ಉಣಬಡಿಸುತ್ತದೆ. ಮನಸಿನ ವಿಕಾರ ಕಳೆಯುವ ಸಾಧನ ನಾಟಕ. ಸಮಾಜಮುಖೀ ಮೌಲ್ಯ ನಾಟಕ ರಂಗ ನೀಡುತ್ತಿದೆ. ಆರೋಗ್ಯ ಪೂರ್ಣ ಬದುಕು ಕಟ್ಟಿಕೊಳ್ಳಲು ಆರೋಗ್ಯ ಪೂರ್ಣ ನಾಟಕಗಳು ಅವಶ್ಯಕ. ಮನಸ್ಸಿನ ವಿಕಸನಕ್ಕೆ ನಾಟಕ ಅವಶ್ಯಕ. ರಂಗ ಕಲೆಗಳು ಉಳಿಯಬೇಕು, ಬೆಳೆಯಬೇಕು ಎಂದರು.

ಜೆಡಿಎಸ್‌ ನಗರಾಧ್ಯಕ್ಷ ಬೆಳ್ಳಿ ಲೋಕೇಶ್‌ ಮಾತನಾಡಿ, ನಾಟಕ ಕಲೆಗೆ ಪ್ರೋತ್ಸಾಹ ನೀಡುವ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಬೇಕಿದೆ. ಧಾರಾವಾಹಿ, ಸಿನಿಮಾ ಕಲಾವಿದನಿಗೆ ಜೀವನಕ್ಕೆ ದಾರಿ ಆಗಬಹುದು. ಆದರೆ ರಂಗ ಕಲೆ ನಮ್ಮ ಮೂಲ ಸಂಸ್ಕೃತಿ ನೆನಪಿಸುತ್ತದೆ ಎಂದು ತಿಳಿಸಿದರು.

Advertisement

ನಿವೃತ್ತ ಪ್ರಾಂಶುಪಾಲ ಬಿ.ಮರುಳಯ್ಯ ಮಾತನಾಡಿ, ದೃಶ್ಯ ಮಾಧ್ಯಮದಿಂದ ನಾಟಕ ಕಲೆಗೆ ಪ್ರೇಕ್ಷಕರ ಕೊರತೆಯಾಗಿದೆ. ಆದರೆ ಕಲೆಗೆ ಪ್ರೋತ್ಸಾಹ ನೀಡಿದರೆ ದೊಡ್ಡ ಮಟ್ಟದಲ್ಲಿ ಕಲಾವಿದರು ಬೆಳೆಯುತ್ತಾರೆ ಎಂದು ಹೇಳಿದರು. ವಕೀಲರಾದ ಎಂ.ನಾರಾಯಣ್‌, ಪ್ರೊ.ಜಿ.ಮೋಹನ್‌ ಕುಮಾರ್‌, ರಂಗನಿರ್ದೇಶಕ ಶಿವಕುಮಾರ್‌ ತಿಮ್ಲಾಪುರ, ಸಿದ್ದರಾಜು, ಟಿ.ಆರ್‌.ರೇವಣ್ಣ, ನಾಟಕಮನೆ ಮಹಾಲಿಂಗು, ವಿಮರ್ಶಕರಾದ ರವಿಕುಮಾರ್‌ ನೀಹ, ಡಾ.ಒ.ನಾಗರಾಜು, ನಾಗಭೂಷಣ ಬಗ್ಗನಡು ಇತರರಿದ್ದರು.

ರಂಗಪ್ರಯೋಗಕ್ಕೆ ಮೆಚ್ಚುಗೆ: ಗ್ರಾಮೀಣಾ ಕ್ರಿಯಾತ್ಮಕ ರಂಗತಂಡ ರಂಗ ಪ್ರಯೋಗಿಸಿದ “ನಾವೆಲ್ಲಿದ್ದೇವೆ’ ನಾಟಕ ನೆರೆ ಸಂತ್ರಸ್ತರ ಬದುಕು, ಬವಣೆ ಪ್ರಸ್ತುತ ಪಡಿಸಿತು. ನೆರೆ ಸಂತ್ರಸ್ತರು ಹಾಗೂ ವ್ಯವಸ್ಥೆಯೊಳಗೆ ಅನುಭವಿಸಿದ ಸಂಕಷ್ಟ ಬಿಡಿಸಿಟ್ಟರು. ದೇವರು ಹಾಗೂ ಮಾನವನ ನಡುವಿನ ಅನುಸಂಧಾನದ ಮೂಲಕ ನೆರೆ ಸಂತ್ರಸ್ತರ ಬವಣೆ ಬಿಚ್ಚಿಟ್ಟ ರಂಗಪ್ರಯೋಗಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದರು.

ನಾಟಕ ರಂಗದಲ್ಲಿ ಜಿಲ್ಲೆಗೆ ಪ್ರತ್ಯಕ ಹೆಸರಿದೆ. ಜಿಲ್ಲೆಯಲ್ಲಿ ಕಲಾವಿದರಿಗೆ ಕೊರತೆ ಇಲ್ಲ. ಆದರೆ ಪ್ರೋತ್ಸಾಹದ ಕೊರತೆ ಎದ್ದು ಕಾಣಿಸುತ್ತಿದೆ. ಒತ್ತಡದ ಜೀವನದಲ್ಲಿ ಮೂಲ ಕಲೆ ಮರೆಯುತ್ತಿದ್ದೇವೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಮನೋಭಾವನೆ ಬೆಳೆಸಿಕೊಳ್ಳಬೇಕು.
-ಬೆಳ್ಳಿ ಲೋಕೇಶ್‌, ಜೆಡಿಎಸ್‌ ನಗರಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next